ಜಾಗತಿಕವಾಗಿ ತಗ್ಗಿದ ಬೇಡಿಕೆ, ಚಿನ್ನ, ಬೆಳ್ಳಿ ದರದಲ್ಲಿ ಕೊಂಚ ಇಳಿಕೆ
Recommended Video

ನವದೆಹಲಿ, ಅಕ್ಟೋಬರ್ 22: ಹಬ್ಬದ ಸೀಸನ್ ಮುಗಿದ ಬಳಿಕ ಚಿನ್ನ ,ಬೆಳ್ಳಿಯ ಬೇಡಿಕೆ ತಗ್ಗಿದ್ದು, ಚಿನ್ನ ಪ್ರಿಯರಿಗೆ ಸೋಮವಾರದಂದು ಶುಭ ಸುದ್ದಿ ಸಿಕ್ಕಿದೆ. ಬಂಗಾರ, ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಂಗಾರದ ಬೆಲೆ ಪ್ರತಿ 10 ಗ್ರಾಂಗೆ 50 ರೂಪಾಯಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆ 100 ರೂಪಾಯಿ ಪ್ರತಿ ಕೆಜಿಗೆ ಇಳಿಕೆ ಕಂಡಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 32,220ರು ನಷ್ಟಿತ್ತು. ಬೆಳ್ಳಿ ಬೆಲೆ ಪ್ರತಿ ಕೆಜಿಗೆ 39,500 ರು ನಷ್ಟಿತ್ತು. ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 29,800 ರು, ಬೆಳ್ಳಿ ಒಂದು ಕೆಜಿಗೆ 41,350 ರು ನಷ್ಟಿತ್ತು.
ಜಾಗತಿಕ ಮಾರುಕಟ್ಟೆಯಲ್ಲಿ ಏರುಪೇರು, ದೇಶಿ ಚಿನಿವಾರ ಪೇಟೆಯಲ್ಲಿ ಆಭರಣಕ್ಕೆ ಬೇಡಿಕೆ ತಗ್ಗಿರುವುದು ಬಂಗಾರ ಬೆಲೆ ಇಳಿಕೆಗೆ ಕಾರಣವಾಗಿದೆ.

ಸಿಂಗಪುರದಲ್ಲಿ ಚಿನ್ನವು ಶೇಕಡಾ 0.02 ರಷ್ಟು ಇಳಿಕೆ ಕಂಡು 1,227.20 ಡಾಲರ್ ಪ್ರತಿ ಔನ್ಸ್ ಆಗಿದೆ. ಇನ್ನು ಬೆಳ್ಳಿ ಶೇಕಡಾ 0.21 ರಷ್ಟು ಇಳಿಕೆ ಕಂಡು 14.73 ಡಾಲರ್ ಪ್ರತಿ ಔನ್ಸ್ ಆಗಿದೆ.
ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌದಿ ಅರೇಬಿಯಾ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ನಡುವೆ ಆತಂಕದ ವಾತಾವರಣ, ಇಟಲಿಯ ಬಜೆಟ್ ಸಮಸ್ಯೆ, ಬ್ರೆಕ್ಸಿಟ್ ಬೆಳವಣಿಗೆ ಇತ್ಯಾದಿಗಳು ಹೂಡಿಕೆದಾರರು ಹಳದಿ ಲೋಹದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡದಂತೆ ತಡೆದಿದೆ.












Click it and Unblock the Notifications