UPI payment : ಯುಪಿಐನಲ್ಲಿ ಹಣ ಕಟ್‌ ಆಗಿದೆ, ಆದ್ರೆ ಪೇಮೆಂಟ್‌ ಆಗಿಲ್ಲ! ಏನ್ಮಾಡೋದು? ರಿಫಂಡ್‌ ಬೇಗ ಪಡೆಯಲು ಈ 8 ಹಂತ ಅನುಸರಿಸಿ

UPI Payament Failed: ಈ ಸಮಸ್ಯೆ ಹಲವು ಬಾರಿ ನಿಮಗೆ ಆಗಿರುತ್ತೆ. ‌ಯುಪಿಐ ಪಾವತಿ ಮಾಡುವಾಗ, ಹಣ ಕಡಿತವಾಗಿದೆ, ಆದರೆ ಯುಪಿಐ ಪೇಮೆಂಟ್‌ 'Failed' ಎಂದು ತೋರಿಸುತ್ತಿದೆ. ಕೆಲವೊಮ್ಮೆ ತಾನಾಗೇ ಸರಿಹೋಗುತ್ತೆ, ಇನ್ನು ಕೆಲವೊಮ್ಮೆ ದಿನಗಟ್ಟಲೆ ಹಣ ವಾಪಸ್ ಪಡೆಯಲು ಗುದ್ದಾಡಬೇಕಾಗುತ್ತೆ. ಇಂಥ ಸಂದರ್ಭದಲ್ಲಿ ಗಾಬರಿಯಾಗಬೇಡಿ. ಸಾಮಾನ್ಯವಾಗಿ ಹಣ ಸ್ವಯಂಚಾಲಿತವಾಗಿ ನಿಮ್ಮ ಬ್ಯಾಂಕ್‌ ಖಾತೆಗೆ ಮರಳುತ್ತದೆ. ಯುಪಿಐ ವ್ಯವಸ್ಥೆಯಲ್ಲಿ ಇಂತಹ ವಿಫಲ ವಹಿವಾಟುಗಳಿಗೆ ಹಣವನ್ನು ಹಿಂತಿರುಗಿಸುವ ವ್ಯವಸ್ಥೆ ಇದೆ.

UPI Payment

ಈ ಸಂದರ್ಭದಲ್ಲಿ ನೀವು ಮಾಡಬಾರದ ಪ್ರಮುಖ ಕೆಲಸವೆಂದರೆ, ತಕ್ಷಣವೇ ಮತ್ತೊಮ್ಮೆ ಪೇಮೆಂಟ್‌ ಮಾಡುವುದು. ಮೊದಲ ವಹಿವಾಟು ನಂತರ ಯಶಸ್ವಿಯಾದರೆ, ಎರಡನೇ ಬಾರಿ ಹಣ ಪಾವತಿಸಿ ಡಬಲ್‌ ಡೆಬಿಟ್‌ ಆಗುವ ಸಾಧ್ಯತೆ ಇರುತ್ತದೆ. ಹಾಗಾದರೆ ಏನು ಮಾಡಬೇಕು?

1. ಮೊದಲು 60 ನಿಮಿಷ ಕಾಯಿರಿ

UPI Payment ವಿಫಲವಾದರೂ ಹಣ ಕಡಿತವಾಗಿದ್ದರೆ ತಕ್ಷಣ ಗಾಬರಿಯಾಗಬೇಡಿ. ಬಹುತೇಕ ಸಂದರ್ಭಗಳಲ್ಲಿ ಹಣ ಸ್ವಯಂಚಾಲಿತವಾಗಿ ರಿವರ್ಸ್‌ ಆಗುತ್ತದೆ. ಮೊದಲ ಒಂದು ಗಂಟೆ ಪೇಮೆಂಟ್‌ ಸ್ಟೇಟಸ್‌ ಬದಲಾಗುತ್ತದೆಯೇ ಅಥವಾ ಹಣ ಖಾತೆಗೆ ಮರಳುತ್ತದೆಯೇ ಎಂದು ಗಮನಿಸಿ. ಈ ಸಮಯದಲ್ಲಿ ಮತ್ತೊಮ್ಮೆ ಅದೇ ಪೇಮೆಂಟ್‌ ಮಾಡಲು ಆತುರಪಡಬೇಡಿ.

2. UPI Payment ಯಾಕೆ ಫೇಲ್‌ ಆಗುತ್ತದೆ?

UPI Payment ವಿಫಲವಾಗಲು ಹಲವು ಕಾರಣಗಳಿರಬಹುದು. ತಪ್ಪಾದ ಯುಪಿಐ ಪಿನ್‌ ನಮೂದಿಸುವುದು, ಬ್ಯಾಂಕ್‌ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದಿರುವುದು ಅಥವಾ ದಿನದ ವಹಿವಾಟಿನ ಮಿತಿಯನ್ನು ತಲುಪಿರುವುದು ಪ್ರಮುಖ ಕಾರಣಗಳು. ನೀವು ತಪ್ಪಾದ ಯುಪಿಐ ಐಡಿ ಅಥವಾ ವಿಪಿಎ ನಮೂದಿಸಿದರೂ ಪೇಮೆಂಟ್‌ ವಿಫಲವಾಗಬಹುದು. ಇದರ ಜೊತೆಗೆ ಬ್ಯಾಂಕ್‌ ಸರ್ವರ್‌ನಲ್ಲಿ ತಾಂತ್ರಿಕ ಸಮಸ್ಯೆ, ಇಂಟರ್‌ನೆಟ್‌ ಸಂಪರ್ಕದ ತೊಂದರೆ, ಯುಪಿಐ ವ್ಯವಸ್ಥೆಯ ನಿರ್ವಹಣೆ ಅಥವಾ ಪೇಮೆಂಟ್‌ ಗೇಟ್‌ವೇನಲ್ಲಿ ಸಮಯ ಮೀರಿದ ಸಮಸ್ಯೆಯಿಂದಲೂ ವಹಿವಾಟು ಫೇಲ್‌ ಆಗಬಹುದು. ಕೆಲವು ಬ್ಯಾಂಕ್‌ಗಳು ತಮ್ಮದೇ ಆದ ದಿನದ ಯುಪಿಐ ಮಿತಿಯನ್ನು ನಿಗದಿಪಡಿಸಿರುತ್ತವೆ. ಹೀಗಾಗಿ 1 ಲಕ್ಷ ರುಪಾಯಿಯ ಸಾಮಾನ್ಯ ಮಿತಿಗಿಂತ ಕಡಿಮೆ ಮಿತಿಯನ್ನೇ ನಿಮ್ಮ ಬ್ಯಾಂಕ್‌ ವಿಧಿಸಿರಬಹುದು.

3. ಯುಡಿಐಆರ್‌ ಮೂಲಕ ಪೇಮೆಂಟ್‌ ಸ್ಟೇಟಸ್‌ ಪರಿಶೀಲಿಸಿ

UPI Paymentನಲ್ಲಿ ಸಮಸ್ಯೆ ಉಂಟಾದಾಗ ಯುಡಿಐಆರ್‌ ಅಂದರೆ Unified Dispute and Issue Resolution ವ್ಯವಸ್ಥೆಯ ಮೂಲಕ ವಹಿವಾಟಿನ ಸ್ಥಿತಿಯನ್ನು ಪರಿಶೀಲಿಸಬಹುದು. ನಿಮ್ಮ ಯುಪಿಐ ಆಪ್‌ನ ಟ್ರಾನ್ಸಾಕ್ಷನ್‌ ಹಿಸ್ಟರಿಗೆ ಹೋಗಿ. ವಿಫಲವಾದ ವಹಿವಾಟನ್ನು ಆಯ್ಕೆ ಮಾಡಿ. ನಂತರ ಚೆಕ್‌ ಸ್ಟೇಟಸ್‌ ಅಥವಾ ʼRaise Issueʼ ಎಂಬ ಆಯ್ಕೆ ಕಾಣಿಸಿದರೆ ಅದನ್ನು ಬಳಸಿ. ಇದರಿಂದ ವಹಿವಾಟಿನ ನಿಜವಾದ ಸ್ಥಿತಿ ತಿಳಿದುಕೊಳ್ಳಲು ಹಾಗೂ ಅಗತ್ಯವಿದ್ದರೆ ಸಮಸ್ಯೆಯನ್ನು ವರದಿ ಮಾಡಲು ಸಾಧ್ಯವಾಗುತ್ತದೆ.

4. ಸಮಸ್ಯೆ ಮುಂದುವರಿದರೆ ಆಪ್‌ನಲ್ಲೇ ದೂರು ನೀಡಿ

ಹಣ ಖಾತೆಯಿಂದ ಕಡಿತವಾಗಿದ್ದರೂ ರಿಫಂಡ್‌ ಆಗದಿದ್ದರೆ ಯುಪಿಐ ಆಪ್‌ನಲ್ಲಿರುವ ʼDisputeʼ ಅಥವಾ ʼReport Issueʼ ಆಯ್ಕೆಯನ್ನು ಬಳಸಿ.

ಗೂಗಲ್‌ ಪೇನಲ್ಲಿ ಸಾಮಾನ್ಯವಾಗಿ Profile → Help & Feedback → Transaction Issues ಮೂಲಕ ಸಮಸ್ಯೆ ವರದಿ ಮಾಡಬಹುದು.
ಫೋನ್‌ಪೇನಲ್ಲಿ Help → Report Issue → Payment Issues → Money Deducted ಆಯ್ಕೆಯನ್ನು ಬಳಸಬಹುದು.
ಪೇಟಿಎಂನಲ್ಲಿ Help → Payment Issues → Raise Dispute ಮೂಲಕ ದೂರು ದಾಖಲಿಸಬಹುದು.
ದೂರು ನೀಡುವಾಗ ನಿಮ್ಮ 12 ಅಂಕೆಗಳ UPI Transaction ID ಅಥವಾ ಯುಟಿಆರ್‌ ಸಂಖ್ಯೆ, ಪೇಮೆಂಟ್‌ನ ಸ್ಕ್ರೀನ್‌ಶಾಟ್‌, ದಿನಾಂಕ, ಸಮಯ ಮತ್ತು ಪಾವತಿಸಿದ ಮೊತ್ತದ ವಿವರವನ್ನು ಸಿದ್ಧವಾಗಿಟ್ಟುಕೊಳ್ಳಿ.

5. ಅಗತ್ಯವಿದ್ದರೆ ಬ್ಯಾಂಕ್‌ ಅನ್ನು ಸಂಪರ್ಕಿಸಿ

ಯುಪಿಐ ಆಪ್‌ನಿಂದ ಸಮಸ್ಯೆ ಪರಿಹಾರವಾಗದಿದ್ದರೆ ನಿಮ್ಮ ಬ್ಯಾಂಕ್‌ನ ಯುಪಿಐ ಸಹಾಯವಾಣಿಯನ್ನು ಸಂಪರ್ಕಿಸಿ. ಬ್ಯಾಂಕ್‌ಗೆ ಕರೆ ಮಾಡುವಾಗ ಈ ಮಾಹಿತಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

- ಯುಪಿಐ ಟ್ರಾನ್ಸಾಕ್ಷನ್‌ ರೆಫರೆನ್ಸ್‌ ಅಥವಾ ಯುಟಿಆರ್‌ ಸಂಖ್ಯೆ
- ನಿಮ್ಮ ಬ್ಯಾಂಕ್‌ ಖಾತೆ ಅಥವಾ ಯುಪಿಐ ಐಡಿ
- ವ್ಯಾಪಾರಿಯ ವಹಿವಾಟಿನ ವಿವರ
- ಪೇಮೆಂಟ್‌ ಮಾಡಿದ ದಿನಾಂಕ ಮತ್ತು ಸಮಯ
- ಕಡಿತವಾದ ಹಣದ ಮೊತ್ತ
ಬ್ಯಾಂಕ್‌ನಿಂದ ವಹಿವಾಟಿನ ಸ್ಥಿತಿಯನ್ನು ಪರಿಶೀಲಿಸುವಂತೆ ಕೇಳಿ. ದೂರು ದಾಖಲಿಸಿದ ನಂತರ ಸಿಗುವ ಕಂಪ್ಲೇಂಟ್‌ ರೆಫರೆನ್ಸ್‌ ನಂಬರ್‌ ಅನ್ನು ಕೂಡ ತಪ್ಪದೇ ಉಳಿಸಿಕೊಳ್ಳಿ.

6. ರಿಫಂಡ್‌ಗೆ ಇರುವ ಸಮಯದ ಮಿತಿ ತಿಳಿದುಕೊಳ್ಳಿ

ಯುಪಿಐ ವಹಿವಾಟು ವಿಫಲವಾದಾಗ ಹಣ ಮರಳಲು ನಿಯಮಾನುಸಾರ ನಿರ್ದಿಷ್ಟ ಸಮಯದ ಮಿತಿ ಇದೆ. ವ್ಯಕ್ತಿಯಿಂದ ವ್ಯಕ್ತಿಗೆ ಮಾಡಿದ ಯುಪಿಐ ವರ್ಗಾವಣೆಗಳಲ್ಲಿ ಹಣವನ್ನು ಸಾಮಾನ್ಯವಾಗಿ T+1 ಕೆಲಸದ ದಿನದೊಳಗೆ ರಿವರ್ಸ್‌ ಮಾಡಬೇಕು. ವ್ಯಾಪಾರಿಗೆ ಮಾಡಿದ ಪಾವತಿಯಲ್ಲಿ ಹಣ ಕಡಿತವಾಗಿದ್ದು ವಹಿವಾಟು ವಿಫಲವಾಗಿದ್ದರೆ ಸಾಮಾನ್ಯವಾಗಿ T+5 ಕೆಲಸದ ದಿನಗಳೊಳಗೆ ರಿಫಂಡ್‌ ಆಗಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಹಣ ಇದಕ್ಕಿಂತ ಮೊದಲೇ ಮರಳಬಹುದು. ಆದರೆ ನಿಗದಿತ ಸಮಯ ಮೀರಿದರೆ ನೀವು ಬ್ಯಾಂಕ್‌ ಬಳಿ ದೂರು ದಾಖಲಿಸಬಹುದು.

7. ವಿಳಂಬವಾದರೆ ಪರಿಹಾರ ಪಡೆಯುವ ಹಕ್ಕು ನಿಮಗಿದೆ

ನಿಗದಿತ ಸಮಯದೊಳಗೆ ಹಣ ರಿವರ್ಸ್‌ ಆಗದಿದ್ದರೆ, ಅನ್ವಯಿಸುವ ಆರ್‌ಬಿಐ ನಿಯಮಗಳ ಪ್ರಕಾರ ವಿಳಂಬಕ್ಕೆ ಪ್ರತಿ ದಿನಕ್ಕೆ 100 ರೂ. ಪರಿಹಾರ ಪಡೆಯುವ ಅವಕಾಶವಿದೆ. ಹೀಗಾಗಿ ಹಣ ಮರಳಲು ಹೆಚ್ಚು ಸಮಯ ತೆಗೆದುಕೊಂಡರೆ ಸುಮ್ಮನೆ ಕಾಯುತ್ತಿರಬೇಡಿ. ನಿಮ್ಮ ಬ್ಯಾಂಕ್‌ ಅಥವಾ ಸಂಬಂಧಪಟ್ಟ ಯುಪಿಐ ಸೇವಾ ಸಂಸ್ಥೆಯ ಬಳಿ ದೂರು ದಾಖಲಿಸಿ ಮತ್ತು ಪರಿಹಾರಕ್ಕೆ ನೀವು ಅರ್ಹರೇ ಎಂಬುದನ್ನು ಪರಿಶೀಲಿಸಿ.

8. ಕೊನೆಯ ಆಯ್ಕೆ: ಆರ್‌ಬಿಐ ಒಂಬುಡ್ಸ್‌ಮನ್‌ಗೆ ದೂರು ನೀಡಿ

ಬ್ಯಾಂಕ್‌ ಅಥವಾ ಸಂಬಂಧಪಟ್ಟ ಸಂಸ್ಥೆಯ ಬಳಿ ದೂರು ನೀಡಿದರೂ ಸಮಸ್ಯೆ ಪರಿಹಾರವಾಗದೆ 30 ದಿನಗಳಿಗೂ ಹೆಚ್ಚು ಕಾಲ ಬಾಕಿ ಉಳಿದಿದ್ದರೆ ಆರ್‌ಬಿಐಯ ಇಂಟೆಗ್ರೇಟೆಡ್‌ ಒಂಬುಡ್ಸ್‌ಮನ್‌ ವ್ಯವಸ್ಥೆಗೆ ದೂರು ನೀಡಬಹುದು. ಆನ್‌ಲೈನ್‌ನಲ್ಲಿ ದೂರು ದಾಖಲಿಸುವಾಗ ಯುಪಿಐ ವಹಿವಾಟಿನ ಸ್ಕ್ರೀನ್‌ಶಾಟ್‌, ಬ್ಯಾಂಕ್‌ ಅಥವಾ ಆಪ್‌ಗೆ ನೀಡಿದ ದೂರಿನ ವಿವರಗಳು, ಕಂಪ್ಲೇಂಟ್‌ ರೆಫರೆನ್ಸ್‌ ನಂಬರ್‌ ಮತ್ತು ವ್ಯಾಪಾರಿಗೆ ಸಂಬಂಧಿಸಿದ ಆರ್ಡರ್‌ ವಿವರಗಳನ್ನು ಹೊಂದಿದ್ದರೆ ಅವುಗಳನ್ನು ಕೂಡ ಸಲ್ಲಿಸಿ. ಇದು ಬ್ಯಾಂಕ್‌ ಅಥವಾ ಪಾವತಿ ಸೇವಾ ಸಂಸ್ಥೆಯೊಂದಿಗೆ ಸಮಸ್ಯೆ ಬಗೆಹರಿಯದ ಸಂದರ್ಭಗಳಲ್ಲಿ ಬಳಸಬಹುದಾದ ಅಧಿಕೃತ ದೂರು ಪರಿಹಾರ ಮಾರ್ಗವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+