ಯಾರಿದು ಅಜಿತ್ ಮೋಹನ್, ಫೇಸ್ಬುಕ್ ಇಂಡಿಯಾದ ಹೊಸ ಎಂಡಿ
ಬೆಂಗಳೂರು, ಸೆಪ್ಟೆಂಬರ್ 26: ಫೇಸ್ ಬುಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಉಮಂಗ್ ಬೇಡಿ ಅವರು ತೊರೆದ ಸ್ಥಾನಕ್ಕೆ ಅಜಿತ್ ಮೋಹನ್ ಅವರನ್ನು ನೇಮಿಸಲಾಗಿದೆ.
ಕಳೆದ ಒಂದು ವರ್ಷದಿಂದ ಹೊಸ ಎಂಡಿಯ ಹುಡುಕಾಟದಲ್ಲಿ ತೊಡಗಿದ್ದ ಫೇಸ್ಬುಕ್ ಕಡೆಗೂ ನೇಮಕಾತಿ ಪೂರ್ಣಗೊಳಿಸಿದೆ. ಸ್ಟಾರ್ ಇಂಡಿಯಾ ಒಡೆತನದ ವಿಡಿಯೋ ಪ್ರಸರಣ ವೇದಿಕೆ ಹಾಟ್ ಸ್ಟಾರ್ ನ ಸಿಇಒ ಆಗಿದ್ದ ಅಜಿತ್ ಅವರು ಈಗ ಫೇಸ್ ಬುಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಉಪಾಧ್ಯಕ್ಷರಾಗಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರದ ನೀತಿ ನಿಯಮ, ಫೇಸ್ಬುಕ್ ನ ಹೊಸ ನಿಬಂಧನೆಗಳನ್ನು ಗಮನದಲ್ಲಿಟ್ಟುಕೊಂಡು, ಸಂಸ್ಥೆಯನ್ನು ಗ್ರಾಮೀಣ ಭಾಗಕ್ಕೆ ಇನ್ನಷ್ಟು ವಿಸ್ತರಿಸುವುದು ಅಜಿತ್ ಮುಂದಿರುವ ಸವಾಲು.
ಅಜಿತ್ ಮೋಹನ್ ಅವರು 1997ರಲ್ಲಿ ಕನ್ಸಲೆಂಟ್ ಸಂಸ್ಥೆ ಆರ್ಥರ್ ಡಿ ಜತೆಗೆ ವೃತ್ತಿ ಬದುಕು ಆರಂಭಿಸಿದರು. ನಂತರ 2005ರಲ್ಲಿ ಮೆಕ್ ಕಿನ್ಸೆ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಹಾಗೂ 20008ರಲ್ಲಿ ಮೆಕ್ ಕಿನ್ಸೆ ಗ್ಲೋಬಲ್ ಇನ್ಸ್ಟಿಟ್ಯೂಟ್ ಸೇರಿದರು. 2012ರಲ್ಲಿ ಸ್ಟಾರ್ ನೆಟ್ವರ್ಕ್ ಸೇರಿದ ಅಜಿತ್, 2015 ರ ತನಕ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದರು. ದೇಶದ ಅತಿ ದೊಡ್ಡ ಸ್ಟ್ರಿಮಿಂಗ್ ಆಪ್, ಸ್ಟಾರ್ ನೆಟ್ವರ್ಕ್ ಒಡೆತನದ ಹಾಟ್ ಸ್ಟಾರ್ ನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು. ಹಾಟ್ ಸ್ಟಾರ್ 2016 ರಲ್ಲಿ ಅಜಿತ್ ರನ್ನು ಸಿಇಒ ಆಗಿ ನೇಮಕವಾದರು.

ಭಾರತದಲ್ಲಿ ಫೇಸ್ ಬುಕ್ ಬೆಳವಣಿಗೆಗೆ ಪೂರಕವಾಗಿ ಅಜಿತ್ ರನ್ನು ನೇಮಕ ಮಾಡಿದ್ದು, ಸಮುದಾಯ, ವ್ಯವಹಾರ, ಸರ್ಕಾರದೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಬೇಕಿದೆ. ವಾಟ್ಸಪ್ ಹಾಗೂ ಇನ್ಸ್ಟಾಗ್ರಾಮ್ ಬೆಳವಣಿಗೆಯ ಹೊಣೆಯೂ ಅಜಿತ್ ಮೇಲಿದೆ.
ಸರಿ ಸುಮಾರು 14.5 ಕೋಟಿ ವಾರ್ಷಿಕ ಸಂಬಳ ಪಡೆಯಲಿರುವ ಅಜಿತ್ ಅವರು ಫೇಸ್ ಬುಕ್ ಮೂಲಕ ವಿಡಿಯೋ ಸ್ಟ್ರೀಮಿಂಗ್ ಪೋಸ್ಟ್ ಹೆಚ್ಚಿಸುವತ್ತ ಗಮನ ಹರಿಸುವ ಸಾಧ್ಯತೆಯಿದೆ.
ಉಮಂಗ್ ಬೇಡಿ ಸಂಸ್ಥೆ ತೊರೆದ ಬಳಿಕ, ಸಂದೀಪ್ ಭೂಷಣ್ ಅವರು ಮಧ್ಯಂತರ ವ್ಯವಸ್ಥಾಪಕ ನಿರ್ದೇಶಕರಾಗಿ ನಿಯುಕ್ತರಾಗಿದ್ದಾರೆ. 2016ರಲ್ಲಿ ಕೃತಿಕಾ ರೆಡ್ಡಿ ಅವರ ಬದಲಿಗೆ ಫೇಸ್ ಬುಕ್ ನ ಜವಾಬ್ದಾರಿ ಹೊತ್ತುಕೊಂಡಿದ್ದ ಬೇಡಿ ಅವರು ಸಂಸ್ಥೆಯ ವಿಸ್ತರಣೆಯಲ್ಲಿ ಮಹತ್ವದ ಪಾತ್ರವಹಿಸಿದ್ದರು.












Click it and Unblock the Notifications