ಚಿನ್ನದ ಶುದ್ಧತೆ ಪತ್ತೆ ಹಚ್ಚುವುದು ಹೇಗೆ? ಮನೆಯಲ್ಲೇ ಬಂಗಾರದ ಗುಣಮಟ್ಟ ಚೆಕ್ ಮಾಡುವ ಸರಳ ವಿಧಾನ ಇಲ್ಲಿದೆ!
ಭಾರತೀಯರಿಗೆ ಚಿನ್ನ ಕೇವಲ ಆಭರಣವಲ್ಲ. ನಾವು ಬಂಗಾರದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೇವೆ. ಮಗುವಿನ ಹುಟ್ಟಿನೊಂದಿಗೆಯೇ ಬಂಗಾರದೊಂದಿಗೆ ಸಂಬಂಧ ಬೆಳೆದುಕೊಂಡು ಬರುತ್ತದೆ. ತೊಟ್ಟಿಲು ಶಾಸ್ತ್ರ, ನಾಮಕರಣ, ಕೇಶ ಮುಂಡನ, ಹುಟ್ಟು ಹಬ್ಬ, ಮದುವೆ, ಸೀಮಂತ, ವಾರ್ಷಿಕೋತ್ಸವ ಹೀಗೆ ಎಲ್ಲಾ ಸಂಮಾರಂಭಗಳಲ್ಲಿ ಚಿನ್ನ ಬೇಕೇ ಬೇಕು. ಅದಕ್ಕೇ ಹೇಳುವುದು ನಮಗೆ ಚಿನ್ನ ಕೇವಲ ಆಭರಣ ಅಲ್ಲ ಅದೊಂದು ಭಾವನೆ.
ಇನ್ನು ಬಂಗಾರ ಭದ್ರತೆಯ ಸಾಧನ ಕೂಡಾ ಹೌದು. ಅನೇಕ ಮಂದಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಚಿನ್ನ ಸಿರಿವಂತಿಕೆಯ ಪ್ರತೀಕ ಎನ್ನುವದರಲ್ಲಿ ಎರಡು ಮಾತಿಲ್ಲ. ಇದರ ಜೊತೆಗೆ ಕಷ್ಟಕಾಲದಲ್ಲಿ ಚಿನ್ನ ಹಣಕಾಸಿನ ನೆರವಿಗೆ ಬರುತ್ತದೆ ಎನ್ನುವ ಭಾವ ಕೂಡಾ ಇಲ್ಲಿ ಅಡಗಿದೆ. ಚಿನ್ನ ಖರೀದಿ ಮಾಡುವಾಗ ನಮಗೆ ಎದುರಾಗುವ ದೊಡ್ಡ ಸಮಸ್ಯೆ ಎಂದರೆ ಅದರ ಶುದ್ಧತೆ. ಈಗಂತೂ ಬಂಗಾರದ ಬೆಲೆ ಗಗನ ಮುಖಿಯಾಗಿದೆ. ನಾವು ಆಭರಣವಾಗಿ ಖರೀದಿಸುವ ಚಿನ್ನ 22 ಕ್ಯಾರೆಟ್‌ನದ್ದು. ಅದಕ್ಕಿಂತ ಕಡಿಮೆ ಕ್ಯಾರೆಟ್ ಎಂದರೆ ಅದರಲ್ಲಿ ಬೇರೆ ಲೋಹಗಳ ಅಂಶ ಹೆಚ್ಚಾಗಿರುತ್ತದೆ.

ಚಿನ್ನ ಖರೀದಿಸುವಾಗ, ನಾವು ಮೋಸ ಹೋಗಬಾರದು ಎಂದಾದರೆ ಅದರ ಶುದ್ಧತೆಯನ್ನು ಪರಿಶೀಲಿಸುವುದು ಬಹಳ ಮುಖ್ಯ. ನಮ್ಮಲಿರುವ ಬಂಗಾರ ಬೆರಕೆಯೇ ಅಥವಾ ಶುದ್ದ ಚಿನ್ನವೇ ಎನ್ನುವುದನ್ನು ಗುರುತಿಸುವುದು ಪ್ರತಿಯೊಬ್ಬನಿಗೂ ಬಹಳ ಮುಖ್ಯವಾಗಿರುತ್ತದೆ.
ಅಸಲಿ ಅಥವಾ ಶುದ್ದ ಚಿನ್ನವನ್ನು ಗುರುತಿಸುವುದು ಹೇಗೆ ?
ಹಾಲ್‌ಮಾರ್ಕ್ ಮತ್ತು HUD ಕೋಡ್ ಅನ್ನು ನೋಡುವ ಮೂಲಕ ಚಿನ್ನದ ಶುದ್ದತೆಯನ್ನು ಗುರುತಿಸಬಹುದು. ಇದರ ಹೊರತಾಗಿ, ನೀರು, ಮ್ಯಾಗ್ನೆಟ್ ಮತ್ತು ವಿನೆಗರ್‌ನಂತಹ ಟೆಸ್ಟ್‌ಗಳು ಕೂಡಾ ಬಂಗಾರದ ಶುದ್ದತೆಯನ್ನು ಅರಿಯಲು ಸಹಾಯ ಮಾಡುತ್ತದೆ. ನೀವು ಇಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಿದರೆ ಆಗಬಹುದಾದ ದೊಡ್ಡ ನಷ್ಟವನ್ನು ತಪ್ಪಿಸಬಹುದು.
ಹಾಲ್‌ಮಾರ್ಕ್ ಮತ್ತು HUD ಕೋಡ್
ಚಿನ್ನವನ್ನು ಖರೀದಿಸುವಾಗ, ಮೊದಲನೆಯದಾಗಿ ಅದರ ಶುದ್ಧತೆಗೆ ಗಮನ ಕೊಡಿ. ಪ್ರತಿಯೊಂದು ಆಭರಣವು ಭಾರತೀಯ ಮಾನದಂಡಗಳ ಬ್ಯೂರೋದ ವಿಶಿಷ್ಟ ಗುರುತನ್ನು ಹೊಂದಿರಲೇಬೇಕು. ಈ ಗುರುತು ಚಿನ್ನದ ಮೇಲೆ ಇದ್ದರೆ ಅದನ್ನು BIS ಪ್ರಮಾಣೀಕೃತ ಕೇಂದ್ರದಲ್ಲಿ ಟೆಸ್ಟಿಂಗ್ ಮಾಡಲಾಗಿದೆ ಎಂದೇ ಅರ್ಥ. ಇದಲ್ಲದೆ, ಪ್ರತಿ ಆಭರಣದ ಮೇಲೆ 6-ಅಂಕಿಯ ವಿಶಿಷ್ಟ HUD ಕೋಡ್ ಅನ್ನು ದಾಖಲಿಸಲಾಗಿರುತ್ತದೆ. ಇದನ್ನು BIS ಕೇರ್ ಅಪ್ಲಿಕೇಶನ್ ಮೂಲಕ ಪರಿಶೀಲಿಸಬಹುದು.
ಕ್ಯಾರೆಟ್ ಮತ್ತು ಸಂಖ್ಯೆಯ ಮೂಲಕ ಗುರುತಿಸುವಿಕೆ
ಆಭರಣಗಳು ಹೆಚ್ಚಾಗಿ 22 ಕ್ಯಾರೆಟ್ ಬಂಗಾರದಿಂದ ಮಾಡಲ್ಪಟ್ಟಿರುತ್ತವೆ. ಹಾಲ್‌ಮಾರ್ಕ್ ಜೊತೆಗೆ, 22 ಕ್ಯಾರೆಟ್‌ಗಳಿಗೆ 916, 18 ಕ್ಯಾರೆಟ್‌ಗಳಿಗೆ 750 ಮತ್ತು 24 ಕ್ಯಾರೆಟ್‌ಗಳಿಗೆ 999 ಎಂಬ ಕ್ಯಾರೆಟ್ ಸಂಖ್ಯೆಯನ್ನೂ ನೀಡಲಾಗಿರುತ್ತದೆ. ಇದನ್ನು ಖರೀದಿ ವೇಳೆ ತಪ್ಪದೇ ಗಮನಿಸಬೇಕು.
ಮನೆಯಲ್ಲಿಯೇ ನಡೆಸಬಹುದಾದ ಸುಲಭ ಪರೀಕ್ಷೆ
ನೀರಿನ ಪರೀಕ್ಷೆ: ಚಿನ್ನವು ನೀರಿನಲ್ಲಿ ಹಾಕಿದಾಗ ಮುಳುಗಬೇಕು. ಇಲ್ಲ ಎಂದಾದರೆ ಅದರಲ್ಲಿ ಬೇರೆ ಲೋಹಗಳ ಮಿಶ್ರಣ ಹೆಚ್ಚಿದೆ ಎಂದರ್ಥ. ಅಂದರೆ ಅದು ಶುದ್ದ ಚಿನ್ನ ಅಲ್ಲ.
ಮ್ಯಾಗ್ನೆಟ್ ಪರೀಕ್ಷೆ: ಚಿನ್ನ ಯಾವತ್ತೂ ಆಯಸ್ಕಾಂತಕ್ಕೆ ಅಂಟಿಕೊಳ್ಳುವುದಿಲ್ಲ. ಒಂದು ವೇಳೆ ನಿಮ್ಮಲ್ಲಿರುವ ಬಂಗಾರ ಮ್ಯಾಗ್ನೆಟ್‌ಗೆ ಅಂಟಿಕೊಂಡರೆ, ಅದರಲ್ಲಿ ಚಿನ್ನಕ್ಕಿಂತ ಹೆಚ್ಚು ಮಿಶ್ರ ಲೋಹ ಇದೆ ಎಂದರ್ಥ.
ವಿನೆಗರ್ ಪರೀಕ್ಷೆ: ನಿಜವಾದ ಚಿನ್ನದ ಮೇಲೆ ಕೆಲವು ಹನಿ ವಿನೆಗರ್ ಹಾಕುವುದರಿಂದ ಅದರ ಬಣ್ಣ ಬದಲಾಗುವುದಿಲ್ಲ, ಆದರೆ, ಕಲಬೆರೆಕೆ ಹೆಚ್ಚಾಗಿದ್ದರೆ ಆ ಚಿನ್ನ ಬಣ್ಣವನ್ನು ಬಿಡುತ್ತದೆ.
ರಬ್ ಪರೀಕ್ಷೆ: ನಿಜವಾದ ಚಿನ್ನವನ್ನು ಬಟ್ಟೆ ಅಥವಾ ಟೈಲ್ ಮೇಲೆ ಉಜ್ಜಿದಾಗ ಹಳದಿ ಗುರುತು ಉಳಿಯುತ್ತದೆ.
ಬಿಲ್ ಮತ್ತು ಯಂತ್ರ ಪರಿಶೀಲನೆ
ಚಿನ್ನ ಖರೀದಿಸುವಾಗ ಯಾವಾಗಲೂ ಒರಿಜಿನಲ್ ಬಿಲ್ ತೆಗೆದುಕೊಳ್ಳಿ. ಬಿಲ್‌ನಲ್ಲಿ ಅಂಗಡಿಯವರ GST ಸಂಖ್ಯೆ ಇರುತ್ತದೆ. ಅದನ್ನು ನೀವು ಅಧಿಕೃತ ವೆಬ್‌ಸೈಟ್‌ನಿಂದಲೂ ಪರಿಶೀಲಿಸಬಹುದು. ಇದಲ್ಲದೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ದೊಡ್ಡ ಆಭರಣ ಅಂಗಡಿಗಳಲ್ಲಿ ಕ್ಯಾರೊಟೋಮೀಟರ್ ಯಂತ್ರವಿದ್ದು, ಅದು ತಕ್ಷಣವೇ ಚಿನ್ನದ ಶುದ್ಧತೆಯನ್ನು ಹೇಳುತ್ತದೆ. ಹಾಗಾಗಿ ಸಂದರ್ಭ ಯಾವುದೇ ಇರಲಿ ಬಂಗಾರ ಖರೀದಿಸುವಾಗ ಚಿನ್ನದ ಶುದ್ದತೆಯನ್ನು ಗುರುತಿಸುವುದು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಂತ ಮುಖ್ಯವಾಗಿರುತ್ತದೆ.


Click it and Unblock the Notifications
