ಬ್ಯಾಂಕ್ ಸಿಬ್ಬಂದಿಗೆ ಸಿಹಿಸುದ್ದಿ; 5 ದಿನ ಮಾತ್ರ ಕೆಲಸ?
ನವದೆಹಲಿ, ಮೇ 04; ಐಟಿ ಕಂಪನಿಗಳಲ್ಲಿ ಕೆಲಸ ಮಾಡುವವರು ವಾರದಲ್ಲಿ ಎರಡು ದಿನ ರಜೆ ಪಡೆಯುತ್ತಾರೆ. ಇದೇ ಮಾದರಿಯಲ್ಲಿ ಬ್ಯಾಂಕ್ ಸಿಬ್ಬಂದಿಗಳಿಗೆ ಸಹ ರಜೆ ಸಿಗಲಿದೆಯೇ? ಎಂಬುದು ಸದ್ಯ ಚರ್ಚೆಯ ವಿಚಾರ. ಹೌದು, ವಾರದಲ್ಲಿ 5 ದಿನ ಮಾತ್ರ ಕೆಲಸ ಎಂಬ ನಿಯಮ ಬ್ಯಾಂಕ್‌ಗಳಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ. ಆದರೆ ಪ್ರತಿದಿನ 40 ನಿಮಿಷ ಹೆಚ್ಚಿಗೆ ಕೆಲಸ ಮಾಡಬೇಕಿದೆ.
ಕೇಂದ್ರ ಹಣಕಾಸು ಸಚಿವಾಲಯವು ಬ್ಯಾಂಕ್ ಸಿಬ್ಬಂದಿಗೆ ಶನಿವಾರ ಮತ್ತು ಭಾನುವಾರ ಎರಡು ದಿನ ರಜೆ ನೀಡುವ ಪ್ರಸ್ತಾಪಕ್ಕೆ ಶೀಘ್ರವೇ ಒಪ್ಪಿಗೆ ನೀಡಲಿದೆ ಎಂದು businessleague ವರದಿ ಮಾಡಿದೆ. ಇಲಾಖೆಯ ಉನ್ನತ ಮೂಲಗಳ ಮಾಹಿತಿ ಆಧರಿಸಿ ಈ ವರದಿ ಮಾಡಲಾಗಿದೆ ಎಂದು ಅದು ಹೇಳಿದೆ.

ಈ ನಿಯಮ ಜಾರಿಗೆ ಬಂದರೆ ಬ್ಯಾಂಕ್ ಉದ್ಯೋಗಿಗಳಿಗೆ ಸಿಹಿಸುದ್ದಿ ಸಿಗಲಿದೆ. ವಾರದಲ್ಲಿ 5 ದಿನ ಮಾತ್ರ ಕೆಲಸ ಇರಲಿದ್ದು, ಶನಿವಾರ ಮತ್ತು ಭಾನುವಾರ ವೀಕ್ಲಿ ಆಫ್ ಸಿಗಲಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಮಾತ್ರ ಈ ನಿಯಮ ಜಾರಿಗೆ ಬರಲಿದೆ. ಖಾಸಗಿ ಬ್ಯಾಂಕ್‌ಗಳು ಬಳಿಕ ಈ ಕುರಿತು ತೀರ್ಮಾನ ಮಾಡಲಿವೆ. ಕೇಂದ್ರ ಸರ್ಕಾರದಿಂದ ಈ ಪ್ರಸ್ತಾವನೆಗೆ ಒಪ್ಪಿಗೆ ಸಿಗುವುದು ಬಾಕಿ ಇದೆ.
ಈಗ ಹೇಗಿದೆ ರಜೆ ಮಾದರಿ?; ಪ್ರಸ್ತುತ ಬ್ಯಾಂಕ್ ಸಿಬ್ಬಂದಿ ವಾರದ ಆರು ದಿನ ಕೆಲಸ ಮಾಡುತ್ತಾರೆ. ಭಾನುವಾರ ಬ್ಯಾಂಕುಗಳು ಸಂಪೂರ್ಣ ಬಂದ್ ಆಗಿರುತ್ತವೆ. ಅಲ್ಲದೇ 2ನೇ ಶನಿವಾರ ಮತ್ತು 4ನೇ ಶನಿವಾರ ಬ್ಯಾಂಕುಗಳಿಗೆ ರಜೆ ಇರುತ್ತದೆ. ಈ ನಿಯಮದಲ್ಲಿ ಬದಲಾವಣೆ ತಂದು ವಾರದ 5 ದಿನ ಮಾತ್ರ ಎಂದು ಮಾರ್ಪಾಡು ಮಾಡಲಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ಸೇರಿದಂತೆ ವಿವಿಧ ಸಂಘಟನೆಗಳ ಜೊತೆ ಈ ಕುರಿತು ಚರ್ಚೆ ನಡೆಸಲಾಗಿದೆ. ವಾರದ ಐದು ದಿನ ಕೆಲಸ ಮಾಡಲು ಅವುಗಳು ಒಪ್ಪಿಗೆ ನೀಡಲಾಗಿದೆ. ಅಲ್ಲದೇ ಪ್ರತಿದಿನ ಬ್ಯಾಂಕುಗಳ ಕಾರ್ಯ ನಿರ್ವಹಣೆ ಅವಧಿಯನ್ನು 40 ನಿಮಿಷ ಹೆಚ್ಚಿಸಲಾಗುತ್ತಿದೆ. ಈ ಕುರಿತು ಪ್ರಸ್ತಾವನೆ ಸಿದ್ಧಪಡಿಸಿ ಹಣಕಾಸು ಇಲಾಖೆಗೆ ಸಲ್ಲಿಕೆ ಮಾಡಲಾಗಿದೆ.
ಸೋಮವಾರದಿಂದ ಶುಕ್ರವಾರದ ತನಕ ಬ್ಯಾಂಕುಗಳು ಮುಚ್ಚಿರುತ್ತವೆ. ಶನಿವಾರ ಮತ್ತು ಭಾನುವಾರ ಸಂಪೂರ್ಣ ರಜೆ ಇರುತ್ತದೆ. ಅಲ್ಲದೇ ವಾರದ 5 ದಿನ ಕೆಲಸ ಮಾಡುವ ಅವಧಿ 40 ನಿಮಿಷ ಅಧಿಕ ಇರಲಿದೆ. ಇದರಿಂದಾಗಿ ಗ್ರಾಹಕರಿಗೆ ಸಹ ತೊಂದರೆ ಆಗುವುದಿಲ್ಲ ಎಂದು ಅಂದಾಜಿಸಲಾಗಿದೆ. ಅಲ್ಲದೇ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಎರಡು ದಿನ ರಜೆ ಇದ್ದರೆ ಅಂತಹ ವ್ಯತ್ಯಾಸ ಆಗುವುದಿಲ್ಲ ಎಂದು ವರದಿ ಹೇಳಿದೆ.
ಈಗಾಗಲೇ ಬ್ಯಾಂಕ್ ಸಿಬ್ಬಂದಿಗಳು ವೇತನ ಪರಿಷ್ಕರಣೆಗಾಗಿ ಬೇಡಿಕೆ ಇಟ್ಟಿದ್ದಾರೆ. ಹಣಕಾಸು ಸಚಿವಾಲಯ ಈ ಕುರಿತು ಆದೇಶ ಹೊರಡಿಸುವಾಗ ವಾರದಲ್ಲಿ 5 ದಿನ ಮಾತ್ರ ಕೆಲಸ ಮತ್ತು ಸೋಮವಾರದಿಂದ ಶುಕ್ರವಾರದ ತನಕ 40 ನಿಮಿಷ ಜಾಸ್ತಿ ಕೆಲಸ ಮಾಡುವ ಪ್ರಸ್ತಾಪಕ್ಕೆ ಒಪ್ಪಿಗೆ ನೀಡುವ ನಿರೀಕ್ಷೆ ಇದೆ.
11 ರಜೆಗಳು; ಮೇ ತಿಂಗಳಿನಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ 11 ದಿನದ ರಜೆ ಇದೆ. ಬುದ್ಧ ಪೂರ್ಣಿಮಾ ಸೇರಿದಂತೆ ವಿವಿಧ ರಜೆಗಳ ಕಾರಣ 2, 4ನೇ ಶನಿವಾರ, ಭಾನುವಾರ ಹೊರತುಪಡಿಸಿ ಹಲವು ರಜೆಗಳಿವೆ. ಈ ತಿಂಗಳಿನಲ್ಲಿ ಬ್ಯಾಂಕು ಕೆಲಸಗಳಿಗೆ ಹೋಗುವ ಮೊದಲು ಕ್ಯಾಲೆಂಡರ್ ನೋಡಿಕೊಂಡು ಮುಂದೆ ಸಾಗುವುದು ಉತ್ತಮವಾಗಿದೆ.












Click it and Unblock the Notifications