ಶಾಕಿಂಗ್ ಸುದ್ದಿ: 12,000 ಉದ್ಯೋಗಿಗಳನ್ನು ವಜಾಗೊಳಿಸುತ್ತಾ ಫೇಸ್‌ಬುಕ್?
ನವದೆಹಲಿ, ಅಕ್ಟೋಬರ್ 06: ಫೇಸ್‌ಬುಕ್‌ನ ಕಂಪನಿಯು ಸದ್ದಿಲ್ಲದೇ ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿದೆ ಎಂದು ಆಂತರಿಕ ವರದಿಗಳು ಹೇಳುತ್ತಿವೆ. ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ್ದು, ಶೇ.15ರಷ್ಟು ಮಂದಿ ತಮ್ಮ ಉದ್ಯೋಗ ಕಳೆದುಕೊಳ್ಳುವ ಅಪಾಯವಿದೆ ಎಂದು ಹೇಳಲಾಗುತ್ತಿದೆ.
ಮುಂದಿನ ಕೆಲವು ವಾರಗಳಲ್ಲಿ ಶೇ.15 ಪ್ರತಿಶತದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದ್ದು, ಸುಮಾರು 12,000 ಉದ್ಯೋಗಿಗಳು ಶೀಘ್ರದಲ್ಲೇ ಕೆಲಸದಿಂದ ಹೊರಗೆ ಹೋಗಬಹುದು ಎಂದು ಹಲವಾರು ಉದ್ಯೋಗಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಫೇಸ್‌ಬುಕ್‌ನ ಕಂಪನಿಯಲ್ಲಿ ಉದ್ಯೋಗಿಗಳೇ ರಾಜೀನಾಮೆ ನೀಡಿ ಬೇರೆ ಕಡೆಗಳಿಗೆ ಹೋಗುತ್ತಿದ್ದಾರೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಆದರೆ ಆಂತರಿಕವಾಗಿ ವಾಸ್ತವ ಸ್ಥಿತಿಯೇ ಬೇರೆ ರೀತಿಯಾಗಿದೆ.
ಫೇಸ್‌ಬುಕ್‌ನಲ್ಲಿ ಉದ್ಯೋಗಿಗಳನ್ನು ಬಲವಂತವಾಗಿ ಉದ್ಯೋಗದಿಂದ ಹೊರ ತಳ್ಳಲಾಗುತ್ತಿದೆ ಎಂದು ಉದ್ಯೋಗಿಯೊಬ್ಬರು ದೂಷಿಸುತ್ತಿದ್ದಾರೆ. ಹಾಗಿದ್ದರೆ ಫೇಸ್‌ಬುಕ್‌ನಂತಹ ದೈತ್ಯ ಕಂಪನಿಯು ತನ್ನ ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದು ಏಕೆ?, ಉದ್ಯೋಗಿಗಳನ್ನು ವಜಾಗೊಳಿಸುವುದರ ಹಿಂದಿನ ಉದ್ದೇಶವೇನು?, ಈ ಕಂಪನಿ ಉದ್ಯೋಗಿಗಳಿಗೆ ಕಾಡುತ್ತಿರುವ ಆತಂಕವೇನು? ಎಂಬುದರ ಕುರಿತು ಈ ವರದಿಯಲ್ಲಿ ತಿಳಿದುಕೊಳ್ಳಿರಿ.

ಫೇಸ್‌ಬುಕ್ ಉದ್ಯೋಗಿಗಳು ವಜಾಗೊಳಿಸಲು ಕಾರಣವೇನು?
ಸಾಮಾಜಿಕ ನೆಟ್‌ವರ್ಕಿಂಗ್ ದೈತ್ಯ ಕಂಪನಿಗಳು ನೇಮಕಾತಿ ಸ್ಥಗಿತಗೊಳಿಸುವುದನ್ನು ಘೋಷಿಸಿವೆ. ಅಂದಿನಿಂದ ಫೇಸ್‌ಬುಕ್ ಕೂಡ ಉದ್ಯೋಗಿಗಳು ವಜಾಗೊಳಿಸಲು ಮುಂದಾಗಿದೆ. ಮೆಟಾದ ಷೇರಿನ ಬೆಲೆಯು ಪ್ರತಿ ಷೇರಿಗೆ ಗರಿಷ್ಠ 380 ಡಾಲರ್ ಮಟ್ಟವನ್ನು ತಲುಪಿದೆ. ಕಳೆದ ವರ್ಷದಲ್ಲಿ ಇದೇ ಕಂಪನಿ ಷೇರಿನ ಬೆಲೆಯು ಶೇಕಡಾ 60 ಪ್ರತಿಶತದಷ್ಟು ಕಡಿಮೆಯಾಗಿತ್ತು.

ಉದ್ಯೋಗ ಕಡಿತದ ಎಚ್ಚರಿಕೆ ನೀಡಿದ ಜುಕರ್‌ಬರ್ಗ್
ಸಾಮಾಜಿಕ ಜಾಲತಾಣವು ನೇಮಕಾತಿಗಳನ್ನು ಸ್ಥಗಿತಗೊಳಿಸುತ್ತಿದೆ ಎಂದು ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ಬರ್ಗ್ ಸ್ಪಷ್ಟಪಡಿಸಿದ್ದಾರೆ. ಇದಿಷ್ಟೇ ಅಲ್ಲದೇ ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ. ವರದಿಗಳ ಪ್ರಕಾರ, ಉದ್ಯೋಗಿಗಳಿಗೆ ಆಂತರಿಕ ಕರೆಯಲ್ಲಿ ಜುಕರ್‌ಬರ್ಗ್ ಈ ಕಾಮೆಂಟ್‌ಗಳನ್ನು ಮಾಡಿದ್ದಾರೆ.
"ಮುಂದಿನ ವರ್ಷದಲ್ಲಿ ಹೆಡ್‌ಕೌಂಟ್ ಬೆಳವಣಿಗೆಯನ್ನು ಸ್ಥಿರವಾಗಿ ಕಡಿಮೆ ಮಾಡುವುದು ನಮ್ಮ ಯೋಜನೆಯಾಗಿದೆ. ಹೀಗಾಗಿ ಅನೇಕ ತಂಡಗಳ ಸಂಖ್ಯೆ ಇಳಿಕೆಯಾಗಲಿದ್ದು, ನಾವು ಸಹ ಉದ್ಯೋಗಿಗಳ ಸಂಖ್ಯೆಯನ್ನು ಇಳಿಸುವುದಾಗಿ ಕೊನೆಯ ಮೆಟಾ ಗಳಿಕೆಯ ಕರೆಯಲ್ಲಿ ಮಾರ್ಕ್ ಜುಕರ್‌ಬರ್ಗ್ ಪ್ರಸ್ತಾಪಿಸಿದ್ದಾರೆ," ಎಂದು ವರದಿಯಾಗಿದೆ.

ಮೇ ತಿಂಗಳಿನಲ್ಲಿ ನೇಮಕಾತಿ ಸ್ಥಗಿತದ ಬಗ್ಗೆ ಜುಕರ್‌ಬರ್ಗ್ ಘೋಷಣೆ
ಕಳೆದ ಮೇ ತಿಂಗಳಲ್ಲಿ ಮೆಟಾದ ಕೆಲವು ವಿಭಾಗಗಳ ಮೇಲೆ ಪರಿಣಾಮ ಬೀರುವ ನೇಮಕಾತಿ ಸ್ಥಗಿತಗೊಳಿಸುವ ಬಗ್ಗೆ ಮಾರ್ಕ್ ಜುಕರ್‌ಬರ್ಗ್ ಘೋಷಿಸಿದ್ದರು. ಆದಾಗ್ಯೂ, ಅವರು ಈಗ ನೇಮಕಾತಿ ಸ್ಥಗಿತಗೊಳಿಸುವ ವಲಯವನ್ನು ಮತ್ತಷ್ಟು ವಿಸ್ತರಿಸಿದ್ದಾರೆ. ಫೇಸ್‌ಬುಕ್‌ನ ಪೋಷಕ ಕಂಪನಿ ಮೆಟಾ ಪ್ರಸ್ತುತ ಆರ್ಥಿಕ ಹಿಂಜರಿತದ ನಡುವೆ ವೆಚ್ಚವನ್ನು ಕಡಿತಗೊಳಿಸಲು ಸಿಬ್ಬಂದಿಯನ್ನು ಕಡಿಮೆ ಮಾಡುತ್ತಿದೆ. ಈ ಕಂಪನಿಯೊಳಗೆ ಹೊಸ ರೀತಿಯ ಉದ್ಯೋಗವನ್ನು ಮಾಡುವುದಕ್ಕೆ ಅಥವಾ ರಾಜೀನಾಮೆ ಸಲ್ಲಿಸಿ ಹೊರ ನಡೆಯುವುದಕ್ಕೆ ಕಂಪನಿಯು ಉದ್ಯೋಗಿಗಳಿಗೆ 30 ರಿಂದ 60 ದಿನಗಳ ಗಡುವು ನೀಡಿದೆ.

ಕಂಪನಿಯು ಉದ್ಯೋಗಿಗಳನ್ನು ತೆಗೆದು ಹಾಕುವುದು ಹೇಗೆ?
ಮೆಟಾ ಕಂಪನಿಯು ಉದ್ಯೋಗಿಗಳನ್ನು ತೆಗೆದು ಹಾಕುವುದಕ್ಕೆ ವಿನೂತನ ಅಭ್ಯಾಸವನ್ನು ರೂಢಿಸಿಕೊಂಡು ಬಂದಿದೆ. ಒಬ್ಬ ಉದ್ಯೋಗಿಯು ತಾನು ಮಾಡುತ್ತಿರುವ ವಾಸ್ತವ ಕೆಲಸಕ್ಕೆ ಬದಲಾಗಿ ಕಂಪನಿಯಲ್ಲೇ ಬೇರೆ ಉದ್ಯೋಗವನ್ನು ಕಂಡುಕೊಳ್ಳಬೇಕು. ಅದರಲ್ಲಿ ಉದ್ಯೋಗಿಯು ವಿಫಲವಾದರೆ, ಒಂದು ತಿಂಗಳ ನಂತರದಲ್ಲಿ ಅಂಥ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗುತ್ತದೆ.
ದೈತ್ಯ ಟೆಕ್ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವುದರಿಂದ ಮತ್ತು ಹೊಸ ನೇಮಕಾತಿಯನ್ನು ಸ್ಥಗಿತಗೊಳಿಸುವುದರಿಂದ ಮುಂದಿನ ವರ್ಷದಲ್ಲಿ ಹೆಡ್‌ಕೌಂಟ್ ಬೆಳವಣಿಗೆಯನ್ನು ಸ್ಥಿರವಾಗಿ ಕಡಿಮೆ ಮಾಡುವುದು ಕಂಪನಿಯ ಯೋಜನೆಯಾಗಿದೆ ಎಂದು ಜುಕರ್‌ಬರ್ಗ್ ಜುಲೈನಲ್ಲಿ ಹೇಳಿದ್ದರು. ಸಾಮಾಜಿಕ ನೆಟ್‌ವರ್ಕ್ ಆರ್ಥಿಕ ಹಿಂಜರಿತವನ್ನು ಪ್ರವೇಶಿಸಿದ್ದು, ಅದು ಡಿಜಿಟಲ್ ಜಾಹೀರಾತು ವ್ಯವಹಾರದ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ. ಈ ಬಗ್ಗೆ ಒಪ್ಪಿಕೊಂಡ ಜುಕರ್‌ಬರ್ಗ್ ಅನೇಕ ತಂಡಗಳ ಪ್ರಮಾಣ ಕುಗ್ಗಲಿದ್ದು, ನಾವು ಕಂಪನಿಯೊಳಗಿನ ಇತರ ಪ್ರದೇಶಗಳಿಗೆ ಶಕ್ತಿಯನ್ನು ಬದಲಾಯಿಸಬಹುದು" ಎಂದು ಹೇಳಿದರು.












Click it and Unblock the Notifications