ಕೋವಿಡ್ ನಡುವೆ ತತ್ಕಾಲ್ ಮೂಲಕ ರೈಲ್ವೆಗೆ 500 ಕೋಟಿಗೂ ಅಧಿಕ ಗಳಿಕೆ!
ಕೊರೊನಾವೈರಸ್ ಸೋಂಕು ಸಂದರ್ಭದಲ್ಲೂ ಭಾರತೀಯ ರೈಲ್ವೆಯು ಭರ್ಜರಿ ಆದಾಯವನ್ನು ಗಳಿಸಿದೆ. ಈ ಕೋವಿಡ್ ನಡುವೆಯೂ ತತ್ಕಾಲ್ ಮೂಲಕ 403 ಕೋಟಿ ರೂಪಾಯಿ ಹಾಗೂ ಪ್ರೀಮಿಯಂ ತತ್ಕಾಲ್ ಮೂಲಕ 511 ಕೋಟಿ ರೂಪಾಯಿಯನ್ನು 2020-21 ರ ಅವಧಿಯಲ್ಲಿ ಭಾರತೀಯ ರೈಲ್ವೆಯು ಗಳಿಸಿದೆ. ಕೊರೊನಾವೈರಸ್ ಸಾಂಕ್ರಾಮಿಕ ಕಾರಣದಿಂದಾಗಿ ರೈಲ್ವೆಯು ವರ್ಷಗಳ ಕಾಲ ಸ್ಥಗಿತವಾಗಿದ್ದರೂ ರೈಲ್ವೆ ಭಾರೀ ಗಳಿಕೆಯನ್ನು ಪಡೆದಿದೆ ಎಂದು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಮೂಲದಿಂದ ತಿಳಿದು ಬಂದಿದೆ.
ಮಧ್ಯ ಪ್ರದೇಶದ ಚಂದ್ರ ಶೇಖರ್ ಗೌರ್ ಎಂಬವರು ಈ ಆರ್‌ಟಿಐ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. ಈ ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ರೈಲ್ವೆಯು, "2021-22 ರ ಹಣಕಾಸು ವರ್ಷದ ಸೆಪ್ಟೆಂಬರ್‌ವರೆಗೆ ಬದಲಾವಣೆ ಆಗುತ್ತಲಿರುವ ದರಗಳ ಮೂಲಕ ಭಾರತೀಯ ರೈಲ್ವೆಯು ಸುಮಾರು 240 ಕೋಟಿ ರೂಪಾಯಿಯನ್ನು ಗಳಿಕೆ ಮಾಡಿದೆ, ತತ್ಕಾಲ್‌ನಿಂದ 353 ಕೋಟಿ ರೂಪಾಯಿ ಹಾಗೂ ಪ್ರೀಮಿಯಂ ತತ್ಕಾಲ್‌ನಿಂದ 89 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ. ಹೆಚ್ಚಾಗಿ ಕೊರೊನಾ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ತೀರಾ ಅನಿವಾರ್ಯವಾಗಿ ತೆರಳಲು ಬಯಸುವವರು ಪ್ರೀಮಿಯಂ ತತ್ಕಾಲ್ ಪಾವತಿ ಮಾಡುತ್ತಾರೆ.
ಇನ್ನು 2019-20ರ ಹಣಕಾಸು ವರ್ಷದಲ್ಲಿ ರೈಲಿನಲ್ಲಿ ಯಾವುದೇ ನಿರ್ಬಂಧಗಳು ಇಲ್ಲದ ಸಂದರ್ಭದಲ್ಲಿ ರಾಷ್ಟ್ರೀಯ ರೈಲ್ವೆಯು 1,313 ಕೋಟಿ ರೂಪಾಯಿಯನ್ನು ಬದಲಾಗುತ್ತಿರುವ ದರದ ಮೂಲಕ, 1,669 ಕೋಟಿ ರೂಪಾಯಿಯನ್ನು ತತ್ಕಾಲ್ ಮೂಲಕ, 603 ಕೋಟಿ ರೂಪಾಯಿ ಪ್ರೀಮಿಯಂ ತತ್ಕಾಲ್ ಮೂಲಕ ಗಳಿಕೆ ಮಾಡಿದೆ.

ತತ್ಕಾಲ್ ಬೆಲೆಯು ಸಮರ್ಥಿನಿಯವಲ್ಲ
ರೈಲ್ವೆಯಲ್ಲಿ ತತ್ಕಾಲ್ ಬೆಲೆಯು ಸಮರ್ಥನೀಯವಲ್ಲ, ವಿಪರೀತವಾಗಿ ದರವನ್ನು ವಿಧಿಸಲಾಗುತ್ತಿದೆ ಎಂದು ರೈಲ್ವೆಯ ಸಂಸದೀಯ ಸ್ಥಾಯಿ ಸಮಿತಿಯು ಆರೋಪ ಮಾಡಿದ ವಾರದೊಳಗೆ ಈ ಡೇಟಾವು ಲಭ್ಯವಾಗಿದೆ. ಆರ್ಥಿಕವಾಗಿ ಸಬಲವಾಗಿರದ ವರ್ಗದ ಜನರ ಮೇಲೆ ಹೆಚ್ಚು ಹೊರೆಯನ್ನು ಹಾಕಲಾಗಿದೆ, ಬೇರೆ ಯಾವುದೇ ದಾರಿ ತತ್ಕಾಲ್ ಟಿಕೆಟ್‌ಗೆ ಅಧಿಕ ಹಣ ತೆರಬೇಕಾದ ಪರಿಸ್ಥಿತಿಗೆ ತಂದೊಡ್ಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಸಾಮಾನ್ಯವಾಗಿ ಎರಡನೇ ದರ್ಜೆಯ ಟಿಕೆಟ್‌ಗೆ ತತ್ಕಾಲ್ ದರವು ಮೂಲದರದ ಶೇಕಡ 10ರಷ್ಟು ಇರುತ್ತದೆ. ಹಾಗೆಯೇ ಇತರೆ ದರ್ಜೆಗಳಿಗೆ ಶೇಕಡ 30ರಷ್ಟು ತತ್ಕಾಲ್ ದರ ಇರುತ್ತದೆ. ಆದರೆ ಅದಕ್ಕಿಂತಲೂ ಅಧಿಕವಾಗಿ ತತ್ಕಾಲ್ ದರವನ್ನು ವಿಧಿಸಲಾಗಿದೆ ಎಂಬ ಆರೋಪವಿದೆ. ಈ ಹೆಚ್ಚಿನ ದರವು ಬಡ ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ರೈಲ್ವೇಯ ಸಂಸದೀಯ ಸ್ಥಾಯಿ ಸಮಿತಿ ಅಭಿಪ್ರಾಯ ಪಟ್ಟಿತ್ತು. ಹಾಗೆಯೇ ಪ್ರಸ್ತುತ ಇರುವ ದರವು ನ್ಯಾಯಬದ್ಧವಲ್ಲ, ಪ್ರಯಾಣದ ದೂರಕ್ಕೆ ಅನುಗುಣವಾಗಿ ದರವನ್ನು ನಿಗದಿ ಮಾಡಬೇಕು ಎಂದು ರೈಲ್ವೇಯ ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ.
ಸ್ಕ್ಯ್ರಾಪ್ ಮಾರಾಟದಿಂದಲೇ 402.5 ಕೋಟಿ ಗಳಿಕೆ!
ಉತ್ತರ ರೈಲ್ವೆಯು ಸ್ಕ್ಯ್ರಾಪ್ ಮಾರಾಟದಿಂದಲೇ ಸುಮಾರು 402.51 ಕೋಟಿ ರೂಪಾಯಿ ಗಳಿಸಿದೆ. ಇದು ದಾಖಲೆಯ ಗಳಿಕೆ ಆಗಿದೆ. ಈ ಹಿಂದಿನ ಹಣಕಾಸು ಅವಧಿಯಲ್ಲಿ ಉತ್ತರ ರೈಲ್ವೆಯು ಸ್ಕ್ಯ್ರಾಪ್ ಮಾರಾಟದಿಂದ 208.12 ಕೋಟಿ ರೂಪಾಯಿ ಆದಾಯವನ್ನು ಗಳಿಸಿತ್ತು. ಆದರೆ ಈ ಬಾರಿ ಶೇಕಡ 93.40 ರಷ್ಟು ಈ ಸ್ಕ್ಯ್ರಾಪ್ ಮಾರಾಟದ ಆದಾಯ ಅಧಿಕವಾಗಿದೆ. 2021ರ ಸೆಪ್ಟೆಂಬರ್ ತಿಂಗಳಿನಲ್ಲಿ ರೂಪಾಯಿ 200 ಕೋಟಿಗಳು, 2021ರ ಅಕ್ಟೋಬರ್ ತಿಂಗಳಿನಲ್ಲಿ 300 ಕೋಟಿಗಳು ಮತ್ತು 2021ರ ಡಿಸೆಂಬರ್ ತಿಂಗಳಿನಲ್ಲಿ 400 ಕೋಟಿಗಳ ಸ್ಕ್ರ್ಯಾಪ್ ಮಾರಾಟ ಮಾಡಿರುವ ಉತ್ತರ ರೈಲ್ವೆಯು ಈ ಅಗ್ರ ಸ್ಥಾನದಲ್ಲಿ ಇದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications