ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಜೊತೆ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್..
Ritesh Agarwal And Elan Musk: ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಹಾಗೂ ವಿಶ್ವದ ಶ್ರೀಮಂತ ಉದ್ಯಮಿಗಳಲ್ಲೊಬ್ಬರಾದ ಎಲಾನ್ ಮಸ್ಕ್ ಅವರು ಜೊತೆಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನು ಸ್ವತಃ ರಿತೇಶ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್ ಆಗುತ್ತಿದೆ. ಹಾಗಾದರೆ ಇವರಿಬ್ಬರು ಭೇಟಿಯಾಗಿದ್ದೇಕೆ? ಇದರ ಹಿಂದಿನ ಕಾರಣವೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಓಯೋ ಸಿಇಒ ರಿತೇಶ್ ಅಗರ್ವಾಲ್ ಹಾಗೂ ಖ್ಯಾತ ಉದ್ಯಮಿ ಎಲಾನ್ ಮಸ್ಕ್ ಒಟ್ಟಿಗೆ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಅಮೆರಿಕದಲ್ಲಿ ಇಂಡಿಯಾ ಗ್ಲೋಬಲ್ ಫೋರಮ್ ಉದ್ಘಾಟನೆ ಆಗಿದ್ದು, ಈ ಕಾರ್ಯದಕ್ರಮದಲ್ಲಿ ರಿತೇಶ್ ಅಗರ್ವಾಲ್ ಸೇರಿದಂತೆ ಭಾರತದ ಅನೇಕ ಖ್ಯಾತ ಉದ್ಯಮಿಗಳು ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಕೋಟಾಕ್ 811ರ ಸಹ-ಮುಖ್ಯಸ್ಥ ಜಯ್ ಕೋಟಕ್, ಓಯೋ ಸಂಸ್ಥಾಪಕ ಮತ್ತು ಸಿಇಒ ರಿತೇಶ್ ಅಗರ್ವಾಲ್, ಫ್ಲಿಪ್‌ಕಾರ್ಟ್ ಸಿಇಒ ಕಲ್ಯಾಣ್ ರಾಮನ್, ಆದಿತ್ಯ ಬಿರ್ಲಾ ಮ್ಯಾನೇಜ್‌ಮೆಂಟ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಆರ್ಯಮನ್ ಬಿರ್ಲಾ, ಅಪಾರೆಲ್ ಗ್ರೂಪ್ ಅಧ್ಯಕ್ಷ ನಿಲೇಶ್ ವೇದ್, ಲೇಖಕ ಅಮಿಶ್ ತ್ರಿಪಾಠಿ ಸೇರಿದಂತೆ ಹಲವು ಉದ್ಯಮಿಗಳು ಪಾಲ್ಗೊಂಡಿದ್ದರು.
ಇಂಡಿಯಾ ಗ್ಲೋಬಲ್ ಫೋರಮ್ ಉದ್ಯಮ ರಂಗದಲ್ಲಿ ಭಾರತ ಸಾಧಿಸಿದ ಸಾಧನೆಯ ಕಥೆಯನ್ನು ಜಗತ್ತಿಗೆ ಹೇಳುವ ಜಾಗತಿಕ ವ್ಯವಹಾರಗಳ ಸಂಸ್ಥೆ ಆಗಿದೆ. ಭಾರತದ ಬದಲಾವಣೆ ಮತ್ತು ಬೆಳವಣಿಗೆಯ ವೇಗವು ಜಗತ್ತಿಗೆ ಮಿತಿಯಿಲ್ಲದ ಅವಕಾಶಗಳನ್ನು ಒದಗಿಸುತ್ತದೆ ಎಂದು ತೋರಿಸಿಕೊಡುವುದು ಇದರ ಉದ್ದೇಶವಾಗಿದೆ ಎಂದು ಹೇಳಲಾಗುತ್ತದೆ.
ಅಮೆರಿಕಾದಲ್ಲಿರುವ ಭಾರತದ ರಾಯಭಾರಿ ಹೆಚ್‌ಇ ವಿನಯ್ ಕ್ವಾತ್ರಾ ಅವರು ಆಯೋಜಿಸಿದ್ದ ಇಂಡಿಯಾ ಹೌಸ್‌ನಲ್ಲಿ ವಿಶೇಷ ಪಾನೀಯಗಳು ಮತ್ತು ಭೋಜನದೊಂದಿಗೆ ಈ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ನಿಯೋಗವು ತಮ್ಮ ಭೇಟಿಯ 2ನೇ ದಿನದಂದು ಖ್ಯಾತ ಉದ್ಯಮಿ, ಸ್ಪೇಸ್ ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಜೊತೆಗೆ ಚರ್ಚೆ ನಡೆಸಿದರು. ಟೆಕ್ಸಾಸ್‌ನ ಸ್ಟಾರ್‌ಬೇಸ್‌ನಲ್ಲಿ ಎಲೋನ್ ಮಸ್ಕ್‌ನ ಸ್ಪೇಸ್ ಎಕ್ಸ್‌ನ ಮುಖ್ಯ ಪರೀಕ್ಷೆ ಮತ್ತು ಉತ್ಪಾದನಾ ಸ್ಥಳವಾಗಿ ಕಾರ್ಯನಿರ್ವಹಿಸುವ ರಾಕೆಟ್ ಉಡಾವಣಾ ಸೌಲಭ್ಯಗಳನ್ನು ವೀಕ್ಷಿಸಿ, ಅದರ ಬಗ್ಗೆ ಮಾಹಿತಿ ಪಡೆದರು.
ಒಟ್ಟಾಗಿ ಕೆಲಸ ಮಾಡಿದಾಗ ಪ್ರಜಾಪ್ರಭುತ್ವಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವ ಎಂದು ಇಂಡಿಯಾ ಗ್ಲೋಬಲ್ ಫೋರಂನ ಸಂಸ್ಥಾಪಕ ಮತ್ತು ಅಧ್ಯಕ್ಷ ಮನೋಜ್ ಲಾಡ್ವಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕೇವಲ ನೀತಿಗಳು ಅಥವಾ ಪ್ರವೃತ್ತಿಗಳನ್ನು ಚರ್ಚೆ ಮಾಡಲು ಅಲ್ಲದೆ, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಸಿನರ್ಜಿಗಳನ್ನು ಸಕ್ರಿಯವಾಗಿ ರೂಪಿಸಲು ಆಗಿದೆ. ವಿಶ್ವದ ಎರಡು ಶ್ರೇಷ್ಠ ಪ್ರಜಾಪ್ರಭುತ್ವಗಳು, ಸಂಕೀರ್ಣ ಮತ್ತು ವೇಗವಾಗಿ ಬದಲಾಗುತ್ತಿರುವ ಜಾಗತಿಕ ಭೂದೃಶ್ಯವನ್ನು ನ್ಯಾವಿಗೇಟ್ ಮಾಡಲು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದರು. ಇನ್ನೂ ಇದೇ ವೇಳೆ ಎಲಾನ್ ಮಸ್ಕ್ ಹಾಗೂ ಕಳೆದ ಕೆಲವು ದಿನಗಳ ಹಿಂದೆ ಅವಿವಾಹಿತರಿಗೆ ಓಯೋ ಪ್ರವೇಶದ ನಿರ್ಬಂಧದ ನಿಯಮ ಹೊರಡಿಸಿದ್ದ ರಿತೇಶ್ ಅಗರ್ವಾಲ್ ಅವರು ಜೊತೆಗೆ ಕಾಣಿಸಿಕೊಂಡು ಗಮನ ಸೆಳದಿದ್ದಾರೆ.












Click it and Unblock the Notifications