ಬಜೆಟ್ 2022: ಗೃಹೋಪಯೋಗಿ ವಸ್ತು ಉದ್ಯಮದ ನಿರೀಕ್ಷೆಗಳೇನು?
ನವದೆಹಲಿ, ಜನವರಿ 24: ಗೃಹೋಪಯೋಗಿ ಉಪಕರಣಗಳು ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್ ಉದ್ಯಮವು ಮುಂಬರುವ ಬಜೆಟ್‌ನಲ್ಲಿ ನಿರ್ದಿಷ್ಟ ಆರ್&ಡಿ ಹಾಗೂ ಪಿಎಲ್‌ಎ ಯೋಜನೆಯಡಿಯಲ್ಲಿ ಯೋಜನೆಗಳಿಗೆ ಉತ್ತೇಜನಗಳ ಜೊತೆಗೆ ಸಿದ್ಧಪಡಿಸಿದ ಸರಕುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸುವ ನಿರೀಕ್ಷೆಯನ್ನು ಹೊಂದಿದೆ. ಸುಮಾರು 75,000 ಕೋಟಿ ರೂಪಾಯಿಗಳ ಉದ್ಯಮವು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಕೆಲವು ಕ್ರಮಗಳನ್ನು ಈ ಬಜೆಟ್‌ನಲ್ಲಿ ನಿರೀಕ್ಷಿಸಿದೆ ಎಂದು ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ತಯಾರಕರ ಸಂಘ (ಸಿಇಎಎಂಎ) ಹೇಳಿದೆ.
"ಸ್ಥಳೀಯ ತಯಾರಕರನ್ನು ಮತ್ತಷ್ಟು ಉತ್ತೇಜಿಸಲು, ಭಾಗಗಳು ಮತ್ತು ಸಿದ್ಧಪಡಿಸಿದ ಸರಕುಗಳ ನಡುವೆ ಶೇಕಡಾ ಐದು ರಷ್ಟು ವ್ಯತ್ಯಾಸದ ಸುಂಕ ಇರಬೇಕು. ಇದು ತಯಾರಕರಿಗೆ ಹೆಚ್ಚು ಅಗತ್ಯವಿರುವ ಪ್ರೋತ್ಸಾಹವನ್ನು ಒದಗಿಸುತ್ತದೆ ಮತ್ತು ಭಾರತದಲ್ಲಿ ಉತ್ಪಾದನಾ ನೆಲೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ," ಎಂದು ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ತಯಾರಕರ ಸಂಘದ ಅಧ್ಯಕ್ಷ ಎರಿಕ್ ಬ್ರಗಾಂಜಾ ತಿಳಿಸಿದ್ದಾರೆ.
ಬಜೆಟ್ ಅಧಿವೇಶನ ಜನವರಿ 31 ರಂದು ಆರಂಭವಾಗಲಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ವಾರ್ಷಿಕ ಬಜೆಟ್ ಮಂಡಿಸಲಿದ್ದಾರೆ. ಈ ನಡುವೆ ಹಲವಾರು ವಲಯಗಳು ತಮ್ಮ ಬೇಡಿಕೆಯನ್ನು ವ್ಯಕ್ತಪಡಿಸಿದೆ. "ಭಾರತೀಯ ತಯಾರಕರಿಗೆ ತಾಂತ್ರಿಕ ಪ್ರಗತಿಯನ್ನು ಮುಂದುವರಿಸಲು ಆರ್&ಡಿ (ಸಂಶೋಧನೆ ಮತ್ತು ಅಭಿವೃದ್ಧಿ) ವೆಚ್ಚಗಳಿಗೆ ಶೇಕಡಾ ಇನ್ನೂರಷ್ಟು ಕಡಿತದ ಅಗತ್ಯವಿದೆ. ಹೆಚ್ಚುವರಿಯಾಗಿ, ಪಿಎಲ್‌ಐ ಯೋಜನೆಯಡಿಯಲ್ಲಿ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ನಿರ್ದಿಷ್ಟ ಆರ್&ಡಿ ಹಾಗೂ ಸ್ಥಳೀಯ ಯೋಜನೆಗಳಿಗೆ ಪ್ರೋತ್ಸಾಹವನ್ನು ನೀಡಬಹುದು," ಎಂದರು.

ಟಿವಿ, ಎಸಿ ಮೇಲಿನ ಜಿಎಸ್‌ಟಿ ಕಡಿತ ನಿರೀಕ್ಷೆ
ಹವಾನಿಯಂತ್ರಣಗಳ ಮೇಲಿನ ಜಿಎಸ್‌ಟಿಯನ್ನು ಸರ್ಕಾರವು 18 ಪ್ರತಿಶತ ತೆರಿಗೆಗೆ ಇಳಿಸಲು ಉದ್ಯಮವು ನಿರೀಕ್ಷಿಸುತ್ತಿದೆ. ಟಿವಿಗೆ (105 ಸೆಂಟಿ ಮೀಟರ್ ಪರದೆಯ ಗಾತ್ರಕ್ಕಿಂತ ಮೇಲ್ಪಟ್ಟು) ಇದೇ ರೀತಿಯ ಕಡಿತವನ್ನು ಸಹ ಉದ್ಯಮವು ನಿರೀಕ್ಷಿಸುತ್ತಿದೆ. ಇದಲ್ಲದೆ, ಕೆಲವು ತಯಾರಕರು ಸರ್ಕಾರವು ಎನರ್ಜಿ-ಎಫಿಶಿಯನ್ಸಿ ಉತ್ಪನ್ನಗಳಿಗೆ ಜಿಎಸ್‌ಟಿಯನ್ನು 12 ಪ್ರತಿಶತಕ್ಕೆ ಇಳಿಸುವ ನಿರೀಕ್ಷೆಯನ್ನು ಹೊಂದಿದ್ದಾರೆ. ಇದರಿಂದಾಗಿ ಬೇಡಿಕೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಸಂಸ್ಥೆಯು ತಿಳಿಸಿದೆ.
ಗೋದ್ರೇಜ್ ಅಪ್ಲೈಯನ್ಸ್ ಬಿಸಿನೆಸ್ ಹೆಡ್ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ಕಮಲ್ ನಂದಿ ಮಾತನಾಡಿ, "ಉದ್ಯಮವು ಭಾರೀ ಸರಕುಗಳ ಬೆಲೆಗಳು, ಘಟಕಗಳ ಕೊರತೆ ಮತ್ತು ಕಡಿಮೆ ಪ್ರಮಾಣದ ಬೆಳವಣಿಗೆಯ ಜೊತೆಗೆ ಬೇಡಿಕೆಯ ಕೊರತೆಯನ್ನು ಎದುರಿಸುತ್ತಿದೆ," ಎಂದಿದ್ದಾರೆ. ಹವಾನಿಯಂತ್ರಣಗಳು, ರೆಫ್ರಿಜರೇಟರ್‌ಗಳು ಮತ್ತು ವಾಷಿಂಗ್ ಮಷಿನ್‌ಗಳು ಮುಖ್ಯವಾಗಿ ಅಗತ್ಯ ಗೃಹೋಪಯೋಗಿ ವಸ್ತುಗಳಾಗಿವೆ.
"ಈ ಬಜೆಟ್ ಈ ಉತ್ಪನ್ನಗಳಿಗೆ ಜಿಎಸ್‌ಟಿಯನ್ನು ಸರಿದೂಗಿಸುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಹವಾನಿಯಂತ್ರಣಗಳು ಇನ್ನೂ ಶೇಕಡಾ 28 ರ ಅತ್ಯಧಿಕ ತೆರಿಗೆಯನ್ನು ಹೊಂದಿದೆ. ಅದನ್ನು ಸರ್ಕಾರ ಶೇಕಡ 18 ಕ್ಕೆ ಇಳಿಸುವ ನಿರೀಕ್ಷೆಯನ್ನು ನಾವು ಹೊಂದಿದ್ದೇವೆ," ಎಂದಿದ್ದಾರೆ. "ಉಪಕರಣಗಳ ಬೆಲೆ ಏರಿಕೆ ಆದಾಗ ಅದರ ಖರೀದಿಯೂ ಕಡಿಮೆ ಆಗುತ್ತದೆ. ಸರ್ಕಾರ ಬಜೆಟ್‌ನಲ್ಲಿ ತೆರಿಗೆ ಕಡಿತ ಮಾಡಿದರೆ, ಉದ್ಯಮವನ್ನು ಸರಿದೂಗಿಸಲು ಸಹಕಾರಿ ಆಗುತ್ತದೆ. ಈ ವಲಯಗಳಲ್ಲಿ ಉತ್ಪಾದನೆಗೆ ಒತ್ತು ನೀಡಲು ಸಹಾಯ ಮಾಡುತ್ತದೆ," ಎಂದು ಕೂಡಾ ಗೋದ್ರೇಜ್ ಅಪ್ಲೈಯನ್ಸ್ ಬಿಸಿನೆಸ್ ಹೆಡ್ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ಕಮಲ್ ನಂದಿ ತಿಳಿಸಿದ್ದಾರೆ.
ಪ್ಯಾನಾಸೋನಿಕ್ ಸಿಇಒ (ಭಾರತ ಮತ್ತು ದಕ್ಷಿಣ ಏಷ್ಯಾ) ಮನೀಶ್ ಶರ್ಮಾ ಮಾತನಾಡಿ, "ಉದ್ಯಮವು ಸಂಪೂರ್ಣವಾಗಿ ಬಿಲ್ಟ್-ಅಪ್ (ಸಿಬಿಯು) ಆಡಿಯೊ ಉತ್ಪನ್ನಗಳ ಮೇಲಿನ ಆಮದು ಸುಂಕಗಳಲ್ಲಿ ಹೆಚ್ಚಳವನ್ನು ನಿರೀಕ್ಷಿಸಬಹುದು. ಆಡಿಯೋ ತಂತ್ರಜ್ಞಾನವು ಉದಯೋನ್ಮುಖ ವಲಯವಾಗಿದೆ. ಹೊಸ ಹೊಸ ಜನರು ಈ ಉದ್ಯಮಕ್ಕೆ ಧುಮುಕುತ್ತಿದ್ದಾರೆ. ಇದರ ಬೇಡಿಕೆ ಹಾಗೂ ಪೂರೈಕೆ ಸಾರ್ವಕಾಲಿಕ ಎತ್ತರದಲ್ಲಿದೆ. ಶೀಯ ಉತ್ಪಾದನೆಯನ್ನು ಉತ್ತೇಜಿಸಲು ಆಡಿಯೊ ಮೇಲೆ ಕೆಲವು ಸುಂಕದ ಅಡೆತಡೆಗಳನ್ನು ನಾವು ನಿರೀಕ್ಷಿಸುತ್ತೇವೆ," ಎಂದಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications