Gold Rate: 7,700 ರೂಪಾಯಿ ಏರಿಕೆ ಕಂಡ ಚಿನ್ನದ ದರ; ಮತ್ತಷ್ಟು ಏರಿಕೆ ಸಾಧ್ಯತೆ?
ಬುಧವಾರ 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 2,200 ರೂಪಾಯಿ ಕುಸಿತ ಕಂಡಿತ್ತು, ಚಿನ್ನದ ಬೆಲೆ ಇಳಿಕೆಯಾಗುತ್ತಿದೆ ಎನ್ನುವಾಗಲೇ ಆಭರಣ ಪ್ರಿಯರಿಗೆ ಆಘಾತ ಎದುರಾಗಿದ್ದು, ಗುರುವಾರ ಚಿನ್ನದ ಬೆಲೆ ಬರೋಬ್ಬರಿ 7,700 ರೂಪಾಯಿ ಏರಿಕೆ ಕಂಡಿದೆ.
ಲೋಕಸಭಾ ಚುನಾವಣೆ ಫಲಿತಾಂಶದ ದಿನ ಷೇರುಮಾರುಕಟ್ಟೆ ಕುಸಿದ ನಂತರ ಚಿನ್ನದ ಬೆಲೆ 100 ಗ್ರಾಂಗೆ 7,000 ರೂಪಾಯಿ ಏರಿಕೆ ಕಂಡಿತ್ತು. ಎನ್‌ಡಿಎ ಸರ್ಕಾರ ರಚಿಸುವುದು ಖಚಿತವಾದ ನಂತರ ಬುಧವಾರ ಷೇರುಮಾರುಕಟ್ಟೆಯಲ್ಲಿ ಸುಧಾರಣೆ ಕಂಡಿತ್ತು, ಬಳಿಕ ಚಿನ್ನದ ಬೆಲೆ 2,200 ರೂಪಾಯಿ ಕುಸಿದಿತ್ತು.

ಷೇರುಮಾರುಕಟ್ಟೆ ಸುಧಾರಿಸಿದ್ದು ಚಿನ್ನದ ಬೆಲೆ ಮತ್ತಷ್ಟು ಕುಸಿಯುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದವರಿಗೆ ಆಘಾತ ಕಾದಿದ್ದು, ಗುರುವಾರ ಒಂದೇ ದಿನ 7,700 ರೂಪಾಯಿ ಏರಿಕೆಯಾಗಿದೆ.
ಗುರುವಾರ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಮ್‌ಗೆ 77 ರೂಪಾಯಿ ಏರಿಕೆ ಕಂಡಿದೆ. ಬುಧವಾರ 7,26,500 ಇದ್ದ 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 7,700 ರೂಪಾಯಿ ಏರಿಕೆ ಕಂಡು 7,34,200 ರೂಪಾಯಿಗೆ ಮುಟ್ಟಿದೆ.
ಆಭರಣ ಚಿನ್ನದ ಬೆಲೆ (22 ಕ್ಯಾರೆಟ್) 100 ಗ್ರಾಂಗೆ 7,000 ರೂಪಾಯಿ ಏರಿಕೆಯಾಗಿದೆ. ಬುಧವಾರ 6,66,000 ರೂಪಾಯಿ ಇದ್ದ 100 ಗ್ರಾಂ ಆಭರಣ ಚಿನ್ನದ ದರ ಗುರುವಾರ 6,73,000 ರೂಪಾಯಿಗೆ ಏರಿಕೆಯಾಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂ ಗೆ 5700 ರೂಪಾಯಿಗೆ ಹೆಚ್ಚಿದ್ದು, 5,44,900 ರೂಪಾಯಿಯಿಂದ 5,50,600 ರೂಪಾಯಿಗೆ ಏರಿಕೆಯಾಗಿದೆ.
ಬೆಳ್ಳಿ ಬೆಲೆ 1800 ರೂಪಾಯಿ ಹೆಚ್ಚಳ
ಚಿನ್ನದ ಬೆಲೆ ಹೆಚ್ಚಳದ ಬಳಿಕ ಬೆಳ್ಳಿ ಬೆಲೆ ಕೂಡ ಒಂದು ಕೆ.ಜಿ. ಗೆ 1800 ರೂಪಾಯಿ ಹೆಚ್ಚಳವಾಗಿದೆ. ಬುಧವಾರ 91700 ಇದ್ದ ಕೆಜಿ ಬೆಳ್ಳಿ ದರ 93500 ಗೆ ಏರಿಕೆಯಾಗಿದೆ.
ಶುಕ್ರವಾರ ಕೂಡ ಹೆಚ್ಚಳ
ಸದ್ಯ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಏರಿಳಿತ ಕಾಣುತ್ತಿದೆ. ಶುಕ್ರವಾರ ಕೂಡ ಚಿನ್ನದ ಬೆಲೆ ಹೆಚ್ಚಳವಾಗಬಹುದು ಎಂದು ಅಮದಾಜಿಸಲಾಗಿದೆ.












Click it and Unblock the Notifications