Gold News: ಒಟ್ಟು 77 ಟನ್ ಚಿನ್ನ ಖರೀದಿಸಿದ RBI
ಮುಂಬೈ, ಡಿಸೆಂಬರ್ 12: ಭಾರತೀಯ ರಿಸರ್ವ್ ಬ್ಯಾಂಕ್ (RBI) ಭವಿಷ್ಯದ ದೃಷ್ಟಿಯಿಂದ ಈ ವರ್ಷ ಅತ್ಯಧಿಕ ಚಿನ್ನ ಖರೀದಿಸಿದೆ. ಅಕ್ಟೋಬರ್‌ನಲ್ಲಿ ಆರ್‌ಬಿಐ ಖರೀದಿಸಿದ ಬಂಗಾರವು ಇತರ ಕೇಂದ್ರೀಯ ಬ್ಯಾಂಕ್‌ಗಳು ಖರೀದಿಸಿದ ಒಟ್ಟು ಚಿನ್ನದ ಶೇಕಡಾ 48ರಷ್ಟು ಎಂದು ವರದಿ ಆಗಿದೆ. ಪ್ರಸಕ್ತ ಅಕ್ಟೋಬರ್ ವರೆಗೆ ಆರ್‌ಬಿಐ ಬರೋಬ್ಬರಿ 77 ಟನ್ ಚಿನ್ನ ಖರೀದಿಸಿದೆ. ಈ ಎಲ್ಲ ಅಂಕಿಸಂಖ್ಯೆಗಳನ್ನು ನೋಡಿದರೆ ಚಿನ್ನದ ಬೇಡಿಕೆ ಎಷ್ಟಿದೆ ಎಂಬುದು ಗೊತ್ತಾಗುತ್ತದೆ.
ಅಕ್ಟೋಬರ್ ಒಂದೇ ತಿಂಗಳಿನಲ್ಲಿ ಮೀಸಲು ಉದ್ದೇಶಕ್ಕಾಗಿ (ಹೋಮ್ ರಿಸರ್ವ್) 27 ಟನ್ ಗಳನ್ನು ಆರ್‌ಬಿಐ ಖರೀದಿ ಮಾಡಿದೆ. ಜನವರಿಯಿಂದ ಅಕ್ಟೋಬರ್ ತಿಂಗಳ ವರೆಗೆ 77 ಟನ್ ಬಂಗಾರ ಖರೀದಿಯ ಮೂಲಕ ಆರ್‌ಬಿಐ ರಿಸರ್ವ್ ಪ್ರಮಾಣವು ಒಟ್ಟು 882 ಟನ್‌ಗೆ ತಲುಪಿದೆ.

ಪ್ರಸಕ್ತ ಸಾಲಿನಲ್ಲಿ ಕೇಂದ್ರೀಯ ಬ್ಯಾಂಕ್‌ಗಳು ಅಕ್ಟೋಬರ್ ಒಂದೇ ತಿಂಗಳಲ್ಲಿ 60ಟನ್ ಬಂಗಾರ ಖರೀದಿಸಿವೆ ಎಂದು ವಿಶ್ವ ಚಿನ್ನ ಸಮಿತಿ (WGC) ನೀಡಿರುವ ಅಂಕಿ ಅಂಶಗಳಿಂದ ಮಾಹಿತಿ ಬಯಲಾಗಿದೆ.
ಅಕ್ಟೋಬರ್ ತಿಂಗಳಿನಲ್ಲಿ ಚಿನ್ನ ಖರೀದಿಯ ಬೆಲೆ $2750/ಔನ್ಸ್ ಮಾರ್ಕ್ ದಾಟಿತು. ಇತಿಹಾಸದಲ್ಲಿ ಅಧಿಕ ಬೆಲೆಗೆ ಅಧಿಕ ಚಿನ್ನವನ್ನು ಬ್ಯಾಂಕ್‌ಗಳು ಖರೀದಿಸಿವೆ. ಬ್ಯಾಂಕ್‌ಗಳ ಬೇಡಿಕೆಯಿಂದಾಗಿ ಚಿನ್ನದ ಬೆಲೆಯು ಗಗನಕ್ಕೆ ಏರಿದೆ. ಕಳೆದ ವರ್ಷ 2023 ರ ಜನವರಿ-ಅಕ್ಟೋಬರ್ ಇದೇ ಅವಧಿಗೆ ಐದು ಪಟ್ಟು ಹೆಚ್ಚಳ ಈ ಬಾರಿ ಖರೀದಿ ಆಗಿದೆ ಎಂದು TNIE ವರದಿ ಮಾಡಿದೆ.
ಕೇಂದ್ರೀಯ ಬ್ಯಾಂಕ್‌ಗಳು ಜನವರಿಯಿಂದ ಸೆಪ್ಟೆಂಬರ್ ವರೆಗೆ 24 ಟನ್ ಚಿನ್ನ ಖರೀದಿಸಿವೆ. ಮೀಸಲು ಪ್ರಮಾಣ ಒಟ್ಟು 854.73 ಟನ್‌ಗೆ ಮುಟ್ಟಿದೆ. ಮಾರ್ಚ್ 2024ರ ಅಂತ್ಯದ ವೇಳೆಗೆ ಬ್ಯಾಂಕ್‌ಗಳ ಮೀಸಲುಗಾಗಿ ಚಿನ್ನ ಖರೀದಿ ಪ್ರಮಾಣ 822.73 ಟನ್ ಆಗಿದೆ.
ಬೆಲೆ ಹೆಚ್ಚಿದರೂ ಕುಗ್ಗದ ಬಂಗಾರದ ಬೇಡಿಕೆ
ಚಿನ್ನಕ್ಕೆ ಬ್ಯಾಂಕ್‌ಗಳಿಂದಲೇ ಅಧಿಕ ಬೇಡಿಕೆ ಸೃಷ್ಟಿಯಾಗಿರುವ ಸಂದರ್ಭದಲ್ಲಿ ಚಿನ್ನದ ಬೆಲೆ ಎಷ್ಟೇ ಹೆಚ್ಚಾದರೂ ಗ್ರಾಹಕರಿಂದಲೂ ಅಧಿಕ ಬೇಡಿಕೆ ಮುಂದುವರಿಯಲಿದೆ. ಬೆಲೆ ಹೆಚ್ಚಾದರೂ ಭಾರತದಂತಹ ರಾಷ್ಟ್ರಗಳಲ್ಲಿ ಬಂಗಾರಕ್ಕೆ ಬೇಡಿಕೆ ಕುಂದಿಲ್ಲ. ಈ ಕಾರಣದಿಂದಲೇ ದೈನಂದಿನ ಬೆಲೆಯಲ್ಲಿ ವ್ಯತ್ಯಾಸಗಳು ಕಂಡು ಬಂದರೂ ಬೇಡಿಕೆ ಮಾತ್ರ ಏರುಗತಿಯಲ್ಲಿದೆ.
ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ
ಗುರುವಾರ ಡಿಸೆಂಬರ್ 12ರಂದು ಕರ್ನಾಟಕ ಒಳಗೊಂಡಂತೆ ಭಾರತದಲ್ಲಿ ಚಿನ್ನದ ಬೆಲೆಯು ಸ್ಥಿರವಾಗಿದೆ. 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 72850, 24 ಕ್ಯಾರಟ್ ಚಿನ್ನದ ಬೆಲೆ 79470 ರೂಪಾಯಿ ಇದೆ. ಇನ್ನೂ ಇಂದು ಬೆಳ್ಳಿಯ ಬೆಲೆ ಕೊಂಚ ಏರಿಕೆ ಆಗಿದೆ. ಒಂದು ಗ್ರಾಂ ಬೆಳ್ಳಿಗೆ 1 ರೂಪಾಯಿಯಂತೆ 100 ಗ್ರಾಂ ಬೆಳ್ಳಿಗೆ 100 ರೂಪಾಯಿ ಹೆಚ್ಚಳವಾಗಿದೆ.












Click it and Unblock the Notifications