Axis Bank: ಆಕ್ಸಿಸ್ ಬ್ಯಾಂಕ್ ಟ್ರೇಡಿಂಗ್ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ; ಗ್ರಾಹಕರಲ್ಲಿ ಆತಂಕ
ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಆಕ್ಸಿಸ್ ಬ್ಯಾಂಕ್‌ನ ಟ್ರೇಡಿಂಗ್ ಪೋರ್ಟಲ್‌ನಲ್ಲಿ ಭಾರಿ ತಾಂತ್ರಿಕ ದೋಷ ಕಂಡುಬಂದಿದೆ ಎಂದು ಗುಡ್‌ರಿಟರ್ನ್ಸ್ ವರದಿ ಮಾಡಿದೆ. ಭಾರತೀಯ ಮೂಲದ ವಿದೇಶಿಗ ವೆಂಕಿ ಎನ್ನುವವರು ಗುಡ್‌ರಿಟರ್ನ್ಸ್ ಜೊತೆ ಮಾತನಾಡಿದ್ದು, ಪೋರ್ಟಲ್‌ನಲ್ಲಿ ಭದ್ರತೆಯ ಬಗ್ಗೆ ಆತಂಕ ಇರುವುದನ್ನು ಬಹಿರಂಗಪಡಿಸಿದ್ದಾರೆ.
ವೆಂಕಿಯವರು ಆಕ್ಸಿಸ್ ಬ್ಯಾಂಕ್‌ನ ಟ್ರೇಡಿಂಗ್ ಪೋರ್ಟಲ್‌ಗೆ ಲಾಗ್ ಇನ್ ಆಗಲು ಪ್ರಯತ್ನ ಮಾಡಿದಾಗ, ಅವರು ಬೇರೊಬ್ಬರು ಬಳಕೆದಾರರ ಪೋರ್ಟ್‌ಪೋಲಿಯೋಗೆ ಲಾಗಿನ್ ಆಗಿದ್ದು, ಶಾಕ್ ಕೊಟ್ಟಿದೆ. ಇತರೆ ಬಳಕೆದಾರರ ಪೋರ್ಟ್‌ಪೋಲಿಯೋಗೆ ಲಾಗಿನ್ ಆಗಿ ಅವರ ವ್ಯಾಪಾರ, ವಹಿವಾಟು ನಿಯಂತ್ರಿಸಲು, ಗೌಪ್ಯ ಮಾಹಿತಿ ಪಡೆಯಲು ಸಹ ಸಾಧ್ಯವಾಗಿದ್ದು, ಆತಂಕ ಮೂಡಿಸಿದೆ.

ವೆಂಕಿಯವರು ಹೇಳುವಂತೆ ಇದು ಒಂದೆರಡು ಬಾರಿ ನಡೆದಿರುವ ಘಟನೆಯಲ್ಲ ಎಂದಿದ್ದಾರೆ. ಷೇರು ಮಾರುಕಟ್ಟೆ ನಡೆಯುವ ಸಂದರ್ಭದಲ್ಲಿ ನಾನು ಬೇರೊಬ್ಬರ ಪೋರ್ಟ್‌ಪೋಲಿಯೋ ಮತ್ತು ಬುಕ್ ಮಾಡಿರುವ ವಹಿವಾಟುಗಳ ಮಾಹಿತಿಯನ್ನು ಪಡೆಯಲು ಸಾಧ್ಯವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಾರುಕಟ್ಟೆ ವೇಳೆ ತಾಂತ್ರಿಕ ದೋಷ ಉಂಟಾಗಿದ್ದು, ಅದನ್ನು ಪರಿಹರಿಸಲು ಬ್ಯಾಂಕ್‌ನ ಸಿಬ್ಬಂದಿ ಮುಮದಾಗಿಲ್ಲ ಎಂದು ಹೇಳಿದ್ದಾರೆ. ಸೆಪ್ಟೆಂಬರ್ 13ರಂದು 11:30 ಗಂಟೆಗೆ ಆಕ್ಸಿಸ್ ಬ್ಯಾಂಕ್ ಸೆಬಿ ಮತ್ತು ಆರ್‌ಬಿಐಗೆ ಸಮಸ್ಯೆಯನ್ನು ವರದಿ ಮಾಡಿದ್ದೇನೆ ಎಂದು ವೆಂಕಿ ತಿಳಿಸಿದ್ದಾರೆ.

ಬ್ಯಾಂಕ್‌ನಿಂದ ಪ್ರತಿಕ್ರಿಯೆ ಬಂದಿಲ್ಲ
ಗುಡ್‌ರಿಟರ್ನ್ಸ್ (Goodreturns.in) ಜೊತೆ ಮಾತನಾಡುವ ಸಂದರ್ಭದಲ್ಲಿ, ಆಕ್ಸಿಸ್ ಬ್ಯಾಂಕ್ ರಿಂಗ್ ಟ್ರೇಡಿಂಗ್ ಫ್ಲಾಟ್‌ಫಾರ್ಮ್‌ನಲ್ಲಿ ಗಂಭೀರವಾದ ದೋಷವನ್ನು ಕಂಡುಹಿಡಿದಿದ್ದೇನೆ. ಆಕ್ಸಿಸ್ ಬ್ಯಾಂಕ್ ಗ್ರಾಹಕರ ಹೂಡಿಕೆ ಪೋರ್ಟ್‌ಫೋಲಿಯೊಗಳನ್ನು ಬೇರೆ ಗ್ರಾಹಕರ ಖಾತೆಗಳಲ್ಲಿ ವಹಿವಾಟು ನಡೆಸಲು ಅವಕಾಶ ನೀಡುತ್ತಿದೆ ಎಂದು ಹೇಳಿದ್ದಾರೆ.
ಸಮಸ್ಯೆ ಬಗ್ಗೆ ಗುಡ್‌ರಿಟರ್ನ್ಸ್ ಆಕ್ಸಿಸ್ ಬ್ಯಾಂಕ್‌ಗೆ ಇಮೇಲ್ ಮಾಡಿದ್ದು, ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದ ವರದಿಯಲ್ಲಿ ತಿಳಿಸಿದೆ.
ನಿಯಮಗಳ ಉಲ್ಲಂಘನೆ
ಬೇರೆ ಗ್ರಾಹಕರ ಹೂಡಿಕೆ ಪೋರ್ಟ್‌ಫೋಲಿಯೊಗಳಿಗೆ ಅನಧಿಕೃತ ಪ್ರವೇಶವು ಅವರ ಗೌಪ್ಯತೆ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ, ಇದೊಂದು ಗಂಭೀರ ಸಮಸ್ಯೆಯಾಗಿದೆ.
ಬೇರೊಬ್ಬ ಗ್ರಾಹಕರ ಖಾತೆಯಲ್ಲಿ ಅವರ ಒಪ್ಪಿಗೆಯಿಲ್ಲದೆ ವಹಿವಾಟು ನಡೆಸಲು ಅವಕಾಶ ನಿಡುತ್ತಿರುವುದು ಭದ್ರತಾ ದೋಷವಾಗಿದೆ. ಇದರಿಂದ ಅನಧಿಕೃತ ವಹಿವಾಟಡುಗಳು ಮಾತ್ರವಲ್ಲದೆ ಹೂಡಿಕೆದಾರರು ಹಣಕಾಸಿನ ವಂಚನೆಗೆ ಒಳಗಾಗುವ ಸಾಧ್ಯತೆ ಇದೆ.
ಹಣಕಾಸಿನ ವಿಚಾರದಲ್ಲಿ ಆರ್ ಬಿಐ ಮತ್ತು ಟ್ರೇಡಿಂಗ್ ಬಗ್ಗೆ ಸೆಬಿ ಸಾಕಷ್ಟು ಕಠಿಣ ನಿಯಮಗಳನ್ನು ಮಾಡಿದೆ. ಆದರೆ ಆಕ್ಸಿಸ್ ಬ್ಯಾಂಕ್‌ನ ಈ ದೋಷವು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಗ್ರಾಹಕರಿಗೆ ಹಣಕಾಸಿನ ನಷ್ಟ ಉಂಟುಮಾಡುವ ಅಪಾಯ ಎದುರಾಗಿದೆ.
ಯಾವುದೇ ಬ್ಯಾಂಕ್ ಗ್ರಾಹಕರ ನಂಬಿಕೆಯನ್ನು ಯಾವುದೇ ಸಂದರ್ಭದಲ್ಲಿ ಕೂಡ ಕಳೆದುಕೊಳ್ಳಬಾರದು. ಆದರೆ ಪ್ರತಿಷ್ಠಿತ ಬ್ಯಾಂಕೊಂದರಲ್ಲೇ ಗ್ರಾಹಕರ ಹಣಕಾಸಿಗೆ ಭದ್ರತೆ ಇಲ್ಲ ಎನ್ನುವುದು ಗಂಭೀರ ಸಮಸ್ಯೆಯಾಗಿದೆ.
"ನನ್ನ ಗಮನಕ್ಕೆ ಬರದೆ, ನನ್ನ ಖಾತೆಯಲ್ಲಿ ಬೇರೊಬ್ಬರು ವಹಿವಾಟು ನಡೆಸುವ ಬಗ್ಗೆ ನನಗೆ ಆತಂಕ ಶುರುವಾಗಿದೆ. ನನ್ನ ಖಾತೆಯಲ್ಲಿ ನಡೆಯುವ ಯಾವುದೇ ಅನಧಿಕೃಯ ವಹಿವಾಟುಗಳಿಗೆ ಮತ್ತು ಹಣಕಾಸಿನ ವಂಚನೆಗಳಿಗೆ ಆಕ್ಸಿಸ್ ಬ್ಯಾಂಕ್ ಹೊಣೆಯಾಗುತ್ತದೆ. ಎಲ್ಲದಕ್ಕೂ ಆಕ್ಸಿಸ್ ಬ್ಯಾಂಕ್ ಪರಿಹಾರ ನೀಡಬೇಕು. ತಕ್ಷಣವೇ ಆಕ್ಸಿಸ್ ಬ್ಯಾಂಕ್ ಗ್ರಾಹಕರ ವೈಯಕ್ತಿಕ ಗೌಪ್ಯ ಮಾಹಿತಿಯನ್ನು ರಕ್ಷಣೆ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು" ಎಂದು ವೆಂಕಿ ಒತ್ತಾಯಿಸಿದ್ದಾರೆ.












Click it and Unblock the Notifications