ಬದಲಾಗದ ರೆಪೋ, ರಿವರ್ಸ್ ರೆಪೋ ದರ; ಡಾಲರ್ ವಿರುದ್ಧ ರುಪಾಯಿ 74ಕ್ಕೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರದಂದು ರೆಪೋ ದರದಲ್ಲಿ (ಸಾಲ ನೀಡುವ ದರ) ಯಾವುದೇ ಬದಲಾವಣೆ ಮಾಡಿಲ್ಲ. ಅದು 6.5%ರಲ್ಲೇ ಮುಂದುವರಿಯಲಿದೆ. ಈ ಮಧ್ಯೆ ಅಮೆರಿಕದ ಡಾಲರ್ ವಿರುದ್ಧ ಭಾರತದ ರುಪಾಯಿ ಮೌಲ್ಯ 74 ದಾಟಿ ಕುಸಿದಿದೆ. ತಜ್ಞರು ರಿಸರ್ವ್ ಬ್ಯಾಂಕ್ ರೆಪೋ ದರವನ್ನು 25 ಮೂಲಾಂಶ ಏರಿಸಬಹುದು ಎಂಬ ನಿರೀಕ್ಷೆಯಲ್ಲಿದ್ದರು.
ಇದೇ ವೇಳೆ ರಿವರ್ಸ್ ರೆಪೋ ದರ ಅಂದರೆ ಕಮರ್ಷಿಯಲ್ ಬ್ಯಾಂಕ್ ಗಳಿಂದ ರಿಸರ್ವ್ ಬ್ಯಾಂಕ್ ಪಡೆಯುವ ಸಾಲ ಮೇಲಿನ ದರದಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ. ಅದು ಕೂಡ 6.25%ರಲ್ಲೇ ಮುಂದುವರಿಯಲಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುತ್ತಿರುವ ತೈಲ ದರ, ರುಪಾಯಿ ದುರ್ಬಲಗೊಳ್ಳುತ್ತಿರುವ ಕಾರಣಕ್ಕೆ ರೆಪೋ ಹಾಗೂ ರಿವರ್ಸ್ ರೆಪೋ ದರ ಏರಿಸಬಹುದು ಎಂಬ ನಿರೀಕ್ಷೆ ಬಹಳ ಇತ್ತು.
ಈ ಹಿಂದೆ ಎರಡು ಬಾರಿ ಹಣಕಾಸು ನೀತಿ ಪರಿಶೀಲನಾ ಸಭೆಯಲ್ಲೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿ ದರವನ್ನು ಏರಿಕೆ ಮಾಡಿತ್ತು. ಅಂದರೆ ಈ ವರ್ಷದ ಜೂನ್ ಹಾಗೂ ಆಗಸ್ಟ್ ನಲ್ಲಿ ನೀತಿ ಪರಿಶೀಲನಾ ಸಭೆ ನಡೆದಿತ್ತು. ಒಟ್ಟು ಆರು ಸದಸ್ಯರು ಇರುವ ಮಂಡಳಿಯ ಪೈಕಿ ಐವರು ದರದಲ್ಲಿ ಬದಲಾವಣೆ ಬೇಡ ಎಂಬ ನಿರ್ಧಾರದ ಪರವಾಗಿ ಮತ ಚಲಾಯಿಸಿದರು.

ಆರ್ಥಿಕ ವರ್ಷ ಕೊನೆಗೊಳ್ಳುವ ಮಾರ್ಚ್ 2019ಕ್ಕೆ ಜಿಡಿಪಿ ಪ್ರಗತಿ ದರ ಅಂದಾಜು 7.4% ಇರುವ ಅಂದಾಜನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಡಿದೆ.












Click it and Unblock the Notifications