14 ತಿಂಗಳಲ್ಲೇ ಗರಿಷ್ಠ ಮಟ್ಟ ತಲುಪಿದ ಚಿನ್ನದ ದರ
ಮುಂಬೈ, ಜನವರಿ 25: ಚಿನಿವಾರ ಮಾರುಕಟ್ಟೆಯಲ್ಲಿ ಗುರುವಾರ ಚಿನ್ನದ ಬೆಲೆ 14 ತಿಂಗಳಲ್ಲೇ ಗರಿಷ್ಠ ಬೆಲೆ ದಾಖಲಿಸಿದೆ. ಇಂದು 10 ಗ್ರಾಂ ಚಿನ್ನದ ಬೆಲೆ 350 ರೂಪಾಯಿ ಏರಿಕೆ ಕಂಡಿದ್ದು 31,450 ರೂಪಾಯಿಗೆ ಬಂದು ನಿಂತಿದೆ.
ಬೆಳ್ಳಿಯ ಬೆಲೆಯಲ್ಲಿ ರೂ. 1,190 ಏರಿಕೆಯಾಗಿದ್ದು ಕೆಜಿ ಬೆಳ್ಳಿ ದರ 41,130 ರೂಪಾಯಿ ದಾಟಿದೆ.
ಡಾಲರ್ ಬೆಲೆ ಕಳೆದ ಮೂರು ವರ್ಷಗಳಲ್ಲೇ ಕನಿಷ್ಟ ಮಟ್ಟಕ್ಕೆ ಇಳಿಕೆಯಾಗಿದ್ದರಿಂದ ಹೂಡಿಕೆದಾರರು ಚಿನ್ನ ಖರೀದಿಗೆ ಮುಗಿಬಿದ್ದರು. ಇವರ ಜತೆಗೆ ಸ್ಥಳೀಯ ವರ್ತಕರು ಕೂಡ ಚಿನ್ನ ಖರೀದಿಗೆ ಆಸಕ್ತಿ ತೋರಿದ್ದರಿಂದ ಹಳದಿ ಲೋಹದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂತು.

ಇನ್ನು ಜಾಗತಿಕ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಏರಿಕೆ ಕಂಡು ಬಂದಿದೆ. ದಿನದಂತ್ಯಕ್ಕೆ ಮುಂಬೈ ಚಿನಿವಾರ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನ (99.9 ಪರಿಶುದ್ಧ)ದ ಬೆಲೆ 31,450 ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆ 31,300 ರೂಪಾಯಿಗೆ ತಲುಪಿದೆ.
2016ರ ನವೆಂಬರ್ ನಲ್ಲಿ ಕೊನೆಯ ಬಾರಿಗೆ ಈ ಪ್ರಮಾಣದಲ್ಲಿ ಚಿನ್ನದ ಬೆಲೆ ಏರಿಕೆಯಾಗಿತ್ತು. ಅಲ್ಲಿಂದ ನಿರಂತರ ಕುಸಿಯುತ್ತಾ ಬದಿದ್ದ ಚಿನ್ನದ ದರ ಇದೇ ಮೊದಲ ಬಾರಿಗೆ 14ತಿಂಗಳಲ್ಲೇ ಗರಿಷ್ಠ ದರವನ್ನು ದಾಖಲಿಸಿದೆ. ಇನ್ನು ಮದುವೆ ಸೀಸನ್ ಬರಲಿರುವುದರಿಂದ ಸದ್ಯಕ್ಕೆ ಚಿನ್ನದ ದರ ಇಳಿಯುವ ಸಾಧ್ಯತೆಗಳಿಲ್ಲ.












Click it and Unblock the Notifications