ಜುಲೈ 30ಕ್ಕೆ ನಿವೃತ್ತರಾಗಲಿದ್ದಾರೆ ವಿಪ್ರೋ ಅಜೀಂ ಪ್ರೇಮ್ ಜೀ, ಆದರೆ...
ಬೆಂಗಳೂರು ಮೂಲದ ಪ್ರಮುಖ ಸಾಫ್ಟ್ ವೇರ್ ಸೇವೆಗಳ ರಫ್ತು ಕಂಪೆನಿ ವಿಪ್ರೋದ ಕಾರ್ಯನಿರ್ವಾಹಕ ಅಧ್ಯಕ್ಷ ಹಾಗೂ ಕಾರ್ಯನಿರ್ವಹಣಾ ನಿರ್ದೇಶಕ ಹುದ್ದೆಯಿಂದ ಜುಲೈ ಮೂವತ್ತನೇ ತಾರೀಕು ಅಜೀಂ ಪ್ರೇಮ್ ಜೀ ನಿವೃತ್ತರಾಗಲಿದ್ದಾರೆ ಎಂದು ಕಂಪೆನಿ ತಿಳಿಸಿದೆ. ವಿಪ್ರೋ ಕಂಪೆನಿಯ ಸ್ಥಾಪಕರೂ ಆದ ಅಜೀಂ ಪ್ರೇಮ್ ಜೀ ಭಾರತದ ಎರಡನೇ ಅತಿ ದೊಡ್ಡ ಶ್ರೀಮಂತರು.
ಆದರೆ, ಪ್ರೇಮ್ ಜೀ ಅವರು ಅಧಿಕಾರೇತರ ನಿರ್ದೇಶಕ ಹಾಗೂ ಸ್ಥಾಪಕ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಜುಲೈ 31, 2019ರಿಂದ 5 ವರ್ಷಗಳ ಅವಧಿಗೆ ಪ್ರೇಮ್ ಜೀ ಅವರನ್ನು ಅಧಿಕಾರೇತರ ನಿರ್ದೇಶಕರಾಗಿ ನೇಮಕ ಮಾಡಲು ಈಗಾಗಲೇ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ಅಜೀಂ ಅವರ ಮಗ- ಪೂರ್ಣಾವಧಿ ನಿರ್ದೇಶಕರಾಗಿರುವ ರಿಷದ್ ಪ್ರೇಮ್ ಜೀ ಕಂಪೆನಿಯ ಹೊಸ ಕಾರ್ಯನಿರ್ವಾಹಕ ಅಧ್ಯಕ್ಷರಾಗಲಿದ್ದಾರೆ.
ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಅವರು ಈ ಹುದ್ದೆಯಲ್ಲಿ ಇದ್ದಾರೆ. ವಿಪ್ರೋ ಎಂಟರ್ ಪ್ರೈಸಸ್ (ಪ್ರೈ) ಲಿಮಿಟೆಡ್ ನ ಅಧಿಕಾರೇತರ ಅಧ್ಯಕ್ಷರೂ ಆಗಿದ್ದಾರೆ. ಜತೆಗೆ ವಿಪ್ರೋ ಜಿಇ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರ ಪ್ರವರ್ತಕರ ಗುಂಪಿನ ಕಂಪೆನಿಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಕಂಪೆನಿಯ ಸಿಇಒ ಅಬಿದಲಿ ಜೆಡ್ ನೀಮುಚ್ ವಾಲಾ ಅವರು ಕಂಪೆನಿಯ ಹೊಸ ಕಾರ್ಯನಿರ್ವಹಣಾ ನಿರ್ದೇಶಕರಾಗಿದ್ದಾರೆ. ಈ ನೇಮಕವು ಜುಲೈ ಮೂವತ್ತೊಂದರಿಂದ ಅನ್ವಯ ಆಗುತ್ತದೆ ಎಂದು ವಿಪ್ರೋ ಆಡಳಿತ ಮಂಡಳಿಯು ತಿಳಿಸಿದೆ.












Click it and Unblock the Notifications