ಐಗೇಟ್ ಮೇಲೆ ಕಾನೂನು ಸಮರ ಸಾರಿದ ಫಣೀಶ್
ಕ್ಯಾಲಿಫೋರ್ನಿಯಾ, ಡಿ.10: ಮಹಿಳಾ ಸಹೋದ್ಯೋಗಿ ಜತೆ ಲೈಂಗಿಕ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಸಿಇಒ ಹುದ್ದೆಯಿಂದ ಕಳೆದ ಮೇ ತಿಂಗಳಲ್ಲಿ ವಜಾಗೊಂಡಿದ್ದ ಫಣೀಶ್ ಮೂರ್ತಿ, ಈಗ 'ಐಗೇಟ್' ಕಂಪನಿ ವಿರುದ್ಧ ಕಾನೂನು ಸಮರ ಸಾರಿದ್ದಾರೆ.
ಅರಸೆಲಿ ರೊಯಿಜ್ ಅವರೊಡನೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ಹೊಂದಿದ ಆರೋಪ ಹೊತ್ತಿ ಐಗೇಟ್ ನಿಂದ ಹೊರಬಿದ್ದಿದ್ದ ಫಣೀಶ್ ಅವರು ಈಗ ಐಗೇಟ್ ವಿರುದ್ಧ ಕಿಡಿಕಾರಿದ್ದಾರೆ. ನಮ್ಮಿಬ್ಬರ ಸಂಬಂಧದ ಬಗ್ಗೆ ಕಂಪನಿಗೆ ಗೊತ್ತಿತ್ತು. ಆದರೂ. ಐಗೇಟ್ ತಮ್ಮನ್ನು ಸಿಇಒ ಹುದ್ದೆಯಿಂದ ವಜಾ ಮಾಡಲು ಕಂಪನಿಯ ನೀತಿಗಳನ್ನು ಅನುಚಿತವಾಗಿ ಬಳಸಿಕೊಂಡಿದೆ ಎಂದು ಫಣೀಶ್ ಮೂರ್ತಿ, ಕ್ಯಾಲಿಫೋರ್ನಿಯಾ ನ್ಯಾಯಾಲಯದಲ್ಲಿ ಸೋಮವಾರ ಕಟ್ಲೆ ಹೂಡಿದ್ದಾರೆ.
ರೋಯಿಜ್ ಅವರು ಬೇಡದ ಗರ್ಭವನ್ನು ತೆಗೆಸಲು ನಿರಾಕರಿಸಿದ್ದು, ಅಬಾರ್ಷನ್ ಗೆ ಒಪ್ಪಿಲ್ಲ. ರೊಯಿಜ್ ಅವರನ್ನು ಕೆಲಸದಿಂದ ತೆಗೆದು ಹಾಕಲು ಫಣೀಶ್ ಯತ್ನಿಸಿದ್ದರು. ಜೊತೆ ಸಂಬಂಧವನ್ನು ಗುಪ್ತವಾಗಿ ಇರಿಸಿಕೊಳ್ಳಲು ಯೋಜಿಸಿದ್ದರು ಎಂದು ರೋಯಿಜ್ ಪರ ಕಾನೂನು ಸಂಸ್ಥೆ ಐಮಾನ್ ಸ್ಮಿತ್ ಅಂಡ್ ಮರ್ಸಿ ಹೇಳಿಕೆ ನೀಡಿತ್ತು.
ಈ ನಡುವೆ ತಮಗೆ ಬರಬೇಕಾದ ಸುಮಾರು 17 ದಶಲಕ್ಷ ಡಾಲರ್ ಮೌಲ್ಯದ ಷೇರುಗಳನ್ನು ಕಂಪನಿ ಕೊಟ್ಟಿಲ್ಲ. 2012 ಜನವರಿಯಿಂದ ಮಹಿಳಾ ಸಹೋದ್ಯೋಗಿ ಜತೆ ಹೊಂದಿದ್ದ ಸಂಬಂಧದ ಬಗ್ಗೆ ಕಂಪನಿಯ ಆಡಳಿತ ಮಂಡಳಿಯ ಸ್ವತಂತ್ರ ನಿರ್ದೇಶಕರೊಬ್ಬರಿಗೆ ತಿಳಿದಿತ್ತು. ಈ ಬಗ್ಗೆ ಅವರು ಪ್ರಸ್ತಾಪಿಸಿರುವ ಪತ್ರ ತಮ್ಮ ಬಳಿ ಇದೆ ಎಂದು ಫಣೀಶ್ ಮೂರ್ತಿ ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ಅರಾಸೆಲಿ ರೂಯಿಜ್ ಜತೆ ತಾವು ಹೊಂದಿದ್ದ ಸಂಬಂಧ ಕುರಿತು ಐಗೇಟ್ ಆಡಳಿತ ಮಂಡಳಿಗೆ ಗೊತ್ತಿತ್ತು. ಈ ಬಗ್ಗೆ ಸ್ವತಂತ್ರ ನಿರ್ದೇಶಕರ ಬರೆದಿರುವ ಸಹಿ ಇರುವ ಪತ್ರ ತಮ್ಮ ಬಳಿ ಇದೆ. ಈ ಪತ್ರವೇ ತಮಗೆ ಸಾಕ್ಷಿ ಎಂದು ಫಣೀಶ್ ಮೂರ್ತಿ ತಿಳಿಸಿದ್ದಾರೆ.
ಐಗೇಟ್ ವಕ್ತಾರ ಪ್ರಭಾಂಜನ್ ದೇಶಪಾಂಡೆ ಪ್ರತಿಕ್ರಿಯೆ ನೀಡಿ, ಫಣೀಶ್ ಮೂರ್ತಿ ಅವರ ಕ್ಲೇಮಿಗೆ ಯಾವುದೇ ಮಹತ್ವ ಇಲ್ಲ. ಮೂರ್ತಿ ದಾವೆಯನ್ನು ಕಂಪನಿ ಸಮರ್ಥವಾಗಿ ನ್ಯಾಯಾಲಯದಲ್ಲಿ ಎದುರಿಸಲಿದೆ. ಅವರನ್ನು ಸಿಇಒ ಹುದ್ದೆಯಿಂದ ವಜಾ ಮಾಡಿದ ಕ್ರಮವನ್ನು ಸಮರ್ಥಿಸಿಕೊಳ್ಳಲಿದ್ದೇವೆ ಎಂದಿದ್ದಾರೆ.
ಉದ್ಯೋಗ ಅಂತ್ಯ ಸವಲತ್ತುಗಳು, ಹಕ್ಕಿನ ಷೇರು ಮತ್ತು ಮಾನಹಾನಿ ಸವಲತ್ತು ಪಡೆಯಲು ಕ್ಯಾಲಿಫೋರ್ನಿಯಾ ಕೋರ್ಟ್ ನಲ್ಲಿ ದಾವೆ ಹೂಡಿದ್ದೇನೆ ಎಂದು ಮೂರ್ತಿ ತಿಳಿಸಿದ್ದಾರೆ.
2002ರಲ್ಲಿ ಇನ್ಫೋಸಿಸ್ ಉದ್ಯೋಗಿಯಾಗಿದ್ದಾಗ Reka Maximovitch ಎಂಬುವರು ಫಣೀಶ್ ಮೂರ್ತಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರೆಸಿದ್ದರು. ಈ ಕಾನೂನು ತೊಡಕು ಪರಿಹರಿಸಿಕೊಳ್ಳಲು ಇನ್ಫೋಸಿಸ್ ಗೆ 3 ಮಿಲಿಯನ್ ಡಾಲರ್ ಖರ್ಚಾಗಿತ್ತು. ಫಣೀಶ್ ಗೆ ಇನ್ಫೋಸಿಸ್ ಕೆಲಸ ಹೋಯಿತು. ಆದರೆ,ಈ ಬಾರಿ ಫಣೀಶ್ ಅವರು ಮುಂದಾಲೋಚನೆ ಮಾಡಿ ಐಗೇಟ್ ಸಂಸ್ಥೆಯಲ್ಲಿದ್ದ ತಮ್ಮ 1,50,000 ಷೇರುಗಳನ್ನು ಮಾರಾಟಮಾಡಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿತ್ತು.
ನಾಸ್ಡಾಕ್ ವರದಿಯನ್ನು ಉಲ್ಲೇಖಿಸಿ ಟೈಮ್ ಆಫ್ ಇಂಡಿಯಾ ನೀಡಿರುವ ವರದಿ ಪ್ರಕಾರ ಮೂರ್ತಿ ಅವರು ಮಾರ್ಚ್ 6 ರಂದು 104,459 ಷೇರುಗಳನ್ನು $18.88 ದರದಂತೆ ಮಾರಾಟ ಮಾಡಿ 1.97 ಮಿಲಿಯನ್ ಡಾಲರ್ ಜೇಬಿಗಿಳಿಸಿಕೊಂಡಿದ್ದಾರೆ. ಒಂದು ತಿಂಗಳ ನಂತರ ಏಪ್ರಿಲ್ 19 ರಂದು ಮೂರ್ತಿ ಮತ್ತೊಮ್ಮೆ 40,000 ಷೇರುಗಳನ್ನು 17.1 ಡಾಲರ್ ದರದಂತೆ ಮಾರುವ ಮೂಲಕ 684,000 ಡಾಲರ್ ಗಳಿಸಿದ್ದಾರೆ.











Click it and Unblock the Notifications