Neal Mohan : YouTubeಗೆ ಭಾರತ ಮೂಲದ ಸಿಇಒ ನೇಮಕ, ಯಾರು ಅವರು, ವೇತನ ಎಷ್ಟು ಗೊತ್ತಾ?
ಯೂಟ್ಯೂಬ್‌ನ ಮುಖ್ಯ ಉತ್ಪನ್ನ ಅಧಿಕಾರಿ ನೀಲ್ ಮೋಹನ್ ಅವರನ್ನೇ ತಮ್ಮ ಸಂಸ್ಥೆಯ ಹೊಸ ನಾಯಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ
ನವದೆಹಲಿ, ಫೆಬ್ರವರಿ 17: ಜನಪ್ರಿಯ ಸಾಮಾಜಿಕ ಮಾಧ್ಯಮ ಯೂಟ್ಯೂಬ್‌ಗೆ ಕಳೆದ ಒಂಬತ್ತು ವರ್ಷಗಳಿಂದ ಸಿಇಒ ಆಗಿ ಸೇವೆ ಸಲ್ಲಿಸಿದ ಸುಸಾನ್ ವೊಜ್ಸಿಕಿಯ ರಾಜೀನಾಮೆ ಬಳಿಕ ಭಾರತ ಮೂಲದ ಅಮೆರಿಕನ್ ಹಿರಿಯ ಅಧಿಕಾರಿ ನೀಲ್ ಮೋಹನ್ ಅವರು ನೂತನ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ವೊಜ್ಸಿಕಿ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ 54 ವರ್ಷ ತಾವು ತಮ್ಮ ಕುಟುಂಬ, ಆರೋಗ್ಯ ಮತ್ತು ವೈಯಕ್ತಿಕ ಯೋಜನೆಗಳಿಗೆ ಆದ್ಯತೆ ನೀಡಲಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. 2014ರಲ್ಲಿ ಗೂಗಲ್‌ನಲ್ಲಿ ಜಾಹೀರಾತು ಉತ್ಪನ್ನಗಳಿಗೆ ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ವೊಜ್ಸಿಕಿಯನ್ನು ಯೂಟೂಬ್‌ನ ಸಿಇಒ ಆಗಿ ನೇಮಿಸಲಾಯಿತು. ಈಗ ಯೂಟ್ಯೂಬ್‌ನ ಮುಖ್ಯ ಉತ್ಪನ್ನ ಅಧಿಕಾರಿ ನೀಲ್ ಮೋಹನ್ ಅವರನ್ನೇ ತಮ್ಮ ಸಂಸ್ಥೆಯ ಹೊಸ ನಾಯಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಯಾರು ಈ ನೀಲ್ ಮೋಹನ್?
ಭಾರತೀಯ- ಅಮೆರಿಕನ್ ನೀಲ್ ಮೋಹನ್ ಈ ಹಿಂದೆ ಯೂಟ್ಯೂಬ್‌ನ ಮುಖ್ಯ ಉತ್ಪನ್ನ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 2008ರಲ್ಲಿ ನೀಲ್ ಮೋಹನ್ ಯೂಟ್ಯೂಬ್ ಮಾಲೀಕತ್ವದ ಕಂಪನಿಯಾದ ಗೂಗಲ್ ಅನ್ನು ಸೇರಿದರು.

ಸುಮಾರು 15 ವರ್ಷಗಳ ಕಾಲ ನೀಲ್ ಮೋಹನ್ ಮತ್ತು ವೊಜ್ಸಿಕಿ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ. ಡಬಲ್‌ಕ್ಲಿಕ್ ಸ್ವಾಧೀನದ ಭಾಗವಾಗಿ ಅವರು 2007 ರಲ್ಲಿ ಗೂಗಲ್‌ಗೆ ಸೇರಿದರು. ನಂತರ ಡಿಸ್‌ಪ್ಲೇ ಮತ್ತು ವೀಡಿಯೊ ಜಾಹೀರಾತುಗಳ ಹಿರಿಯ ಉಪಾಧ್ಯಕ್ಷರ ಪಾತ್ರಕ್ಕೆ ಏರಿದರು. 2015ರಲ್ಲಿ ಅವರು ಯೂಟೂಬ್‌ನ ಮುಖ್ಯ ಉತ್ಪನ್ನ ಅಧಿಕಾರಿಯಾಗಿ ನೇಮಕಗೊಂಡರು.
1996 ರಲ್ಲಿ ಅವರು ಯುನೈಟೆಡ್ ಸ್ಟೇಟ್ಸ್‌ನ ಸ್ಟ್ಯಾಂಡ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಅವರು 2005ರಲ್ಲಿ ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ತಮ್ಮ ಎಂಬಿಎ ಮುಗಿಸಿದರು. ಯೂಟೂಬ್ ಜೊತೆಗೆ ಅವರು ಬಟ್ಟೆ ಮತ್ತು ಫ್ಯಾಶನ್ ಕಂಪನಿ ಸ್ಟಿಚ್ ಫಿಕ್ಸ್‌ಗೆ ಮಂಡಳಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಅವರು 23andMe ಎಂಬ ಜೈವಿಕ ತಂತ್ರಜ್ಞಾನ ಸಂಶೋಧನಾ ಕಂಪನಿಯ ನಿರ್ದೇಶಕರ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ನೀಲ್ ಮೋಹನ್ ಅವರು ಗೂಗಲ್‌ನಂತಹ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ವೃತ್ತಿಜೀವನದ ಆರಂಭದಲ್ಲಿ ಮೈಕ್ರೋಸಾಫ್ಟ್‌ನಲ್ಲಿ ಇಂಟರ್ನ್‌ಶಿಪ್ ಕೂಡ ಪೂರ್ಣಗೊಳಿಸಿದರು. ಅವರು ಗೂಗಲ್‌ನಲ್ಲಿ ಡಿಸ್‌ಪ್ಲೇ ಮತ್ತು ವೀಡಿಯೊ ಜಾಹೀರಾತು ವಿಭಾಗವನ್ನು ಮೇಲ್ವಿಚಾರಣೆ ಮಾಡಿದ್ದಾರೆ. ಅಲ್ಲಿ ಅವರು ಕಂಪನಿಯ ಯೂಟ್ಯೂಬ್, ಗೂಗಲ್ ಡಿಸ್‌ಪ್ಲೇ ನೆಟ್‌ವರ್ಕ್, ಆಡ್‌ಸೆನ್ಸ್, ಆಡ್‌ಮಾಬ್ ಮತ್ತು ಡಬಲ್ ಕ್ಲಿಕ್ ಆಡ್ ಟೆಕ್ ಉತ್ಪನ್ನ ಸೇವೆಗಳ ಉಸ್ತುವಾರಿ ವಹಿಸಿದ್ದರು.
ಅವರು ಈ ವರ್ಷ ಯೂಟೂಬ್‌ನಿಂದ ಅಂದಾಜು 7 ಶತಕೋಟಿ ಡಾಲರ್ ವೇತನ ಗಳಿಸುವ ನಿರೀಕ್ಷೆಯಿದೆ. ಭಾರತೀಯ-ಅಮೆರಿಕನ್ ಕಾರ್ಯನಿರ್ವಾಹಕ ನೀಲ್ ಮೋಹನ್ ಅವರು ಟ್ವಿಟರ್‌ನಲಲ್ಲೂ ಆಫರ್ ಇತ್ತು. ಅವರು ಟ್ವಿಟ್ಟರ್‌ನಲ್ಲಿ ಸ್ಥಾನವನ್ನು ಸ್ವೀಕರಿಸುವುದನ್ನು ತಡೆಯುವ ಸಲುವಾಗಿ ಗೂಗಲ್‌ನಿಂದ 100 ಮಿಲಿಯನ್ ಡಾಲರ್ ಅನ್ನು ಬೋನಸ್ ಸ್ವೀಕರಿಸಿದ್ದಾರೆ ಎಂದು ಫಸ್ಟ್‌ಪೋಸ್ಟ್ ವರದಿ ಮಾಡಿದೆ. ಅಲ್ಲದೆ ಟೆಕ್ ಕ್ರಂಚ್ ವರದಿಯ ಪ್ರಕಾರ ಅವರು 100 ಮಿಲಿಯನ್ ಡಾಲರ್ ಬೋನಸ್ಸನ್ನು ಪಡೆದಿದ್ದಾರೆ ಎಂದಿದೆ.












Click it and Unblock the Notifications