ನೇಮಕಾತಿಯಲ್ಲಿ ಬೆಂಗಳೂರು ಮತ್ತೆ ಮುಂದೆ
ಬೆಂಗಳೂರು, ನ.11: ದೇಶದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ನಡೆದ ನೇಮಕಾತಿ ಪ್ರಕ್ರಿಯೆ ಆಧಾರದ ಮೇಲೆ ವರದಿ ಹೊರ ಬಿದ್ದಿದೆ. ಕಳೆದ ತಿಂಗಳಿನಲ್ಲಿ ಐಟಿ ಸಿಟಿ ಬೆಂಗಳೂರು ಉದ್ಯೋಗ ನೀಡುವುದರಲ್ಲಿ ಎತ್ತಿದ ಕೈ ಎನಿಸಿದೆ.
ಕುತೂಹಲದ ಸಂಗತಿ ಎಂದರೆ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾರಣಕ್ಕೋ ಏನೋ ಇಂಧನ ಹಾಗೂ ಅನಿಲ, ವಿಮೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಉದ್ಯೋಗ ಅರಸುವವರಿಗೆ ಅಕ್ಟೋಬರ್ ತಿಂಗಳು ಶುಭವಾಗಿತ್ತು.
ನೌಕ್ರಿ.ಕಾಂ ಜಾಬ್ ಸ್ಪೀಕ್ ಇಂಡೆಕ್ಸ್ ಪ್ರತಿ ತಿಂಗಳ ನೇಮಕಾತಿ ಚಟುವಟಿಕೆಗಳು, ಆನ್ ಲೈನ್ ಉದ್ಯೋಗ ಹುಡುಕಾಟದ ವಿವರಗಳನ್ನು ನೀಡುತ್ತದೆ. ಆನ್ ಲೈನ್ ನೇಮಕಾತಿ ಪ್ರಕ್ರಿಯೆ ಪ್ರಗತಿ ಕಾಣುತ್ತಿದ್ದು ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಅಕ್ಟೋಬರ್ ತಿಂಗಳಿನಲ್ಲಿ ಶೇ 4ರಷ್ಟು ಏರಿಕೆ ಕಂಡು ಬಂದಿದೆ.ಕ್ಷೇತ್ರವಾರು ಎಣಿಕೆಯಂತೆ ಇಂಧನ ಹಾಗೂ ಅನಿಲ ಕ್ಷೇತ್ರ ಶೇ 30 ರಷ್ಟು ಉದ್ಯೋಗ ನೀಡಿದೆ. ವಿಮಾ ಕ್ಷೇತ್ರದಲ್ಲಿ ನೇಮಕಾತಿ ಪ್ರಕ್ರಿಯೆ ಶೇ 25ರಷ್ಟು ಏರಿದೆ.

ಆದರೆ, ಮಾಧ್ಯಮ, ಮನರಂಜನೆ, ಕಟ್ಟಡ ನಿರ್ಮಾಣ ಹಾಗೂ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ನೇಮಕಾತಿ ಪ್ರಕ್ರಿಯೆ ಕುಸಿತ ಕಂಡಿದ್ದು. ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಶೇ7 ರಷ್ಟು ಕುಸಿತ ಕಂಡಿದೆ.
ಇನ್ಫೋ ಎಡ್ಜ್(ಇಂಡಿಯಾ) ಗ್ರೂಪ್ ಅಧ್ಯಕ್ಷ ಹಾಗೂ ಸಿಎಫ್ ಒ ಅಂಬರೀಷ್ ರಘುವಂಶಿ ಪ್ರಕಾರ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಐಟಿ ಬಿಟಿ ಕ್ಷೇತ್ರವಲ್ಲದೆ ಇತರೆ ಕ್ಷೇತ್ರಗಳಲ್ಲೂ ನೇಮಕಾತಿ ಪ್ರಕ್ರಿಯೆ ಚೇತರಿಕೆ ಕಾಣಲಿದೆ.
ಪ್ರದೇಶವಾರು ಲೆಕ್ಕಾಚಾರದಲ್ಲಿ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ನೇಮಕಾತಿ ಪ್ರಕ್ರಿಯೆ ಶೇ 7ರಷ್ಟು ಏರಿಕೆ ಕಂಡಿದೆ. ಹೈದರಾಬಾದ್ ಶೇ 6 ರಷ್ಟು ಪ್ರಗತಿಯೊಂದಿಗೆ ಎರಡನೇ ಸ್ಥಾನದಲ್ಲಿದೆ.
ರಾಷ್ಟ್ರೀಯ ರಾಜಧಾನಿ ಪ್ರದೇಶ(ದೆಹಲಿ-NCR) ಹಾಗೂ ಮುಂಬೈ ಶೇ 3 ರಷ್ಟು ಉದ್ಯೋಗ ಸೃಷ್ಟಿ ಸಾಧ್ಯವಾಗಿದೆ. ಚೆನ್ನೈನಲ್ಲಿ ಶೇ 2 ರಷ್ಟು ಮಾತ್ರ ಉದ್ಯೋಗ ನೇಮಕಾತಿ ಪ್ರಕ್ರಿಯೆ ಪ್ರಗತಿ ಕಂಡಿದೆ.
ಉಳಿದಂತೆ ತಿಂಗಳ ಲೆಕ್ಕದಲ್ಲಿ ಪುಣೆ ಮುಂದಿದ್ದರೆ, ಕೋಲ್ಕತ್ತಾ ಇನ್ನೂ ಹಬ್ಬದ ಸಂಭ್ರಮಾಚರಣೆಯಲ್ಲಿ ತಲ್ಲೀನವಾಗಿದ್ದು ನೇಮಕಾತಿ ಶೇ 7 ರಷ್ಟು ಇಳಿಕೆಯಾಗಿದೆ ಎಂದು ಆನ್ ಲೈನ್ ಹಾಗೂ ಗ್ರಾಹಕರದ ಪ್ರತಿಕ್ರಿಯೆ ಆಧಾರಿಸಿ ನೌಕ್ರಿ.ಕಾಂ ವರದಿ ನೀಡಿದೆ. (ಪಿಟಿಐ)












Click it and Unblock the Notifications