ತೆರಿಗೆ ಮಿತಿ 3 ಲಕ್ಷಕ್ಕೆ, 80C ಸೆಕ್ಷನ್ ಹೂಡಿಕೆ 2 ಲಕ್ಷಕ್ಕೆ ಏರಿಕೆ?
ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಮಧ್ಯಮ ವರ್ಗದ- ವೇತನದಾರರಿಗೆ ತೆರಿಗೆ ವಿನಾಯಿತಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದ್ದು, ಸದ್ಯಕ್ಕೆ ಇರುವ 2.5 ಲಕ್ಷದ ಮಿತಿ 3 ಲಕ್ಷಕ್ಕೆ ಏರಿಸಬಹುದು ಎಂಬ ನಿರೀಕ್ಷೆ ಇದೆ. 80C ಸೆಕ್ಷನ್ ಅಡಿಯಲ್ಲಿ ಇದ್ದ ಹೂಡಿಕೆ ಮಿತಿಯನ್ನು 50 ಸಾವಿರದಷ್ಟು ಏರಿಸಿ, ಈಗಿನ 1.5 ಲಕ್ಷದಿಂದ 2 ಲಕ್ಷಕ್ಕೆ ಹೆಚ್ಚಿಸುವ ನಿರೀಕ್ಷೆ ಇದೆ.
ಒಂದು ವೇಳೆ ಈ ನಿರೀಕ್ಷೆಗಳನ್ನು ಪೂರೈಸುವಲ್ಲಿ ಕೇಂದ್ರ ಸರಕಾರ ಯಶಸ್ವಿ ಆದರೆ ಹಣಕಾಸು ಸಚಿವ ಅರುಣ್ ಜೇಟ್ಲಿ ನೀಡಿದ್ದ ಮಾತು ಈಡೇರಿಸದಂತಾಗುತ್ತದೆ. ಕಳೆದ ಲೋಕಸಭೆ ಚುನಾವಣೆ ವೇಳೆಗೆ ಜೇಟ್ಲಿ ಹೇಳಿದ್ದ ಮಾತಿನ ಪ್ರಕಾರ, ಆದಾಯ ತೆರಿಗೆಗೆ ಐದು ಲಕ್ಷದವರೆಗೆ ವಿನಾಯಿತಿ ನೀಡಿದರೆ ಮೂರು ಕೋಟಿ ಮಂದಿಗೆ ಅನುಕೂಲ ಆಗುತ್ತದೆ. ಅಮೃತಸರದಲ್ಲಿ ಚುನಾವಣೆ ಪ್ರಚಾರದ ವೇಳೆ ಈ ಮಾತನ್ನು ಜೇಟ್ಲಿ ಹೇಳಿದ್ದರು.
ತೆರಿಗೆ ವಿನಾಯಿತಿ ನೀಡಿದರೆ ಆ ವರ್ಗದವರ ಖರೀದಿ ಸಾಮರ್ಥ್ಯ ಹೆಚ್ಚಾಗಿ, ವ್ಯಾಟ್ ಮತ್ತು ಅಬಕಾರಿ ಸುಂಕದ ರೂಪದಲ್ಲಿ ಸರಕಾರಕ್ಕೆ ಆದಾಯ ರೂಪದಲ್ಲಿ ಹಿಂತಿರುಗುತ್ತದೆ ಎಂದು ಜೇಟ್ಲಿ ಅಭಿಪ್ರಾಯ ಪಟ್ಟಿದ್ದರು. ಕಳೆದ ಬಾರಿಯ ಬಜೆಟ್ ನಲ್ಲಿ ಎರಡೂವರೆ ಲಕ್ಷದಿಂದ ಐದು ಲಕ್ಷದವರೆಗಿನ ಆದಾಯಕ್ಕೆ ಶೇ ಐದಕ್ಕೆ ತೆರಿಗೆ ಪ್ರಮಾಣ ಇಳಿಸಿದ್ದರು. ಈ ಹಿಂದೆ ಆ ಪ್ರಮಾಣ ಶೇ ಹತ್ತರಷ್ಟಿತ್ತು.

ಒಟ್ಟಾರೆ ಈ ಬಾರಿ ವೇತನ ಪಡೆಯುವ ವರ್ಗಕ್ಕೆ ಅರುಣ್ ಜೇಟ್ಲಿ ಅವರು ಅದೇನು ಕೊಡುಗೆ ನೀಡ್ತಾರೋ ಕಾದು ನೋಡಬೇಕಿದೆ.












Click it and Unblock the Notifications