Multibagger Stocks: ಈ ರೈಲ್ವೆ ಷೇರು ಬೆಲೆ ಎರಡೇ ವರ್ಷದಲ್ಲಿ 33 ರಿಂದ 603 ರೂಪಾಯಿಗೆ ಏರಿಕೆ; ಹೂಡಿಕೆದಾರರಿಗೆ ಭರ್ಜರಿ ಲಾಭ
ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL) ಷೇರುಗಳು ಕಳೆದ ಎರಡು ವರ್ಷಗಳಲ್ಲಿ ಹೂಡಿಕೆದಾರರಿಗೆ ಭರ್ಜರಿ ಲಾಭ ಮಾಡಿಕೊಟ್ಟಿವೆ. ದೀರ್ಘಕಾಲದ ಅವಧಿಗೆ ಹೂಡಿಕೆ ಮಾಡಿದರೆ ಎಷ್ಟೆಲ್ಲಾ ಲಾಭ ಪಡೆಯಬಹುದು ಎನ್ನುವುದಕ್ಕೆ ಈ ಷೇರು ಕೂಡ ಉತ್ತಮ ಉದಾಹರಣೆಯಾಗಿದೆ. ಆಗಸ್ಟ್ 26, 2022ರಲ್ಲಿ 32.30 ರೂಪಾಯಿ ಇದ್ದ ಒಂದು ಷೇರಿನ ಬೆಲೆ ಇಂದು 603.55 ರೂಪಾಯಿಗೆ ಏರಿಕೆಯಾಗಿದೆ.
ಕೇವಲ 2 ವರ್ಷಗಳಲ್ಲಿ ಈ ಷೇರು ಹೂಡಿಕೆದಾರರಿಗೆ 1,718% ಆದಾಯವನ್ನು ತಂದುಕೊಟ್ಟಿದೆ. ಅದರಲ್ಲೂ 2024ರಲ್ಲಿ ಈ ಷೇರುಗಳು ನಾಗಾಲೋಟದಲ್ಲಿ ಏರಿಕೆಯಾಗಿವೆ. ಮೇ 10, 2024 ರಂದು 261 ರೂಪಾಯಿ ಇದ್ದ ಒಂದು ಷೇರಿನ ಬೆಲೆ, ಕೇವಲ ಮೂರು ತಿಂಗಳ ಅವಧಿಯಲ್ಲಿ ದುಪ್ಪಟ್ಟಾಗಿದೆ.

ಆರ್ ವಿಎನ್‌ಎಲ್ ಸಂಸ್ಥೆಯು ಪಟೇಲ್ ಇಂಜಿನಿಯರಿಂಗ್ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದ ನಂತರ ಪ್ರಸಕ್ತ ಅವಧಿಯಲ್ಲಿ, ಬಿಎಸ್‌ಇ ನಲ್ಲಿ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ಷೇರುಗಳು 3.75% ರಷ್ಟು ಏರಿಕೆಯಾಗಿದ್ದು, ಒಟ್ಟು 6.86 ಲಕ್ಷ ಷೇರುಗಳು 40.51 ಕೋಟಿ ರೂಪಾಯಿ ವಹಿವಾಟು ನಡೆಸಿವೆ.
ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL) ಒಂದು ಲಾರ್ಜ್ ಕ್ಯಾಪ್ ಕಂಪನಿಯಾಗಿದ್ದು, 1.26 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಸಾರ್ವಜನಿಕ ವಲಯದ ಉದ್ದಿಮೆ ಆಗಿರುವ ಕಾರಣ, ನಷ್ಟದ ಭೀತಿ ಕೂಡ ಕಡಿಮೆ ಇರುವ ಕಾರಣ ಹೂಡಿಕೆದಾರರು ಧೈರ್ಯವಾಗಿ ಷೇರು ಖರೀದಿ ಮಾಡಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಖರೀದಿ ಮಾಡಿದ್ದವರಿಗೆ ಇದೀಗ ಭರ್ಜರಿ ಲಾಭವಾಗಿದೆ.
ಆರ್ ವಿಎನ್‌ಎಲ್ ಕೆಲಸವೇನು?
ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL) ಭಾರತೀಯ ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿದೆ (PSU). ರೈಲ್ವೆ ಇಲಾಖೆಯ ಯೋಜನೆಗಳ ಅನುಷ್ಠಾನ ಮತ್ತು ಸಾರಿಗೆ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ರೈಲ್ವೆ ಸಚಿವಾಯಲಯದ ಜೊತೆ ಕೆಲಸ ಮಾಡುತ್ತದೆ. ಮೂಲಸೌಕರ್ಯ ಅಗತ್ಯಗಳ ಪೂರೈಕೆ ಮತ್ತು ಯೋಜನೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸಲು, ರೈಲ್ವೆ ಉಪಕರಣಗಳ ಕಂಪನಿಯನ್ನು ರಚಿಸಲು 2003ರಲ್ಲಿ ಇದನ್ನು ಆರಂಭಿಸಲಾಗಿದೆ. ಇದು ಭಾರತ ಸರ್ಕಾರದ ರೈಲ್ವೇ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿದ್ದು, ಭಾರತದ ನವರತ್ನ ಸಾರ್ವಜನಿಕ ವಲಯದ ಉದ್ಯಮವಾಗಿದೆ.
2019 ಏಪ್ರಿಲ್ 12ರಂದು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡಲಾಯಿತು. ಅಂದು ಒಂದು ಷೇರು ಮೌಲ್ಯ 19.75 ರೂಪಾಯಿ ಆಗಿತ್ತು, ಅಂದಿನಿಂದ 2022 ನವೆಂಬರ್ ವರೆಗೆ ಷೇರು ಬೆಲೆ 46 ರೂಪಾಯಿಗೆ ಮಾತ್ರ ಏರಿಕೆಯಾಗಿತ್ತು. ಬಳಿಕ 4 ವರ್ಷಗಳಲ್ಲಿ ಷೇರು ಮೌಲ್ಯ 600 ರೂಪಾಯಿಗಳನ್ನು ಮೀರಿ ಹೋಗಿದೆ.
Disclaimer: ಒನ್‌ಇಂಡಿಯಾ ಷೇರು ಮಾರುಕಟ್ಟೆ ಸುದ್ದಿಗಳನ್ನು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ನೀಡುತ್ತದೆ. ಇದನ್ನು ಹೂಡಿಕೆ ಸಲಹೆ ಎಂದು ಪರಿಗಣಿಸಬಾರದು. ಯಾವುದೇ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ತಜ್ಞ ಹಣಕಾಸು ಸಲಹೆಗಾರರ ಜತೆ ಚರ್ಚಿಸುವಂತೆ ಮನವಿ ಮಾಡಲಾಗಿದೆ.












Click it and Unblock the Notifications