37% ದಷ್ಟು ಇಳಿಕೆಯಾಗಲಿದೆ ಬಂಗಾರದ ಬೆಲೆ : ಭಾರೀ ಕುಸಿತದ ಬಗ್ಗೆ ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ
ಇರಾನ್ ಯುದ್ಧ ಚಿನ್ನದ ಬೆಲೆಯ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದೀಗ ಜಾಗತಿಕ ಮಟ್ಟದಲ್ಲಿನ ರಾಜಕೀಯ ಮತ್ತು ಆರ್ಥಿಕ ಸ್ಥಿತಿಗತಿಯಲ್ಲಿನ ಬದಲಾವಣೆಯಿಂದ ಬಂಗಾರದ ಬೆಲೆ ಇಳಿತಾ ಇದೆ. ಜನವರಿ 29 ರಂದು 10 ಗ್ರಾಂ ಬಂಗಾರದ ಬೆಲೆ 1.76 ಲಕ್ಷ ರೂ.ವರೆಗೆ ಆಗಿತ್ತು. ಇದೀಗ ಈ ದರ 1.42 ಲಕ್ಷಕ್ಕೆ ಇಳಿದಿದೆ. ಈ ಕುಸಿತ ಇನ್ನೂ ಇದೇ ರೀತಿ ಮುಂದುವರೆಯಲಿದೆ ಎನ್ನಲಾಗಿದೆ.
ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿ
ವರ್ಲ್ಡ್ ಗೋಲ್ಡ್ ಕೌನ್ಸಿಲ್ ಇದೀಗ ಚಿನ್ನದ ದರದ ಕುರಿತು ತನ್ನ ವರದಿಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ, ಚಿನ್ನದ ಬೆಲೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಇತ್ತೀಚಿನ WGC ವರದಿಯ ಪ್ರಕಾರ, ಚಿನ್ನದ ಬೆಲೆ ಜನವರಿ 2026ರ ದರಕ್ಕೆ ಹೋಲಿಸಿ ನೋಡಿದರೆ ಶೇಕಡಾ 37 ರಷ್ಟು ಕುಸಿತ ಕಾಣಬಹುದು. ಜನವರಿಯಿಂದ ಲೆಕ್ಕ ಹಾಕಿದರೆ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನವು 10 ಗ್ರಾಂಗೆ 34,000 ರೂ.ಯಷ್ಟು ಅಗ್ಗವಾಗಿದೆ.

ಚಿನ್ನದ ದರಗಳ ಕುರಿತು WGC ನೀಡಿರುವ ಎಚ್ಚರಿಕೆ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನವು ಪ್ರತಿ ಔನ್ಸ್‌ಗೆ 3,857 ಡಾಲರ್ ಬೆಂಬಲ ಮಟ್ಟಕ್ಕಿಂತ ಕಡಿಮೆಯಾದರೆ, ಮುಂದಿನ ದಿನಗಳಲ್ಲಿ ಪ್ರತಿ ಔನ್ಸ್ 3,500 ಡಾಲರ್‌ಗೆ ಇಳಿಯಲಿದೆ. ಇದು ಜನವರಿ 2026ರ ಗರಿಷ್ಠ ಮಟ್ಟದಿಂದ ಸರಿಸುಮಾರು 37% ರಷ್ಟು ಕುಸಿತವನ್ನು ತೋರಿಸುತ್ತದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಎಚ್ಚರಿಸಿದೆ.
ವರ್ಲ್ಡ್ ಗೋಲ್ಡ್ ಕೌನ್ಸಿಲ್ ವರದಿಯಲ್ಲಿನ ಪ್ರಮುಖ ಅಂಶಗಳು
WGC ತನ್ನ ವರದಿಯಲ್ಲಿ ಚಿನ್ನದ ಬೆಲೆ ಶೇಕಡಾ 37 ಕ್ಕಿಂತ ಹೆಚ್ಚು ಕಡಿಮೆಯಾಗಬಹುದು ಎಂದು ಹೇಳಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 3,857 ಡಾಲರ್ ಬೆಂಬಲ ಮಟ್ಟಕ್ಕಿಂತ ಕೆಳಗೆ ಬಂದರೆ ದರದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗುವುದು ಖಂಡಿತಾ. ಆದ್ದರಿಂದ WGC ಚಿನ್ನದ ಮುಂದಿನ ಬೆಂಬಲ ಮಟ್ಟವನ್ನು ಪ್ರತಿ ಔನ್ಸ್‌ಗೆ 3,500 ಡಾಲರ್ ಎಂದು ನಿಗದಿಪಡಿಸಿದೆ. ಜನವರಿಯಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ಜನವರಿಯಲ್ಲಿ ಔನ್ಸ್‌ಗೆ 5,070.21 ಡಾಲರ್‌ನಷ್ಟಿದ್ದ ಚಿನ್ನದ ಬೆಲೆ ಇದೀಗ ಸಾರ್ವಕಾಲಿಕ ಗರಿಷ್ಟ ಮಟ್ಟದಿಂದ ಶೇಕಡಾ 37ಕ್ಕೆ ಇಳಿಯುತ್ತಿದೆ. ಇವತ್ತು ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 4,127.96 ಡಾಲರ್‌ಗೆ ಇಳಿದಿದೆ. ಲಂಡನ್ ಬುಲಿಯನ್ ಮಾರ್ಕೆಟ್ ಅಸೋಸಿಯೇಷನ್‌ನ ವರದಿಯ ಪ್ರಕಾರ, ಈ ವರ್ಷ ಇಲ್ಲಿಯವರೆಗೆ ಚಿನ್ನದ ಬೆಲೆಯಲ್ಲಿ 7.8% ರಷ್ಟು ಕುಸಿತ ದಾಖಲಾಗಿದೆ.
ಮುಂದುವರಿಯಬಹುದು ಚಿನ್ನದ ಇಳಿಕೆಯ ಪ್ರವೃತ್ತಿ
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು 3,943 ಡಾಲರ್ ಮಟ್ಟದಿಂದ ಕೆಳಗೆ ಇಳಿದರೆ ಕುಸಿತದ ಹೊಸ ಹಂತವು ಪ್ರಾರಂಭವಾಗುವುದು ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಜಪಾನಿನ ಯೆನ್ ಪ್ರಭಾವ
ಚಿನ್ನದ ಕುರಿತಾದ ಈ ವರದಿಯು ಹೂಡಿಕೆದಾರರಿಗೆ ಒಂದು ಎಚ್ಚರಿಕೆಯ ಸಂದೇಶ ನೀಡಿದೆ. ಚಿನ್ನವನ್ನು ಸ್ಥಿರಗೊಳಿಸುವಲ್ಲಿ ಕರೆನ್ಸಿ ಪ್ರಮುಖ ಪಾತ್ರ ವಹಿಸಬಹುದು. ಯುಎಸ್ ಡಾಲರ್ ಮತ್ತು ಜಪಾನೀಸ್ ಯೆನ್ ಕುಸಿಯುತ್ತಿರುವ ಚಿನ್ನಕ್ಕೆ ಗಮನಾರ್ಹ ಬೆಂಬಲವನ್ನು ನೀಡಬಹುದು. ಯೆನ್ ಮತ್ತೆ ಬಲಗೊಂಡು ಡಾಲರ್ ದುರ್ಬಲಗೊಂಡರೆ, ಚಿನ್ನದ ಬೆಲೆ ಚೇತರಿಸಿಕೊಳ್ಳುವ ಅವಕಾಶವಿದೆ ಎಂದು ವರದಿ ಹೇಳಿದೆ. ಇನ್ನು ಯುಎಸ್ ಫೆಡರಲ್ ರಿಸರ್ವ್‌ನ ನಿರ್ಧಾರಗಳು ಕೂಡಾ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುವುದು. ಯುಎಸ್ ಫೆಡರಲ್ ರಿಸರ್ವ್ ಇತ್ತೀಚೆಗೆ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಫೆಡ್ ಬಡ್ಡಿದರಗಳನ್ನು ಸ್ಥಿರವಾಗಿರಿಸಿದರೆ, ಡಾಲರ್ ದುರ್ಬಲಗೊಳ್ಳುತ್ತದೆ. ಆಗ ಚಿನ್ನದ ಬೆಲೆ ಕುಸಿಯುತ್ತದೆ. ಪ್ರಸ್ತುತ ಜಾಗತಿಕ ಭೌಗೋಳಿಕ ರಾಜಕೀಯ ವಾತಾವರಣವನ್ನು ಗಮನಿಸಿದರೆ, ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುತ್ತಿಲ್ಲ. ಒಂದೊಮ್ಮೆ ಬಡ್ಡಿದರ ಹೆಚ್ಚಾದರೆ ಚಿನ್ನದ ಮೇಲೆ ಮತ್ತಷ್ಟು ಒತ್ತಡ ಬೀಳಬಹುದು.
ಇರಾನ್-ಅಮೆರಿಕ ಯುದ್ಧದ ಪರಿಣಾಮ
ಅಮೆರಿಕ-ಇರಾನ್ ಒಪ್ಪಂದ ಇದೀಗ ಹೊಸ ಭರವಸೆ ಮೂಡಿಸಿದೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಒಪ್ಪಿಕೊಂಡಿದೆ. ಹೀಗಾದರೆ ಕಚ್ಚಾ ತೈಲ ಬೆಲೆಗಳು ಕುಸಿಯುತ್ತವೆ. ಹಣದುಬ್ಬರವನ್ನು ನಿಯಂತ್ರಿಸುವುದು ಸುಲಭವಾಗುತ್ತದೆ. ಯುಎಸ್ ಫೆರಲ್ ಬಡ್ಡಿದರ ಹೆಚ್ಚಾಗುವ ಆತಂಕ ಕಡಿಮೆಯಾಗುವುದು. ಚಿನ್ನದ ಮೇಲಿನ ಹೂಡಿಕೆ ಮತ್ತೆ ಹೆಚ್ಚಾಗುವುದು. ಒಟ್ಟಾರೆ, ಇಡೀ ಆಟವು ಇರಾನ್ ಯುದ್ಧದ ಫಲಿತಾಂಶವನ್ನೇ ಅವಲಂಬಿಸಿದೆ.


Click it and Unblock the Notifications
