ಉದ್ಯೋಗ ತೃಪ್ತಿ: ಭಾರತವೇ ಎಲ್ಲರಿಗಿಂತ ಮುಂದೆ
ನವದೆಹಲಿ, ನ.19: ಜಾಗತಿಕ ಮಟ್ಟದಲ್ಲಿ ಹೋಲಿಸಿದರೆ ಇತರೆ ದೇಶಗಳಿಗಿಂತ ಭಾರತದಲ್ಲಿ ಸಂಬಳ ಏರಿಕೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿರಬಹುದು ಆದರೆ, ಭಾರತೀಯ ಉದ್ಯೋಗಿಗಳು ತಮ್ಮ ಕೆಲಸದ ಬಗ್ಗೆ ಸಂತೃಪ್ತ ಭಾವ ಹೊಂದಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆ ಹೇಳಿದೆ.
ಐವರು ಭಾರತೀಯರಲ್ಲಿ ಒಬ್ಬರು ತಮ್ಮ ಉದ್ಯೋಗವನ್ನು ಎಷ್ಟು ಪ್ರೀತಿಸುತ್ತಾರೆಂದರೆ ಉಚಿತವಾಗಿ ದುಡಿಯಲು ಕೂಡ ಸಿದ್ಧರಿರುತ್ತಾರೆ ಎಂದು ಅಂತಾರಾಷ್ಟ್ರೀಯ ಸಮೀಕ್ಷೆ ತಿಳಿಸಿದೆ.
ಆನ್ ಲೈನ್ ಕರಿಯರ್ ಮತ್ತು ನೇಮಕ ಸೇವೆ ಒದಗಿಸುವ ಮೋನ್ ಸ್ಟರ್ ಇಂಡಿಯಾ.ಕಾಂ ಮತ್ತು ಸ್ವತಂತ್ರ ಮಾರುಕಟ್ಟೆ ಸಂಶೋಧಕ ಜಿಎಫ್ ಕೆ ನಡೆಸಿದ ಸಮೀಕ್ಷೆ ವರದಿಯಲ್ಲಿ ಭಾರತೀಯರ ಉದ್ಯೋಗಿಗಳು ಸಂತೃಪ್ತರು ಎನ್ನಲಾಗಿದೆ.

ಶೇ.55ರಷ್ಟು ಭಾರತೀಯರು ತಮ್ಮ ಕೆಲಸವನ್ನು ತುಂಬ ಇಷ್ಟಪಡುತ್ತಾರೆ.ಕೇವಲ ಶೇ.5ರಷ್ಟು ಭಾರತೀಯರು ಮಾತ್ರ ತಾವು ಮಾಡುತ್ತಿರುವ ಕೆಲಸ ಇಷ್ಟವಾಗುತ್ತಿಲ್ಲ ಎಂದಿದ್ದಾರೆ. ಆದರೆ ಯಾರೊಬ್ಬರೂ ಕೆಲಸವನ್ನು ದ್ವೇಷಿಸುತ್ತಿರುವುದಾಗಿ ಹೇಳಿಲ್ಲ. ಜಾಗತಿಕ ಮಟ್ಟದಲ್ಲಿ ಸಂತಸದ ಶ್ರೇಯಾಂಕದಲ್ಲಿ ಕೆನಡಾ(ಶೇ.64), ನೆದರ್ಲೆಂಡ್(ಶೇ.57) ನಂತರ ಭಾರತ ಮೂರನೇ ಸ್ಥಾನದಲ್ಲಿದೆ.
ಸಮೀಕ್ಷೆಯಲ್ಲಿ ಸಂದರ್ಶಿಸಲಾಗಿದ್ದ ಏಳು ರಾಷ್ಟ್ರಗಳಲ್ಲಿ ಅಮೆರಿಕ ನಾಲ್ಕನೇ (ಶೇ.53) ಸ್ಥಾನದಲ್ಲಿದೆ. ಬ್ರಿಟನ್(ಶೇ.46), ಫ್ರಾನ್ಸ್ (ಶೇ.43) ಮತ್ತು ಜರ್ಮನಿ(ಶೇ.35) ನಂತರದ ಸ್ಥಾನಗಳಲ್ಲಿವೆ.
ಕೆನಡಾ, ಫ್ರಾನ್ಸ್, ಜರ್ಮನಿ, ಭಾರತ, ನೆದರ್ಲೆಂಡ್, ಬ್ರಿಟನ್ ಮತ್ತು ಅಮೆರಿಕದಲ್ಲಿನ 8,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸಂದರ್ಶಿಸಲಾಗಿತ್ತು. ಈ ಸಮೀಕ್ಷೆಯಲ್ಲಿ ಸುಮಾರು ಐವರಲ್ಲಿ ಒಬ್ಬ ಭಾರತೀಯರು ಉಚಿತವಾಗಿ ದುಡಿಯಲೂ ಸಿದ್ಧರಿರುತ್ತಾರೆ ಎಂದು ಹೇಳಲಾಗಿದೆ.
ಸಂತೋಷಕ್ಕೂ ಹಣಕ್ಕೂ ಸಂಬಂಧ ಇಲ್ಲ. ಭಾರಿ ಸಂಬಳ ಪಡೆಯುತ್ತಿರುವವರಿಗಿಂತ ಮಧ್ಯಮ ಮಟ್ಟದ ವೇತನದಲ್ಲಿ ಜೀವನ ನಡೆಸುತ್ತಿರುವವರು ಹೆಚ್ಚು ಸಂತಸದಲ್ಲಿರುತ್ತಾರೆ ಎಂಬ ಸಂಗತಿಯನ್ನು ಸಮೀಕ್ಷೆ ತಿಳಿಸಿದೆ.[ ಸಂಬಳ ಏರಿಕೆ ನಿರೀಕ್ಷೆ ಬೇಡ]
ಅಮೆರಿಕದಲ್ಲಿ ಬಹುತೇಕ ಮಂದಿ ತಮ್ಮ ಉದ್ಯೋಗದ ಬಗ್ಗೆ ನಕಾರಾತ್ಮಕ ಭಾವನೆ ಹೊಂದಿದ್ದಾರೆ. ಬ್ರಿಟನ್ ನಲ್ಲಿ ಶೇ.12, ಜರ್ಮನಿ ಶೇ.10, ಫ್ರಾನ್ಸ್ ಶೇ.9,ಕೆನಡಾ ಮತ್ತು ನೆದರ್ಲೆಂಡ್ಸ್ ನಲ್ಲಿ ತಲಾ ಶೇ.7 ಮಂದಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ.












Click it and Unblock the Notifications