ಫ್ಲಿಪ್‌ಕಾರ್ಟ್ ನ 4,500 ಕೋಟಿ ರೂ. ಆಫರ್ ತಿರಸ್ಕರಿಸಿದ ಸ್ನಾಪ್‍ಡೀಲ್
ಬೆಂಗಳೂರು, ಜುಲೈ 4: ಎರಡು ಪ್ರಮುಖ ಆನ್ ಲೈನ್ ಶಾಪಿಂಗ್ ತಾಣಗಳ ನಡುವಿನ ಬಹುಕೋಟಿ ಮೊತ್ತದ ಖರೀದಿ ವ್ಯವಹಾರ ಸುದ್ದಿಗೆ ಗ್ರಾಸವಾಗಿದೆ.
ಮಾರುಕಟ್ಟೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಸ್ನಾಪ್ ಡೀಲ್ ಕಂಪೆನಿ, ಇನ್ನೊಂದು ಆನ್ಲೈನ್ ಶಾಪಿಂಗ್ ಕಂಪನಿ ಫ್ಲಿಪ್ ಕಾರ್ಟ್ ಮುಂದಿಟ್ಟ ಸುಮಾರು 4,500 ರಿಂದ 4,800 ಕೋಟಿ ರೂ. ಮೊತ್ತದ ಖರೀದಿ ವ್ಯವಹಾರವನ್ನು ತಿರಸ್ಕರಿಸಿದೆ ಎಂದು 'ಲೈವ್ ಮಿಂಟ್' ವರದಿ ಮಾಡಿದೆ. ಈ ಮೂಲಕ ಶೇರುದಾರರ ಟೀಕೆಗೂ ಸ್ನಾಪ್ ಡೀಲ್ ಆಡಳಿತ ಮಂಡಳಿ ಗುರಿಯಾಗಿದೆ ಎಂದು ವೆಬ್ಸೈಟ್ ಹೇಳಿದೆ.
Recommended Video


ಹೀಗಿದ್ದೂ ಖರೀದಿ ವ್ಯವಹಾರ ಮುಗಿದಿಲ್ಲ ಎಂದು ಮೂಲಗಳು ತಿಳಿಸಿವೆ. ಎರಡೂ ಕಂಪನಿಗಳ ನಡುವೆ ಒಮ್ಮತದ ಮೊತ್ತಕ್ಕಾಗಿ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ. ಫ್ಲಿಪ್ ಕಾರ್ಟ್ ನಲ್ಲಿ ಅತೀ ಹೆಚ್ಚು ಶೇರುಗಳನ್ನು ಹೊಂದಿರುವ ಟೈಗರ್ ಗ್ಲೋಬಲ್ ಮ್ಯಾನೇಜ್ ಮೆಂಟ್ ಮತ್ತು ಸ್ನಾಪ್ ಡೀಲ್ ನಲ್ಲಿ ಅತೀ ಹೆಚ್ಚು ಶೇರುಗಳನ್ನು ಹೊಂದಿರುವ ಸಾಫ್ಟ್ ಬ್ಯಾಂಕ್ ಗ್ರೂಪ್ ನ ನಿರ್ಧಾರದ ಮೇಲೆ ಅವಲಂಬಿತವಾಗಿದೆ.
ಒಂದೆಡೆ ಖರೀದಿ ವ್ಯವಹಾರಗಳು ನಡೆಯುತ್ತಿದ್ದರೆ ಅತ್ತ ಫ್ಲಿಪ್ ಕಾರ್ಟ್ ನಲ್ಲಿ ಹೂಡಿಕೆ ಮಾಡಲು ಸಾಫ್ಟ್ ಬ್ಯಾಂಕ್ ಚಿಂತನೆ ನಡೆಸುತ್ತಿದೆ. ಫ್ಲಿಪ್ ಕಾರ್ಟ್ ನಲ್ಲಿರುವ ಟೈಗರ್ ಗ್ಲೋಬಲ್ ಶೇರುಗಳ ಖರೀದಿಗೆ ಅದು ಮುಂದಾಗಿದೆ.
ಅದೇನೇ ಇರಲಿ ಒಂದೊಮ್ಮೆ ಸ್ನಾಪ್ ಡೀಲ್ ಕಂಪನಿಯನ್ನು ಫ್ಲಿಪ್ ಕಾರ್ಟ್ ಖರೀದಿಸಿದ್ದೇ ಆದಲ್ಲಿ ಭಾರತದ ಆನ್ಲೈನ್ ಮಾರುಕಟ್ಟೆಯಲ್ಲಿ ನಡೆದ ಅತೀ ದೊಡ್ಡ ವ್ಯವಹಾರ ಇದಾಗಲಿದೆ. ಈ ಹಿಂದೆ 'ಫ್ರೀಚಾರ್ಜ್'ನ್ನು ಸ್ನಾಪ್ ಡೀಲ್ ಸುಮಾರು 400 ಮಿಲಿಯನ್ ಡಾಲರ್ ಗೆ ಖರೀದಿಸಿತ್ತು. ಇದೀಗ 700-800 ಮಿಲಿಯನ್ ಡಾಲರ್ ಗೆ ಫ್ಲಿಪ್ ಕಾರ್ಟ್ ಇದೇ ಸ್ನಾಪ್ ಡೀಲ್ ಖರೀದಿಗೆ ಮುಂದಾಗಿದೆ.
2016ರ ಫೆಬ್ರವರಿ ಹೊತ್ತಿಗೆ ಸ್ನಾಪ್ ಡೀಲ್ ಸುಮಾರು 40,000 ಕೋಟಿ ರೂಪಾಯಿ ಬೆಲೆ ಬಾಳುತ್ತಿತ್ತು. ಆದರೆ ಅದಾದ ನಂತರ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಕಂಪೆನಿಗಳಿಗೆ ಪೈಪೋಟಿ ನೀಡುವಲ್ಲಿ ಸೋತ ಸ್ನಾಪ್ ಡೀಲ್ ನ ಮಾರುಕಟ್ಟೆ ಮೌಲ್ಯ ವಿಪರೀತ ಕುಸಿದಿತ್ತು.












Click it and Unblock the Notifications