ಫ್ಲಿಪ್‍ಕಾರ್ಟ್ ವೇರ್ ಹೌಸಿನಲ್ಲಿ ವಿದ್ಯಾರ್ಥಿಗಳಿಗೆ ಭಾರತೀಯ ಸೇನೆಯಿಂದ ಪಾಠ
ಬೆಂಗಳೂರು, ಅಕ್ಟೋಬರ್ 22: ಜಮ್ಮು ಮತ್ತು ಕಾಶ್ಮೀರದ ಕಾಲೇಜು ವಿದ್ಯಾರ್ಥಿಗಳಿಗೆ ವಿಶ್ವಾಸವನ್ನು ತುಂಬುವ ಸಲುವಾಗಿ ಭಾರತೀಯ ಸೇನೆಯು ಹಮ್ಮಿಕೊಂಡಿರುವ ಸದ್ಭಾವನಾ ಪ್ರವಾಸ ಕಾರ್ಯಕ್ರಮಕ್ಕೆ ದೇಶದ ಪ್ರಮುಖ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‍ಕಾರ್ಟ್ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಬೆಂಗಳೂರಿಗೆ ಬಂದಿರುವ ವಿದ್ಯಾರ್ಥಿಗಳ ತಂಡವು ಫ್ಲಿಪ್‍ಕಾರ್ಟ್‍ನ ವೇರ್‍ಹೌಸ್‍ಗೆ ಭೇಟಿ ನೀಡಿ, ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಿ ಹಲವಾರು ಮಾಹಿತಿಗಳನ್ನು ಪಡೆದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಭಾರತೀಯ ಸೇನೆಯು ವಿದ್ಯಾರ್ಥಿಗಳಲ್ಲಿನ ಜ್ಞಾನವನ್ನು ಹೆಚ್ಚಿಸುವುದು ಮತ್ತು ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದೆ. ಈ ಮೂಲಕ ದೇಶದ ಆರ್ಥಿಕ ಬೆಳವಣಿಗೆಗೆ ಯುವ ಸಮುದಾಯದಿಂದ ಸಾಕಷ್ಟು ಕೊಡುಗೆ ಇದೆ ಎಂಬುದನ್ನೂ ಮನವರಿಕೆ ಮಾಡಿಕೊಡುತ್ತಿದೆ.

ಸೇನೆಯ ಅಧಿಕಾರಿಗಳೊಂದಿಗೆ 15 ವಿದ್ಯಾರ್ಥಿಗಳ ತಂಡವು ಫ್ಲಿಪ್‍ಕಾರ್ಟ್‍ನ ವೇರ್‍ಹೌಸ್‍ಗೆ ಭೇಟಿ ನೀಡಿ ಪ್ರಮುಖ ಪೂರೈಕೆಯ ಸರಣಿಯ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿ ಅದರ ಬಗ್ಗೆ ಮಾಹಿತಿಯನ್ನು ಪಡೆಯಿತು. ಅಲ್ಲದೇ, ಈ ಪ್ರಕ್ರಿಯೆಯಲ್ಲಿ ತಂತ್ರಜ್ಞಾನವನ್ನು ಯಾವ ರೀತಿ ಬಳಕೆ ಮಾಡಲಾಗುತ್ತಿದೆ ಮತ್ತು ದೇಶದ ಮೂಲೆಮೂಲೆಗಳಿಗೂ ಯಾವ ರೀತಿ ಉತ್ಪನ್ನಗಳನ್ನು ತಲುಪಿಸಲಾಗುತ್ತದೆ ಎಂಬುದರ ಬಗ್ಗೆಯೂ ಮಾಹಿತಿಯನ್ನು ವಿದ್ಯಾರ್ಥಿಗಳು ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಫ್ಲಿಪ್‍ಕಾರ್ಟ್ ಚೀಫ್ ಕಾರ್ಪೊರೇಟ್ ಅಫೇರ್ಸ್ ಆಫೀಸರ್ ರಜನೀಶ್ ಕುಮಾರ್ ಅವರು, ಸಾಮಾಜಿಕ ಹೊಣೆಗಾರಿಕೆ ಸಂಸ್ಥೆಯಾಗಿರುವ ಫ್ಲಿಪ್‍ಕಾರ್ಟ್ ಭಾರತೀಯ ಸೇನೆ ಕೈಗೊಂಡಿರುವ ಈ ಸದ್ಭಾವನಾ ಪ್ರವಾಸಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ. ಜಮ್ಮು ಮತ್ತು ಕಾಶ್ಮೀರದ ಯುವ ವಿದ್ಯಾರ್ಥಿಗಳಿಗೆ ವಿಶ್ವಾಸ ತುಂಬುವಂತಹ ಮಹೋನ್ನತವಾದ ಕಾರ್ಯವನ್ನು ಸೇನೆಯು ಮಾಡುತ್ತಿದೆ. ಇಲ್ಲಿಗೆ ಆಗಮಿಸಿದ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳು ಕೇಳಿದ ಎಲ್ಲಾ ಪ್ರಶ್ನೆಗಳು ಮತ್ತು ವ್ಯಕ್ತಪಡಿಸಿದ ಅನುಮಾನಗಳಿಗೆ ನಮ್ಮ ಫ್ಲಿಪ್‍ಕಾರ್ಟ್ ತಂಡ ಸಮರ್ಪಕವಾದ ಉತ್ತರಗಳನ್ನು ಮತ್ತು ಮಾಹಿತಿಗಳನ್ನು ನೀಡಿ ಅವರಿಗೆ ಮನವರಿಕೆ ಮಾಡಿಕೊಟ್ಟಿದೆ. ಈ ಮೂಲಕ ವಿದ್ಯಾರ್ಥಿಗಳು ಕೈಗಾರಿಕೆ ಬಗ್ಗೆ ತಿಳಿದುಕೊಂಡರಲ್ಲದೇ, ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿದರು. ದೇಶ ಕಟ್ಟುವ ಇಂತಹ ಭವಿಷ್ಯದ ಯಾವುದೇ ಕಾರ್ಯಕ್ರಮಗಳಿಗೆ ಫ್ಲಿಪ್‍ಕಾರ್ಟ್ ಸಂಪೂರ್ಣವಾದ ಬೆಂಬಲವನ್ನು ನೀಡುತ್ತದೆ'' ಎಂದು ಭರವಸೆ ನೀಡಿದರು.












Click it and Unblock the Notifications