ಚಾಮರಾಜನಗರ ಜೈಲಿನ 16 ಕೈದಿಗಳಿಗೆ ಕೊರೊನಾ ಸೋಂಕು ಪತ್ತೆ
ಚಾಮರಾಜನಗರ, ಅಕ್ಟೋಬರ್ 14: ಕೊರೊನಾ ವೈರಸ್ ಆರಂಭದಲ್ಲಿ ಕರ್ನಾಟಕದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿತ್ತು. ಆ ಸಮಯದಲ್ಲಿ ಹಸಿರು ವಲಯದಲ್ಲಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ಇದೀಗ ಕೊರೊನಾ ಸೋಂಕು ಜಾಸ್ತಿಯಾಗುತ್ತಿದೆ. ಜಿಲ್ಲೆಯ ಜೈಲಿನಲ್ಲಿರುವ ಕೈದಿಗಳಲ್ಲಿಯೂ ಸೋಂಕು ಪತ್ತೆಯಾಗುತ್ತಿದ್ದು, ಜೈಲು ಸಿಬ್ಬಂದಿ ಹಾಗೂ ಇತರ ಕೈದಿಗಳು ಭಯಭೀತರಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹಳ್ಳಿಗಳಲ್ಲೂ ಕಾಣಿಸಿಕೊಂಡಿರುವ ಕೊರೊನಾ ಸೋಂಕಿನ ಬಿಸಿ ಚಾಮರಾಜನಗರದ ಜೈಲಿಗೂ ಕಾಲಿಟ್ಟಿದೆ. ಮೊದಲ ಹಂತದಲ್ಲಿ 58 ಮಂದಿ ವಿಚಾರಣಾಧೀನ ಕೈದಿಗಳಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 16 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಕೊರೊನಾ ಸೋಂಕಿತ ಕೈದಿಗಳನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ 100 ಮಂದಿ ಕೈದಿಗಳಿಗೆ ಇಂದು ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದ್ದು, ಮತ್ತಷ್ಟು ಕೈದಿಗಳಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ.

ಜೈಲಿನ ಸಿಬ್ಬಂದಿ ಹಾಗೂ ಉಳಿದ ಕೈದಿಗಳಲ್ಲಿ ಇದೀಗ ಆತಂಕ ಶುರುವಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಆದೇಶವಾದ ಬಳಿಕ ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಿಸಲಾಗುತ್ತಿದೆ.
ಕೊರೊನಾ ನೆಗೆಟಿವ್ ಬಂದರೆ ಮಾತ್ರ ಜೈಲಿನೊಳಗೆ ಕಳುಹಿಸಲಾಗುತ್ತದೆ. ಹೀಗಿದ್ದರೂ ಜೈಲಿನೊಳಗೆ ಇರುವವರಿಗೂ ಕೊರೊನಾ ಹೇಗೆ ಹರಡಿದೆ ಎಂದು ಜೈಲು ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ.












Click it and Unblock the Notifications