ಬರ ಅಧ್ಯಯನ ತಂಡದೆದುರು ಕಣ್ಣೀರಾದ ಅನ್ನದಾತ!

By: ಚಾಮರಾಜನಗರ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ನವೆಂಬರ್ 4: ಮಳೆಯಿಲ್ಲದೆ ಬರ ಆವರಿಸಿರುವ ಜಿಲ್ಲೆಯ ಹಲವು ಪ್ರದೇಶಗಳಿಗೆ ಭೇಟಿ ನೀಡಿದ ಕೇಂದ್ರ ಬರ ಅಧ್ಯಯನ ತಂಡದ ಎದುರು ರೈತರು ಕಣ್ಣೀರಿಟ್ಟಿದ್ದಾರೆ. ಎಸ್.ಎಂ. ಕೊಲತ್ಕರ್, ಸತೀಶ್ ಕುಮಾರ್ ಕಾಂಬೋಜ್, ಎಸ್.ಸಿ. ಮೀನಾ ಅವರನ್ನೊಳಗೊಂಡ ತಂಡವು ಮೊದಲಿಗೆ ಸತ್ತೇಗಾಲದ ಮೂಲಕ ಜಿಲ್ಲೆಯ ಗಡಿಭಾಗದ ಗ್ರಾಮಗಳಿಗೆ ಭೇಟಿ ನೀಡಿತು.

ಬಳಿಕ ಕೊಳ್ಳೇಗಾಲದ ಅರಣ್ಯ ಇಲಾಖೆಯ ಪ್ರವಾಸಿ ಮಂದಿರಕ್ಕೆ ತೆರಳಿ, ಅಧಿಕಾರಿಗಳಿಂದ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಮಾಹಿತಿ ಪಡೆಯಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಬಿ.ರಾಮು ಅವರು ಜಿಲ್ಲೆಯ ಮಳೆ, ಬೆಳೆ ಹಾಗೂ ಮೇವು ಪರಿಸ್ಥಿತಿ ಬಗ್ಗೆ ಪವರ್ ಪಾಯಿಂಟ್ ಮೂಲಕ ವಿವರವಾಗಿ ಮಾಹಿತಿ ನೀಡಿದರು.

Drought study team

ಅಲ್ಲದೆ, ಕುಡಿಯುವ ನೀರಿನ ಅಭಾವ ಪರಿಸ್ಥಿತಿ ಜೊತೆಗೆ ಜಿಲ್ಲೆಯ ಅರಣ್ಯದಂಚಿನ ಗ್ರಾಮಗಳು ಹಾಗೂ ಹಾಡಿಗಳಲ್ಲಿ ತಲೆದೋರಿರುವ ಸಮಸ್ಯೆಗಳನ್ನು ಛಾಯಾಚಿತ್ರಗಳ ಮೂಲಕ ವಿವರಣೆ ನೀಡುತ್ತಾ ಮನದಟ್ಟು ಮಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿ ಹಾಗೂ ಬೆಳೆ ವಿಮೆ ಕುರಿತು ವಿವರಿಸಿದರು.

ಬರ ಅಧ್ಯಯನ ತಂಡವು ಮಾಹಿತಿ ಪಡೆಯುವ ಸಂದರ್ಭದಲ್ಲಿ ಶಾಸಕರಾದ ಆರ್.ನರೇಂದ್ರ, ಎಸ್. ಜಯಣ್ಣ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಸವರಾಜು ಹಾಜರಿದ್ದು ಬರ ಪರಿಸ್ಥಿತಿಯ ಬಗ್ಗೆ ಅವರ ಗಮನಕ್ಕೆ ತಂದರು. ಬಳಿಕ ಅಧ್ಯಯನ ತಂಡವು, ಯಳಂದೂರು ತಾಲೂಕಿನ ಕಿನಕನಹಳ್ಳಿ ಮಾರ್ಗವಾಗಿ ವೀಕ್ಷಣೆ ಕೈಗೊಂಡು, ಕಟ್ನವಾಡಿಯಲ್ಲಿ ರೈತರ ಗದ್ದೆಗಳಿಗೆ ಭೇಟಿ ನೀಡಿತು.

ಈ ವೇಳೆ ಸ್ಥಳೀಯ ರೈತರು ತಮ್ಮ ಭಾಗದಲ್ಲಿ ಈ ಬಾರಿ ಕಬಿನಿ ನಾಲೆಗಳಿಂದ ನೀರು ಹರಿಸದ ಹಿನ್ನೆಲೆಯಲ್ಲಿ ಬೆಳೆ ಬೆಳೆಯಲಾಗಿಲ್ಲ. ಹೀಗಾಗಿ ಸಂಕಷ್ಟದಲ್ಲಿದ್ದೇವೆ. ನೆರವಿನ ಅಗತ್ಯವಿದೆ ಎಂದು ಮನವಿ ಮಾಡಿದರು. ನಂತರ ಮೆಲ್ಲಹಳ್ಳಿ ಗೇಟ್ ನಲ್ಲಿ ರೈತ ಮುಖಂಡರಾದ ಹೊನ್ನೂರು ಪ್ರಕಾಶ್ ಬರ ಅಧ್ಯಯನ ತಂಡವನ್ನು ಭೇಟಿ ಮಾಡಿ, ಅಭಾವ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿದರು. ರೈತರ ಬೇಡಿಕೆಗಳು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಿದರು.

Drought study team

ಬಳಿಕ ತಂಡವು ಚಾಮರಾಜನಗರ ತಾಲೂಕಿನ ಹೆಗ್ಗವಾಡಿಪುರದಲ್ಲಿ ರೈತರು ಹಾಗೂ ಸ್ಥಳೀಯ ಗ್ರಾಮಸ್ಥರಿಂದ ಅಹವಾಲು ಆಲಿಸಿತು. ಅಲ್ಲಿಂದ ಯಾಲಕ್ಕೂರು, ಕರಡಿಗುಡ್ಡ, ಮಂಗಲ, ಹರದನಹಳ್ಳಿ, ಅಮಚವಾಡಿ ಗ್ರಾಮಗಳಿಗೆ ಭೇಟಿ ನೀಡಿ ರೈತರ ಜಮೀನುಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡಿತು.

ಬರ ಅಧ್ಯಯನ ತಂಡ ಜಿಲ್ಲೆಗೆ ಆಗಮಿಸಿದ ಸಂದರ್ಭ ರೈತರು ತಮ್ಮ ನೋವು ಹೇಳಿಕೊಳ್ಳುತ್ತಿದ್ದ ದೃಶ್ಯ ಮನ ಕಲಕುವಂತಿತ್ತು. ಕೃಷಿಯನ್ನೇ ನಂಬಿ ಬದುಕುವ ರೈತರು ಮಳೆಯಿಲ್ಲದೆ ಬರ ಪರಿಸ್ಥಿತಿಯಿಂದಾಗಿ ಕಂಗಾಲಾಗಿದ್ದು, ಸಾಲ ಮಾಡಿ ಜಾನುವಾರು ಮತ್ತು ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Central drought study team consisting of S.M. Kolhatkar, Sathish Kumar Kamboj and Meena visited Chamarajanagar district. Farmers literally cried and explained their situation to team.
Please Wait while comments are loading...