ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೌಲ್ಯ $2 ಟ್ರಿಲಿಯನ್‌ಗೆ ಏರಿಕೆ
ಬೆಂಗಳೂರು, ಏಪ್ರಿಲ್ 4: ಡಿಜಿಟಲ್ ಕರೆನ್ಸಿ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್, ಇಥೆರಿಯಂ, ಕಾರ್ಡನೋ ಸೇರಿದಂತೆ ಹಲವು ಕರೆನ್ಸಿಗಳು ಇಂದು ಭರ್ಜರಿ ಬೆಳೆ ತೆಗೆದಿವೆ. ಈ ಸಮಯಕ್ಕೆ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೌಲ್ಯ $2 ಟ್ರಿಲಿಯನ್‌ಗೆ ಏರಿಕೆಯಾಗಿದ್ದರೆ, ಬಿಟ್ ಕಾಯಿನ್ ಮೌಲ್ಯ 1.1 ಟ್ರಿಲಿಯನ್ ದಾಟಿದೆ.
ಕೆಲ ದಿನಗಳ ಹಿಂದೆ 60 ಸಾವಿರ ಡಾಲರ್ ಗಡಿ ದಾಟಲು ಹೆಣಗಿದ್ದ ಬಿಟ್ ಕಾಯಿನ್ ಮತ್ತೆ ಚೇತರಿಸಿಕೊಳ್ಳುವ ಬಗ್ಗೆ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಆದರೆ, ಇಂದು ಬಿಟ್ ಕಾಯಿನ್ ಮಧ್ಯಾಹ್ನದ ವೇಳೆಗೆ ಶೇ 1.4ರಷ್ಟು ಏರಿಕೆ ಕಂಡು 59 ಸಾವಿರ ಡಾಲರ್ ಮೌಲ್ಯ ಗಳಿಸಿತು. ಜೊತೆಗೆ ಎಲ್ಲಾ ಕ್ರಿಪ್ಟೋಕರೆನ್ಸಿಗಳ ಮೌಲ್ಯ 2.02 ಟ್ರಿಲಿಯನ್ ಡಾಲರ್ ದಾಟಿತು. ಕಳೆದ ಒಂದು ವರ್ಷದಲ್ಲಿ, ಬಿಟ್‌ಕಾಯಿನ್ ಶೇಕಡಾ 103.72ರಷ್ಟು ಲಾಭವನ್ನು ನೀಡಿದೆ. ಬಿಟ್‌ಕಾಯಿನ್ ಸಾರ್ವಕಾಲಿಕ ಹೆಚ್ಚಿನ ಬೆಲೆ 61,556.59 ಡಾಲರ್ ಆಗಿದ್ದು, ಇನ್ನೂ ಈ ದಾಖಲೆ ಮತ್ತೊಮ್ಮೆ ಮುರಿದಿಲ್ಲ.
ಏಪ್ರಿಲ್ 5 ರಂದು ಈ ಸಮಯಕ್ಕೆ ಬಿಟ್ ಕಾಯಿನ್ ಮೌಲ್ಯ:
ಬಿಟ್ ಕಾಯಿನ್ ಬೆಲೆ: $59,491.16
ಒಟ್ಟಾರೆ ಮಾರುಕಟ್ಟೆ ಮೌಲ್ಯ: $1,110,957,236,729
ಒಂದು ಬಿಟ್ ಕಾಯಿನ್ ಬೆಲೆ = 43,10,938.23ರು
(1 USD=73.24 ರುಪಾಯಿ)

ಕಳೆದ 24 ಗಂಟೆಗಳಲ್ಲಿ ಶೇ 1.71ರಷ್ಟು ಏರಿಕೆ ಕಂಡಿದೆ. ಈ ವಾರ ಶೇ 2.93ರಷ್ಟು ಏರಿಕೆಯಾಗಿದೆ. ಈ ನಡುವೆ ಮತ್ತೊಂದು ಡಿಜಿಟಲ್ ಕರೆನ್ಸಿ ಇಥೆರಿಯಂ (Ethereum) ಕಳೆದ 24 ಗಂಟೆಗಳಲ್ಲಿ ಶೇ 1.49ರಷ್ಟು ಏರಿಕೆ ಕಂಡು 2,119.68 ಡಾಲರ್ ಮೌಲ್ಯ ಪಡೆದಿದೆ. ಒಟ್ಟಾರೆ $244,496,653,535 ಮೌಲ್ಯ ಹೊಂದಿದೆ. ಕಾರ್ಡನೋ ಶೇ 2.37ರಷ್ಟು ಏರಿಕೆ ಕಂಡು 1.22 ಡಾಲರ್ ಮೌಲ್ಯ ಪಡೆದಿದೆ. ಅಚ್ಚರಿಯೆಂದರೆ ಕಳೆದ 24ಗಂಟೆಗಳಲ್ಲಿ ಸ್ಟಾಕ್ಸ್ ಶೇ 100ರಷ್ಟು, ಬಿಟ್ ಟಾರೆಂಟ್ ಶೇ 44.32, ಎಕ್ಸ್ ಆರ್ ಪಿ ಶೇ 37.44ರಷ್ಟು ಏರಿಕೆ ಕಂಡಿದ್ದು, ಒಟ್ಟಾರೆ, ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೌಲ್ಯ ಏರಿಕೆಗೆ ಕಾರಣವಾಗಿದೆ.
ಬಿಟ್‌ಕಾಯಿನ್: ಇದು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿಯಾಗಿರುವುದರಿಂದ ಯಾವುದೇ ರೀತಿಯಲ್ಲಿ ಮುದ್ರಣ ರೂಪದಲ್ಲಿ ಸಿಗುವುದಿಲ್ಲ. ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಯಾವುದೇ ದೇಶ, ಭಾಷೆ, ಬ್ಯಾಂಕುಗಳಿಗೆ ಇದು ಸೀಮಿತವಾಗಿಲ್ಲ. ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಅನೇಕ ದೇಶಗಳಲ್ಲಿ ನಿಷೇಧವಾಗಿರುವ ಕ್ರಿಪ್ಟೋ ಕರೆನ್ಸಿ ಇತ್ತೀಚೆಗೆ ಭಾರಿ ಬೇಡಿಕೆ ಪಡೆದು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಡಿಜಿಟಲ್ ಆಸ್ತಿ ರೂಪದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದೇ ಹೊರತೂ ಸಾಮಾನ್ಯ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications