ಆತ್ಮನಿರ್ಭರ ಭಾರತ: ಮೊದಲ ಬಾರಿಗೆ 400 ಬಿಲಿಯನ್ ಯುಎಸ್ ಡಾಲರ್ ಸರಕು ರಫ್ತು
ನವದೆಹಲಿ, ಮಾರ್ಚ್ 23: ಭಾರತ ಇದೇ ಮೊದಲ ಬಾರಿಗೆ 400 ಬಿಲಿಯನ್ ಯುಎಸ್ ಡಾಲರ್ ಸರಕು ರಫ್ತಿನ ಗುರಿಯನ್ನು ಮಾ.23ರಂದು ನಿಗದಿತ ವೇಳಾಪಟ್ಟಿಗಿಂತ 9 ದಿನ ಮುಂಚಿತವಾಗಿ ತಲುಪಿದ ಸಾಧನೆ ಮಾಡಿದೆ.
ಈ ಕುರಿತು ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ, ಈ ಯಶಸ್ಸಿಗೆ ನೆರವಾದ ರೈತರು, ನೇಕಾರರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಉತ್ಪಾದಕರು, ರಫ್ತುದಾರರನ್ನು ಅಭಿನಂದಿಸಿದ್ದಾರೆ.
"ಭಾರತವು ಸರಕು ರಫ್ತಿಗೆ ಮಹತ್ವಾಕಾಂಕ್ಷೆಯ ಗುರಿ ನಿಗದಿಪಡಿಸಿಕೊಂಡಿತ್ತು ಹಾಗೂ ಇದೇ ಮೊದಲ ಬಾರಿಗೆ ಈ ಗುರಿ ತಲುಪಲಾಗಿದೆ. ಈ ಯಶಸ್ಸಿಗೆ ಕಾರಣೀಕರ್ತರಾದ ರೈತರು, ನೇಕಾರರು, ಎಂಎಸ್ಎಂಇಎಸ್, ಉತ್ಪಾದಕರು, ರಫ್ತುದಾರರನ್ನು ನಾನು ಅಭಿನಂದಿಸುತ್ತೇನೆ. ನಮ್ಮ ಆತ್ಮನಿರ್ಭರ ಭಾರತ ಪ್ರಯಾಣದಲ್ಲಿ ಇದು ಪ್ರಮುಖ ಮೈಲಿಗಲ್ಲಾಗಿದೆ,'' ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ (ಮಾ.23) ಟ್ವೀಟ್ ಮಾಡಿದ್ದಾರೆ.

ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕ ದೇಶವಾದ ಭಾರತ 2022ನೇ ಹಣಕಾಸು ಸಾಲಿಗೆ ಈ ಮಹತ್ವಾಕಾಂಕ್ಷೆಯ ರಫ್ತಿನ ಗುರಿಯನ್ನು ನಿಗದಿಪಡಿಸಿತ್ತು. ಏಪ್ರಿಲ್- ಡಿಸೆಂಬರ್ ಅವಧಿಯಲ್ಲಿ 300 ಬಿಲಿಯನ್ ಡಾಲರ್ ರಫ್ತು ವಹಿವಾಟು ನಡೆದಿತ್ತು. 2020-21ನೇ ಹಣಕಾಸು ಸಾಲಿನಲ್ಲಿ ಭಾರತ 292 ಬಿಲಿಯನ್ ಡಾಲರ್ ರಫ್ತು ವಹಿವಾಟು ನಡೆಸಿತ್ತು.
2021-22ನೇ ಹಣಕಾಸು ಸಾಲಿನಲ್ಲಿ ರಫ್ತು ವಹಿವಾಟಿನಲ್ಲಿ ಶೇ.37ರಷ್ಟು ಹೆಚ್ಚಳ ಕಂಡುಬಂದಿದ್ದು, 400 ಬಿಲಿಯನ್ ಡಾಲರ್ ರಫ್ತು ನಡೆಸಿದೆ. ಈ ಮೂಲಕ ಹೊಸ ಇತಿಹಾಸ ಸೃಷ್ಟಿದ್ದಲ್ಲದೆ, ಈ ರಫ್ತು ವಹಿವಾಟು ಭಾರತದ ಪಾಲಿಗೆ ಹೊಸ ಮೈಲಿಗಲ್ಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಜೊತೆಗೆ ಕೆಲವು ಗ್ರಾಫಿಕ್ಸ್‌ಗಳನ್ನು ಹಂಚಿಕೊಂಡಿದ್ದು, ಅದರಲ್ಲಿನ ಒಂದು ಗ್ರಾಫಿಕ್ಸ್ ಪ್ರಕಾರ ಭಾರತ ಇದೇ ಮೊದಲ ಬಾರಿಗೆ 400 ಬಿಲಿಯನ್ ಡಾಲರ್ ರಫ್ತಿನ ಗುರಿಯನ್ನು ತಲುಪಿದೆ ಎಂಬ ಮಾಹಿತಿಯಿದೆ.
ಇದರ ಜೊತೆಗೆ ಭಾರತ ತಲುಪಿರುವ ಹಾದಿಯನ್ನು ಅವಲೋಕಿಸಿದರೆ, ಪ್ರತಿ ತಿಂಗಳು ಸರಾಸರಿ 33 ಬಿಲಿಯನ್ ಡಾಲರ್, ಪ್ರತಿದಿನ 1 ಬಿಲಿಯನ್ ಡಾಲರ್ ಹಾಗೂ ಪ್ರತಿ ಗಂಟೆಗೆ 46 ಮಿಲಿಯನ್ ಡಾಲರ್ ರಫ್ತು ವಹಿವಾಟು ನಡೆದಿದೆ ಎಂಬ ಮಾಹಿತಿಯಿದೆ.

ಹಾಗೆಯೇ ಇನ್ನೊಂದು ಗ್ರಾಫಿಕ್ಸ್‌ನಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಉದ್ಯಮಿಗಳೊಂದಿಗೆ ಆತ್ಮೀಯ ಸಮಾಲೋಚನೆ ನಡೆಸುವ ಸರ್ಕಾರದ ಕ್ರಮ, ರಫ್ತುದಾರರೊಂದಿಗೆ ಸರ್ಕಾರ ಉತ್ತಮ ಸಂಪರ್ಕವಿಟ್ಟುಕೊಳ್ಳುವ ಮೂಲಕ ಸಮಸ್ಯೆಗಳ ಶೀಘ್ರ ಇತ್ಯರ್ಥ ಹಾಗೂ ರಫ್ತು ಉತ್ತೇಜನ ಮಂಡಳಿ, ಕೈಗಾರಿಕಾ ಸಮಿತಿಗಳು ಹಾಗೂ ಇತರ ಪಾಲುದಾರರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಲಾಗಿದೆ.
2021-22ನೇ ಹಣಕಾಸು ಸಾಲಿನಲ್ಲಿ ಭಾರತ ಸರಕು ರಫ್ತಿನ ಗುರಿ ತಲುಪಲಿದೆ ಎಂಬ ಬಗ್ಗೆ ಈ ಹಿಂದೆಯೇ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸುಳಿವು ನೀಡಿದ್ದರು. ಮಾ.14ರ ತನಕ ಭಾರತದ ಸರಕು ರಫ್ತು 390 ಬಿಲಿಯನ್ ಡಾಲರ್ ತಲುಪಿದೆ. ಪ್ರಸಕ್ತ ಹಣಕಾಸು ಸಾಲಿನ ಕೊನೆಯ ದಿನವಾದ ಮಾ.31ರೊಳಗೆ ಭಾರತ ಖಂಡಿತವಾಗಿಯೂ 400 ಬಿಲಿಯನ್ ಡಾಲರ್ ಗುರಿಯನ್ನು ಮೀರಲಿದೆ ಎಂದು ಎಸಿಎಂಎ (ACMA) ಕೆಲವು ದಿನಗಳ ಹಿಂದೆ ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುವಾಗ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದರು.












Click it and Unblock the Notifications