Bajaj Housing Finance Share: ಮೊದಲ ದಿನವೇ ಹೂಡಿಕೆದಾರರ ಹಣ ಡಬಲ್ ಮಾಡಿದ ಷೇರು
ಷೇರು ಮಾರುಕಟ್ಟೆಯಲ್ಲಿ ಬಜಾಜ್ ಹೌಸಿಂಗ್ ಫೈನಾನ್ಸ್ ಷೇರುಗಳು ಮೊದಲ ದಿನವೇ ಹೂಡಿಕೆದಾರರಿಗೆ ಭರ್ಜರಿ ಲಾಭ ಮಾಡಿಕೊಟ್ಟಿದೆ. ಐಪಿಒದಲ್ಲಿ 70 ರೂಪಾಯಿ ಇದ್ದ ಪ್ರತಿ ಷೇರಿನ ಬೆಲೆ ಮೊದಲ ದಿನವೇ 165 ರೂಪಾಯಿಗೆ ಏರಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಐಪಿಒದಲ್ಲಿ ಬಜಾಜ್ ಹೌಸಿಂಗ್ ಫೈನಾನ್ಸ್ ಷೇರುಗಳ ಬುಕಿಂಗ್ ಶುರುವಾದಾಗಲೇ ಹೂಡಿಕೆದಾರರು ಭಾರಿ ಆಸಕ್ತಿ ತೋರಿದ್ದರು. ಮೊದಲ ದಿನವೇ ಹಣ ಡಬಲ್ ಮಾಡುವ ಸೂಚನೆ ಸಿಕ್ಕಿತ್ತು, ಆದರೆ ಅದನ್ನೂ ಮೀರಿ 135 ಪ್ರತಿಶತ ಹೆಚ್ಚಾಗಿದೆ.
ಬಜಾಜ್ ಕಂಪನಿಯ ಮತ್ತೊಂದು ವ್ಯವಹಾರ ಆದ ಕಾರಣ, ಹೂಡಿಕೆದಾರರು ಷೇರು ಖರೀದಿಗೆ ಮುಗಿಬಿದ್ದರು. ಮೊದಲ ದಿನವೇ 135 ಪ್ರತಿಶತ ಲಾಭ ಮಾಡಿಕೊಡುವ ಮೂಲಕ 2024ರ ನಾಲ್ಕನೇ ಅತ್ಯುತ್ತಮ ಲಿಸ್ಟಿಂಗ್ ಆಗಿದೆ. ಬಿಎಲ್‌ಎಸ್ ಇ ಸರ್ವಿಸ್, ಪ್ರೀಮಿಯರ್ ಎನರ್ಜಿಸ್ ಮತ್ತು ಯೂನಿಕಾಮರ್ಸ್ ಇ-ಸಲ್ಯೂಶನ್ಸ್ ಷೇರುಗಳು ಕೂಡ ಇದೇ ರೀತಿ ಮೊದಲ ದಿನವೇ ಭರ್ಜರಿ ಲಾಭ ಮಾಡಿಕೊಟ್ಟಿದ್ದವು.

ಇತ್ತೀಚೆಗೆ ಓಲಾ ಎಲೆಕ್ಟ್ರಿಕ್ ಕಂಪನಿಯ ಷೇರುಗಳು ಕೂಡ ಒಂದೇ ವಾರದಲ್ಲಿ ಹೂಡಿಕೆದಾರರ ಹಣವನ್ನು ಡಬಲ್ ಮಾಡಿದ್ದವು. ಬಳಿಕ ಷೇರುಗಳ ಬೆಲೆಯಲ್ಲಿ ಭಾರಿ ಕುಸಿತ ಕಂಡು ಬಂದಿತ್ತು.
ಈ ಷೇರಿಗೆ ಯಾಕಿಷ್ಟು ಬೇಡಿಕೆ?
ಇತ್ತೀಚೆಗೆ ಐಪಿಒ ಗಳಲ್ಲಿ ಷೇರು ಬುಕ್ ಮಾಡಲು ಹೆಚ್ಚಿನ ಹೂಡಿಕೆದಾರರು ಆಸಕ್ತಿ ತೋರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಹೊಸಬರು ಆಸಕ್ತಿ ತೋರಿಸುತ್ತಿರುವ ಕಾರಣ ಈ ರೀತಿಯ ಪ್ರಮುಖ ಕಂಪನಿಗಳು ಐಪಿಒ ಬಕ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಐಪಿಒದಲ್ಲಿ ಎಲ್ಲರಿಗೂ ಷೇರುಗಳು ಸಿಕ್ಕಿಲ್ಲ, ಸಿಕ್ಕವರಿಗೆ ಮಾತ್ರ ಅದೃಷ್ಟ ಖುಲಾಯಿಸಿದೆ.
70 ರೂಪಾಯಿ ಮುಖಬೆಲೆಯ ಷೇರು, ಸೋಮವಾರ 165 ರೂಪಾಯಿಗೆ ವಹಿವಾಟು ಮುಗಿಸಿದೆ. ಮಂಗಳವಾರ ಕೂಡ ಈ ಕಂಪನಿಯ ಷೇರು ಬೆಲೆಗಳು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ನಿರೀಕ್ಷೆ ಮಾಡಿದ್ದಾರೆ. ಬ್ರೋಕರೇಜ್ ಸಂಸ್ಥೆ ಫಿಲಿಪ್‌ಕ್ಯಾಪಿಟಲ್ ಇತ್ತೀಚೆಗೆ ಬಜಾಜ್ ಹೌಸಿಂಗ್ ಫೈನಾನ್ಸ್‌ನ ಷೇರುಗಳನ್ನು 'ಖರೀದಿ' ಶಿಫಾರಸ್ಸು ಮಾಡಿದ್ದು, ಷೇರು ಬೆಲೆ 210 ರೂಪಾಯಿಗೆ ಏರಿಕೆಯಾಗುವ ಗುರಿ ನೀಡಿದೆ.
ಬಜಾಜ್ ಹೌಸಿಂಗ್ ಫೈನಾನ್ಸ್ ಹೆಸರೇ ಹೇಳುವಂತೆ ಮನೆ ಸಾಲದ ಕ್ಷೇತ್ರದಲ್ಲಿ ಕೆಲಸ ಮಾಡುತ್ತದೆ. ಭಾರತದಲ್ಲಿ ಸ್ವಂತ ಮನೆ ಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಬೆಳವಣಿಗೆಯನ್ನು ನಿರೀಕ್ಷೆ ಮಾಡಲಾಗಿದೆ.
ಬಜಾಜ್ ಫೈನಾನ್ಸ್ ಐಪಿಒ ಗಾತ್ರ ₹6,560 ಕೋಟಿ ಇದ್ದರೆ, ಐಪಿಒ ₹3.24 ಲಕ್ಷ ಕೋಟಿ ಮೌಲ್ಯದ ಬಿಡ್‌ಗಳನ್ನು ಸ್ವೀಕರಿಸಿತ್ತು. ಇದು ಐಪಿಒ ಇತಿಹಾಸದಲ್ಲೇ ಹೊಸ ದಾಖಲೆಯಾಗಿದ್ದು, ಅತಿ ಹೆಚ್ಚು ಬೇಡಿಕೆ ಪಡೆದ ಐಪಿಒ ಎನಿಸಿಕೊಂಡಿದೆ.
Disclaimer: ಒನ್‌ಇಂಡಿಯಾ ಷೇರು ಮಾರುಕಟ್ಟೆ ಸುದ್ದಿಗಳನ್ನು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ನೀಡುತ್ತದೆ. ಇದನ್ನು ಹೂಡಿಕೆ ಸಲಹೆ ಎಂದು ಪರಿಗಣಿಸಬಾರದು. ಯಾವುದೇ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ತಜ್ಞ ಹಣಕಾಸು ಸಲಹೆಗಾರರ ಜತೆ ಚರ್ಚಿಸುವಂತೆ ಮನವಿ ಮಾಡಲಾಗಿದೆ.












Click it and Unblock the Notifications