Bandipur National Park: ಬಂಡೀಪುರ ಅಭಯಾರಣ್ಯದಲ್ಲಿ ಗ್ರೀನ್ ಟ್ಯಾಕ್ಸ್‌ನಿಂದ ಸಂಗ್ರಹವಾದ ಹಣ ಎಷ್ಟು ಕೋಟಿ?-ಇಲ್ಲಿದೆ ಮಾಹಿತಿ
ಚಾಮರಾಜನಗರ, ಫೆಬ್ರವರಿ, 19: ಗುಂಡ್ಲುಪೇಟೆ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ಗ್ರೀನ್ ಟ್ಯಾಕ್ಸ್ (ಹಸಿರು ತೆರಿಗೆ) ಮೂಲಕ ಕಳೆದ 10 ತಿಂಗಳಿಂದ 4.5 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದರಿಂದ ಅರಣ್ಯ ಇಲಾಖೆಗೆ ಹೆಚ್ಚು ಆದಾಯ ದೊರಕಿದೆ. ಹಾಗಾದರೆ ಯಾವ್ಯಾವ ತಿಂಗಳಿನಲ್ಲಿ ಎಷ್ಟು ಸಂಗ್ರಹವಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕಳೆದ ಏಪ್ರಿಲ್‌ನಲ್ಲಿ ಗ್ರೀನ್ ಟ್ಯಾಕ್ಸ್ ಪ್ರಾರಂಭಿಸಿ ಬಂಡೀಪುರ ಅಭಯಾರಣ್ಯದ ಮೂಲಕ ತಮಿಳುನಾಡು ಹಾಗೂ ಕೇರಳಕ್ಕೆ ತೆರಳುವ ಕಾರು, ಲಾರಿ ಸೇರಿದಂತೆ ಎಲ್ಲಾ ವಾಹನಗಳ ಮೇಲೆ 20 ರೂಪಾಯಿ ತೆರಿಗೆ ಸಂಗ್ರಹವನ್ನು ಆರಂಭಿಸಲಾಗಿತ್ತು. ಇದೀಗ 10 ತಿಂಗಳ ಅಂತರದಲ್ಲಿ ಗ್ರೀನ್ ಟ್ಯಾಕ್ಸ್‌ನಿಂದ 4.5 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಭರಪೂರ ಆದಾಯವೇ ಬಂದಿದೆ.

ಕೆಕ್ಕನಹಳ್ಳ, ಮೇಲುಕಾಮನಹಳ್ಳಿ, ಮದ್ದೂರು ಹಾಗೂ ಮೂಲಹೊಳೆ ಚೆಕ್‌ಪೋಸ್ಟ್ ಮೂಲಕ ಸಂಚರಿಸುವ ವಾಹನಗಳಲ್ಲಿ ಗ್ರೀನ್ ಟ್ಯಾಕ್ಸ್ ಸಂಗ್ರಹ ಮಾಡಲಾಗುತ್ತಿದೆ. ಜೊತೆಗೆ ಈ ಮಾರ್ಗದಲ್ಲಿ ಸಂಚರಿಸುವ ಪ್ರತಿಯೊಬ್ಬ ವಾಹನ ಸವಾರರಿಗೂ ಪರಿಸರದ ಜಾಗೃತಿ ಮತ್ತು ಪ್ಲಾಸ್ಟಿಕ್ ನಿಷೇಧದ ಕುರಿತು ಅರಿವು ಮೂಡಿಸಲಾಗುತ್ತಿದೆ. ಕರ್ನಾಟಕದಿಂದ ಕೇರಳ ಹಾಗೂ ತಮಿಳುನಾಡಿಗೆ ಸಂಚರಿಸುವ ವಾಹನಗಳನ್ನು ತಪಾಸಣೆ ನಡೆಸಿ ಪ್ಲಾಸ್ಟಿಕ್ ವಸ್ತು ಹಾಗೂ ನೀರಿನ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಜೊತೆಗೆ ಅಭಯಾರಣ್ಯದ ಮಧ್ಯದಲ್ಲಿ ಪ್ರಾಣಿಗಳನ್ನು ಕಂಡಕೂಡಲೆ ವಾಹನ ನಿಲ್ಲಿಸದಂತೆ ತಿಳಿ ಹೇಳಲಾಗುತ್ತಿದೆ.
ಸ್ಥಳೀಯ ವಾಹನಗಳಿಗೆ ರಿಯಾಯಿತಿ: ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಸ್ಥಳೀಯ ನೋಂದಣಿ ವಾಹನಗಳಿಗೆ ರಿಯಾಯಿತಿ ನೀಡಲಾಗಿದ್ದು, ಹೊರ ಜಿಲ್ಲೆ ಹಾಗೂ ಅಂತಾರಾಜ್ಯ ವಾಹನಗಳಿಂದ ಮಾತ್ರ ಸುಂಕ ವಸೂಲಿ ಮಾಡಲಾಗುತ್ತಿದೆ. ಇದು ಸ್ಥಳೀಯರ ಸಂಚಾರಕ್ಕೆ ಹೆಚ್ಚು ಅನುಕೂಲವಾಗಿದೆ.
ಗ್ರೀನ್ ಟ್ಯಾಕ್ಸ್ ಮೂಲಕ ವಸೂಲಿ ಮಾಡುವ ಹಣವನ್ನು ಅರಣ್ಯ ಇಲಾಖೆಯ ಸುಮಾರು 500ಕ್ಕೂ ಹೆಚ್ಚು ಮುಂಚೂಣಿ ಸಿಬ್ಬಂದಿಯ ವೇತನಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಮೂಲಕ ರಾಜ್ಯ ಸರ್ಕಾರದಿಂದ ಸಿಬ್ಬಂದಿಯ ವೇತನಕ್ಕೆ ಕಾಯಬೇಕಾದ ಅವಶ್ಯಕತೆ ಇಲ್ಲ ಎಂದು ಸಿಎಫ್ ರಮೇಶ್ ಕುಮಾರ್ ತಿಳಿಸಿದ್ದಾರೆ.












Click it and Unblock the Notifications