PNG Gas: ಎಲ್‌ಪಿಜಿ ಸಿಲಿಂಡರ್ ಮೇಲಿನ ಅವಲಂಬನೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ
PNG Gas: ಇನ್ಮುಂದೆ ಗ್ಯಾಸ್ ಸಿಲಿಂಡರ್ ಖಾಲಿ ಆಯಿತೆಂದು ಕಾಯುವ, ಭಾರವಾದ ಸಿಲಿಂಡರ್ ಹೊತ್ತು ತರುವ ಕಿರಿಕಿರಿ ಇರುವುದಿಲ್ಲ. ನಿಮ್ಮ ಮನೆಯ ನಲ್ಲಿಗಳಲ್ಲಿ ನೀರು ಬರುವಂತೆಯೇ ಅಡುಗೆ ಮನೆಗೂ ನೇರವಾಗಿ ಅನಿಲ ಹರಿಯುವ ಹೊಸ ಯುಗ ಆರಂಭವಾಗುತ್ತಿದೆ. ದೇಶಾದ್ಯಂತ ಸಾಂಪ್ರದಾಯಿಕ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಗುಡ್‌ಬೈ ಹೇಳಿ, ಸುರಕ್ಷಿತ ಹಾಗೂ ಅಗ್ಗದ ಪೈಪ್‌ಡ್ ನ್ಯಾಚುರಲ್ ಗ್ಯಾಸ್ ತಲುಪಿಸಲು ಮಹತ್ವದ ಯೋಜನೆಗೆ ಕೇಂದ್ರ ಸರ್ಕಾರ ವೇಗ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತದಲ್ಲಿ ಗೃಹಬಳಕೆಯ ಅಡುಗೆ ಅನಿಲ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಸಾಂಪ್ರದಾಯಿಕ ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಮನೆಮನೆಗಳಿಗೆ ನೇರವಾಗಿ ಪೈಪ್‌ಲೈನ್ ಮೂಲಕ ಅಂದರೆ ಪಿಎನ್‌ಜಿ ಸರಬರಾಜು ಮಾಡುವ ಯೋಜನೆಯನ್ನು ವೇಗಗೊಳಿಸಲು ಸರ್ಕಾರ ಕಾರ್ಯತಂತ್ರ ರೂಪಿಸಿದೆ.

ಪಿಎನ್‌ಜಿಯಿಂದ ಏನೆಲ್ಲಾ ಪ್ರಯೋಜನಾ?
ಪ್ರಸ್ತುತ ದೇಶದಲ್ಲಿ ಕೋಟ್ಯಂತರ ಕುಟುಂಬಗಳು ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸುತ್ತಿದ್ದು, ಇದಕ್ಕೆ ಅಪಾರ ಪ್ರಮಾಣದ ಸಬ್ಸಿಡಿ ಮತ್ತು ಆಮದು ವೆಚ್ಚ ತಗಲುತ್ತಿದೆ. ಗ್ರಾಹಕರಿಗೆ ಸಿಲಿಂಡರ್‌ಗಳಿಗಿಂತ ಪಿಎನ್‌ಜಿ ಬಳಕೆಯು ಶೇಕಡಾ 15 ರಿಂದ 20ರಷ್ಟು ಅಗ್ಗವಾಗಲಿದೆ. ಸಿಲಿಂಡರ್‌ಗಳ ಸಾಗಣೆ, ರೀಫಿಲ್ ಮಾಡುವ ಶ್ರಮ ಮತ್ತು ವಿತರಣಾ ವೆಚ್ಚ ತೀವ್ರವಾಗಿ ಕಡಿಮೆ ಆಗುತ್ತದೆ.
ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ ಜಾಲವನ್ನು ದೇಶಾದ್ಯಂತ ವಿಸ್ತರಿಸಲು ನಗರಾಭಿವೃದ್ಧಿ ಮತ್ತು ಪೆಟ್ರೋಲಿಯಂ ಸಚಿವಾಲಯಗಳು ಜಂಟಿಯಾಗಿ ಕೆಲಸ ಮಾಡುತ್ತಿವೆ. ಮೂಲಸೌಕರ್ಯ ಅಭಿವೃದ್ಧಿಗೆ ಇರುವ ಅಡೆತಡೆಗಳನ್ನು ನಿವಾರಿಸಲು ಸ್ಥಳೀಯ ಆಡಳಿತ ಮತ್ತು ರಾಜ್ಯ ಸರ್ಕಾರಗಳ ಜೊತೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಪಿಎನ್‌ಜಿ ಸಂಪರ್ಕ ಕಡ್ಡಾಯ ಸಾಧ್ಯತೆ
ಪೈಪ್‌ಲೈನ್ ಅಳವಡಿಕೆಗೆ ರಸ್ತೆಗಳನ್ನು ಅಗೆಯಲು ಸ್ಥಳೀಯ ಸಂಸ್ಥೆಗಳು ವಿಧಿಸುವ ಅತಿಯಾದ ಶುಲ್ಕ ತಪ್ಪಿಸಲು ಮತ್ತು ನಿಯಮಗಳನ್ನು ಸುಲಭಗೊಳಿಸಲು ಸೂಚಿಸಲಾಗಿದೆ. ಹೊಸದಾಗಿ ನಿರ್ಮಿಸಲಾಗುವ ಅಪಾರ್ಟ್‌ಮೆಂಟ್‌ಗಳು ಮತ್ತು ವಸತಿ ಸಮುಚ್ಚಯಗಳಲ್ಲಿ ಪಿಎನ್‌ಜಿ ಪೈಪ್‌ಲೈನ್ ಸಂಪರ್ಕದ ಮೂಲಸೌಕರ್ಯವನ್ನು ಕಡ್ಡಾಯಗೊಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಮುಂದಿನ ಕೆಲವು ವರ್ಷಗಳಲ್ಲಿ ದೇಶದ ಬಹುತೇಕ ನಗರ ಪ್ರದೇಶಗಳ ಶೇಕಡಾ 70ಕ್ಕೂ ಹೆಚ್ಚು ಮನೆಗಳಿಗೆ ಪಿಎನ್‌ಜಿ ಸಂಪರ್ಕ ಕಲ್ಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಪಿಎನ್‌ಜಿ ಬಳಕೆಯಿಂದ ಗ್ರಾಹಕರಿಗೆ ಸಿಲಿಂಡರ್ ಬುಕ್ ಮಾಡುವ, ಖಾಲಿಯಾದಾಗ ಕಾಯುವ ಅಥವಾ ಸಿಲಿಂಡರ್ ಬದಲಾಯಿಸುವ ಕಿರಿಕಿರಿ ಇರುವುದಿಲ್ಲ.
ಅಲ್ಲದೆ ವಿದ್ಯುತ್ ಮತ್ತು ನೀರಿನ ಬಿಲ್‌ನಂತೆ, ಬಳಸಿದ ಅನಿಲಕ್ಕೆ ತಕ್ಕಂತೆ ತಿಂಗಳ ಕೊನೆಯಲ್ಲಿ ಡಿಜಿಟಲ್ ಪಾವತಿ ಮಾಡಬಹುದು. ಇದು ನಿರಂತರ ಮತ್ತು ಸುರಕ್ಷಿತ ಅನಿಲ ಪೂರೈಕೆಯನ್ನು ಖಾತರಿಪಡಿಸುತ್ತದೆ. ಕೇಂದ್ರ ಸರ್ಕಾರದ ಈ ನೀತಿಯು ಭಾರತವನ್ನು ಗ್ಯಾಸ್ ಆಧಾರಿತ ಆರ್ಥಿಕತೆಯತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಲಾಗುತ್ತಿದೆ.
ಪಿಎನ್‌ಜಿ ಎಂದರೇನು?
ಪಿಎನ್‌ಜಿ (PNG) ಎಂದರೆ ಪೈಪ್ಡ್ ನ್ಯಾಚುರಲ್ ಗ್ಯಾಸ್ (Piped Natural Gas). ಮನೆಗಳಿಗೆ ಪೈಪ್‌ಲೈನ್ ಮೂಲಕ ನೈಸರ್ಗಿಕ ಅನಿಲವನ್ನು ನೇರವಾಗಿ ಪೂರೈಸುವ ವ್ಯವಸ್ಥೆಯೇ ಪಿಎನ್‌ಜಿ. ನಗರ ಪ್ರದೇಶಗಳಲ್ಲಿ ಅಡುಗೆ ಅನಿಲದ ಪರ್ಯಾಯವಾಗಿ ಇದನ್ನು ಬಳಸಲಾಗುತ್ತಿದೆ. ಎಲ್‌ಪಿಜಿ ಸಿಲಿಂಡರ್‌ನಂತೆ ಪದೇಪದೇ ಸಿಲಿಂಡರ್ ಬುಕ್ ಮಾಡಿ ಮನೆಗೆ ತರಿಸಿಕೊಳ್ಳುವ ಅಗತ್ಯವಿಲ್ಲ. ಪೈಪ್‌ಲೈನ್ ಸಂಪರ್ಕದ ಮೂಲಕ ನಿರಂತರವಾಗಿ ಅನಿಲ ಲಭ್ಯವಾಗುತ್ತದೆ.
ಪಿಎನ್‌ಜಿ ಮುಖ್ಯವಾಗಿ ಮೀಥೇನ್ ಒಳಗೊಂಡ ನೈಸರ್ಗಿಕ ಅನಿಲವಾಗಿದ್ದು, ಅಡುಗೆ ಸೇರಿದಂತೆ ಹಲವು ಗೃಹಬಳಕೆಯ ಅಗತ್ಯಗಳಿಗೆ ಉಪಯೋಗಿಸಬಹುದು. ಇದರ ಬಳಕೆಯಿಂದ ಸಿಲಿಂಡರ್ ಸಂಗ್ರಹಿಸುವ ಅಗತ್ಯ ಕಡಿಮೆಯಾಗುತ್ತದೆ. ಆದರೆ ಪಿಎನ್‌ಜಿ ಸಂಪರ್ಕ ಪಡೆಯಲು ಸಂಬಂಧಿತ ಅನಿಲ ವಿತರಣಾ ಸಂಸ್ಥೆಯ ಪೈಪ್‌ಲೈನ್ ನಿಮ್ಮ ಪ್ರದೇಶದಲ್ಲಿ ಲಭ್ಯವಿರಬೇಕಾಗುತ್ತದೆ.


Click it and Unblock the Notifications
