ಫ್ಲಿಫ್ ಕಾರ್ಟ್ ವಿಲೀನ ಪ್ರಕ್ರಿಯೆಯಿಂದ ಹಿಂದೆ ಸರಿದ ಸ್ನ್ಯಾಪ್ ಡೀಲ್
ಇ ಕಾಮರ್ಸ್ ಕಂಪನಿಯಾದ ಸ್ನ್ಯಾಪ್ ಡೀಲ್ ಸೋಮವಾರ ಫ್ಲಿಪ್ ಕಾರ್ಟ್ ವಿಲೀನ ಪ್ರಕ್ರಿಯೆ ಮಾತುಕತೆಯಿಂದ ಹಿಂದೆ ಸರಿದಿದೆ. ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದಾಗಿ ಅದು ಹೇಳಿಕೊಂಡಿದೆ.
ಸ್ನ್ಯಾಪ್ ಡೀಲ್ ತನ್ನ ವ್ಯವಹಾರವನ್ನು ಫ್ಲಿಪ್ ಕಾರ್ಟ್ ಗೆ ಮಾರಾಟ ಮಾಡುವುದಕ್ಕೆ 900-950 ಮಿಲಿಯನ್ ಅಮೆರಿಕನ್ ಡಾಲರ್ ನ ವ್ಯವಹಾರಕ್ಕೆ ಮುಂದಾಗಿತ್ತು.

"ಸ್ನ್ಯಾಪ್ ಡೀಲ್ ಕಳೆದ ಹಲವು ತಿಂಗಳಿಂದ ತಾಂತ್ರಿಕ ಆಯ್ಕೆಗಳ ಪರಿಶೀಲನೆ ನಡೆಸಿತ್ತು. ಇದೀಗ ಕಂಪನಿಯು ಸ್ವತಂತ್ರ ಮಾರ್ಗದಲ್ಲಿ ಮುಂದುವರಿಯಲು ನಿರ್ಧರಿಸಿದೆ. ಅದರ ಫಲಿತವಾಗಿ ಉಳಿದ ನಿರ್ಧಾರಗಳಿಂದ ಹಿಂದೆ ಸರಿದಿದೆ" ಎಂದು ಸ್ನ್ಯಾಪ್ ಡೀಲ್ ಕಂಪನಿ ವಕ್ತಾರರು ಫ್ಲಿಪ್ ಕಾರ್ಟ್ ಹೆಸರು ಎತ್ತದೆ ತಿಳಿಸಿದ್ದಾರೆ.
ಸ್ನ್ಯಾಪ್ ಡೀಲ್ ಹೊಸ ದಿಸೆಯಲ್ಲಿ ಸಾಗಿದೆ. ಇದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ತಿಂಗಳು ಒಳ್ಳೆ ಲಾಭ ಗಳಿಸಿದೆ ಎಂದಿದ್ದಾರೆ. ಇದರ ಜತೆಗೆ ಕೆಲವು ಮುಖ್ಯ ಆಸ್ತಿಗಳನ್ನು ಮಾರಿ, ಆರ್ಥಿಕವಾಗಿ ಸ್ವಂತ-ಬಲದ ಮೇಲೆ ನಿಲ್ಲಲು ನಿರ್ಧಾರ ಮಾಡಲಾಗಿದೆ.
385 ಕೋಟಿ ರುಪಾಯಿಗೆ ಡಿಜಿಟಲ್ ಪೇಮಂಟ್ 'ಫ್ರೀಚಾರ್ಜ್' ಅನ್ನು ಸ್ನ್ಯಾಪ್ ಡೀಲ್ ಕಂಪನಿಯು ಆಕ್ಸಿಸ್ ಬ್ಯಾಂಕ್ ಗೆ ಮಾರಾಟ ಮಾಡಲು ನಿರ್ಧರಿಸಿದ ಮೇಲೆ ಫ್ಲಿಪ್ ಕಾರ್ಟ್ ಗೆ ಕಂಪನಿಯನ್ನು ವಿಲೀನ ಮಾಡದಿರುವ ತೀರ್ಮಾನ ಹೊರಬಂದಿದೆ.
ಒಂದು ವೇಳೆ ಫ್ಲಿಪ್ ಕಾರ್ಟ್ ನಿಂದ ಸ್ನ್ಯಾಪ್ ಡೀಲ್ ನ ಖರೀದಿ ಆಗಿದ್ದರೆ ಅದು ಭಾರತದ ಇ ಕಾಮರ್ಸ್ ಮಾರುಕಟ್ಟೆಯಲ್ಲೇ ಅತಿ ದೊಡ್ಡ ವಿಲೀನ ಪ್ರಕ್ರಿಯೆ ಆಗಿರುತ್ತಿತ್ತು.












Click it and Unblock the Notifications