ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಖರೀದಿಸಿರುವ ವರದಿ ಸುಳ್ಳು ಎಂದ ಕೇಂದ್ರ ಸರ್ಕಾರ
ನವದೆಹಲಿ, ಅಕ್ಟೋಬರ್ 1: ಏರ್ ಇಂಡಿಯಾ ಸಂಸ್ಥೆಯ ಬಿಡ್ ಟಾಟಾ ಗ್ರೂಪ್ ಕಂಪನಿಯ ಪಾಲಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ಏರ್ ಇಂಡಿಯಾ ಕೊಳ್ಳಲು ಬಿಡ್ ಸಲ್ಲಿಸಿದ್ದ ಸಂಸ್ಥೆಗಳ ಪೈಕಿ ಟಾಟಾ ಸನ್ಸ್ ಹಾಗೂ ಸ್ಪೈಸ್ ಜೆಟ್ ಪ್ರಮುಖ ಸಂಸ್ಥೆಗಳಾಗಿದ್ದು, ಈ ಪೈಕಿ ಏರ್ ಇಂಡಿಯಾ ಖರೀದಿಗೆ ಸಲ್ಲಿಸಿದ್ದ ಫೈನಲ್ ಬಿಡ್ ಟಾಟಾ ಸಮೂಹ ಸಂಸ್ಥೆ ಪಾಲಾಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿತ್ತು.
"ಏರ್ ಇಂಡಿಯಾದ ಬಂಡವಾಳಹರಣ ಪ್ರಕರಣದಲ್ಲಿ ಭಾರತ ಸರ್ಕಾರವು ಹಣಕಾಸು ಬಿಡ್‌ಗಳ ಅನುಮೋದನೆಯನ್ನು ಸೂಚಿಸುವ ಮಾಧ್ಯಮ ವರದಿಗಳು ತಪ್ಪಾಗಿವೆ," ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ ಟ್ವೀಟ್ ಮಾಡಿದೆ.
ಟಾಟಾ ಗ್ರೂಪ್ ಮತ್ತು ಸ್ಪೈಸ್ ಜೆಟ್ ಚೇರ್ಮನ್ ಅಜಯ್ ಸಿಂಗ್ ತಮ್ಮ ಖಾಸಗಿ ಸಾಮರ್ಥ್ಯದಲ್ಲಿ ಸಾಲದ ಹೊರೆ ಹೊತ್ತಿರುವ ಸರ್ಕಾರಿ ವಿಮಾನಯಾನ ಸಂಸ್ಥೆ ಏರ್ ಇಂಡಿಯಾಕ್ಕಾಗಿ ಈ ತಿಂಗಳ ಆರಂಭದಲ್ಲಿ ಬಿಡ್ ಸಲ್ಲಿಸಿದ್ದರು. ಕಳೆದ ಡಿಸೆಂಬರ್ 2020 ರಲ್ಲಿ ಏರ್ ಇಂಡಿಯಾದ ವಿಭಜನೆಗೆ ಸರ್ಕಾರವು ಆಸಕ್ತಿಯ ಆಹ್ವಾನ ನೀಡಿತ್ತು. ಸಾಲದ ಸುಳಿಗೆ ಸಿಲುಕಿದ್ದ ವಿಮಾನಯಾನ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳಲು ನಾಲ್ಕು ಬಿಡ್ಡರ್‌ಗಳು ಸ್ಪರ್ಧಿಸಿದ್ದು, ಅಂತಿಮ ಹಂತದಲ್ಲಿ ಟಾಟಾ ಗ್ರೂಪ್ ಮತ್ತು ಸ್ಪೈಸ್‌ಜೆಟ್ ಸಿಇಒ ಅಜಯ್ ಸಿಂಗ್ ಮಾತ್ರ ಉಳಿದುಕೊಂಡಿದ್ದರು.
|
ಕೇಂದ್ರದಿಂದ ಏರ್ ಇಂಡಿಯಾ ಮಾರಾಟಕ್ಕೆ ಎರಡನೇ ಯತ್ನ
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಏರ್ ಇಂಡಿಯಾವನ್ನು ಎರಡನೇ ಬಾರಿ ಮಾರಾಟ ಮಾಡಲು ಪ್ರಯತ್ನಿಸಿದೆ. ಕೇಂದ್ರ ಸರ್ಕಾರವು ಕಳೆದ 2018ರ ಮಾರ್ಚ್ ತಿಂಗಳಿನಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ವಿಮಾನಯಾನ ಸಂಸ್ಥೆಯನ್ನು ಮಾರಾಟ ಮಾಡುವ ಪ್ರಯತ್ನ ವಿಫಲವಾಗಿತ್ತು. ಆದಾಗ್ಯೂ ಏರ್‌ಲೈನ್‌ನ ಹೆಚ್ಚುತ್ತಿರುವ ಸಾಲದ ಕುರಿತಾದ ಕಾಳಜಿಯಿಂದಾಗಿ ಏರ್ ಇಂಡಿಯಾದಲ್ಲಿ ಶೇ.76ರಷ್ಟು ಷೇರುಗಳನ್ನು ಮಾರಾಟ ಮಾಡಲು ಆಸಕ್ತಿ ತೋರಿರಲಿಲ್ಲ.

ಸರ್ಕಾರ ಹಾಗೂ ವಿಮಾನಯಾನ ಸಂಸ್ಥೆಗೆ ನಷ್ಟ
ವರದಿಗಳ ಪ್ರಕಾರ, ಏರ್ ಇಂಡಿಯಾ ಸಂಸ್ಥೆಯು ಸುಮಾರು 70,000 ಕೋಟಿ ರೂಪಾಯಿಗೂ ಅಧಿಕ ನಷ್ಟವನ್ನು ಅನುಭವಿಸಿದೆ. ಇದರ ಜೊತೆಗೆ ಕೇಂದ್ರ ಸರ್ಕಾರವು ಪ್ರತಿದಿನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ನಿರ್ವಹಣೆಗೆ ಸುಮಾರು 20 ಕೋಟಿ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ.

ಖಾಸಗಿ ವಿಮಾನಯಾನ ಸಂಸ್ಥೆಗಳಿಂದ ಆಘಾತ
1990ರ ಕಾಲದಲ್ಲಿ ಭಾರತೀಯ ವಿಮಾನಯಾನದಲ್ಲಿ ರಾರಾಜಿಸಿದ್ದ ಏರ್ ಇಂಡಿಯಾ ಸಂಸ್ಥೆಯು ಖಾಸಗಿ ವಿಮಾನಗಳ ಪ್ರವೇಶದಿಂದ ಮಂಕಾಯಿತು. 2000ರಲ್ಲಿ ಯಾವುದೇ ಹೊಸ ವಿಮಾನಗಳಿಲ್ಲದೇ ಸೊರಗುವಿಕೆ ಶುರುವಾಯಿತು. ಅಂತಿಮವಾಗಿ 2007ರಲ್ಲಿ ಸರ್ಕಾರಿ ಸ್ವಾಮ್ಯದ ದೇಶೀಯ ವಿಮಾನಯಾನ ಸಂಸ್ಥೆ ಇಂಡಿಯನ್ ಏರ್ ಲೈನ್ಸ್ ಜೊತೆಗಿನ ಏರ್ ಇಂಡಿಯಾ ವಿಲೀನದಿಂದ ಸಂಸ್ಥೆಯು ಸಂಪೂರ್ಣ ನಷ್ಟದ ಸುಳಿಗೆ ಸಿಲುಕಿತು. ಅದಾಗ್ಯೂ, ಏರ್ ಇಂಡಿಯಾ ಇನ್ನೂ 4,400ಕ್ಕಿಂತ ಹೆಚ್ಚು ದೇಶೀಯ ಮತ್ತು 1,800 ಅಂತರಾಷ್ಟ್ರೀಯ ಲ್ಯಾಂಡಿಂಗ್ ಮತ್ತು ದೇಶೀಯ ವಿಮಾನ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸ್ಲಾಟ್‌ಗಳನ್ನು ನಿಯಂತ್ರಿಸುತ್ತದೆ ಮತ್ತು ಸಾಗರೋತ್ತರ 900 ಸ್ಲಾಟ್‌ಗಳನ್ನು ನಿಯಂತ್ರಿಸುತ್ತಿದೆ.

ಏರ್ ಇಂಡಿಯಾ ಮಾಡಿಕೊಂಡಿರುವ ಸಾಲದ ಮೊತ್ತ?
ಕಳೆದ 2017-18ರಲ್ಲಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು 5,799 ಕೋಟಿ ರೂ ನಷ್ಟ ಅನುಭವಿಸಿದೆ. ಅಂದಿಗೆ ಏರ್ ಇಂಡಿಯಾ ಸಂಸ್ಥೆ ಮೇಲೆ 58,000 ಕೋಟಿ ರೂಪಾಯಿ ಸಾಲವಿತ್ತು. 2019ರ ಮಾರ್ಚ್ 31ಕ್ಕೆ ಈ ಪ್ರಮಾಣ 60,074 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಮಾರುಕಟ್ಟೆ ಮೌಲ್ಯ ಲೆಕ್ಕ ಹಾಕುವಾಗ ಕಡಿಮೆ ಹಾಗೂ ದೀರ್ಘಾವಧಿ ಸಾಲದ ಮೊತ್ತ ಸಹ ಸೇರಿಕೊಳ್ಳುತ್ತದೆ. ಇಂಧನ ಬಾಕಿ ಮೊತ್ತ ಪಾವತಿಸದ ಕಾರಣ, ಏರ್ ಇಂಡಿಯಾ ವಿಮಾನಗಳಿಗೆ ತೈಲ ಪೂರೈಕೆಯನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆ ಸ್ಥಗಿತಗೊಳಿಸಿತ್ತು. 6 ವಿಮಾನ ನಿಲ್ದಾಣಗಳಲ್ಲಿ ಏರ್ ಇಂಡಿಯಾ ವಿಮಾನ ಹಾರಾಟ ಕಂಡಿರಲಿಲ್ಲ. ಬೇರೆ ದೇಶಿ ವಿಮಾನಯಾನ ಸಂಸ್ಥೆಗೆ ಹೋಲಿಸಿದರೆ, ವಿಮಾನ ರದ್ದು (2.6%), ಸರಿಯಾದ ಸಮಯಕ್ಕೆ ಕಾರ್ಯಕ್ಷಮತೆ (53.5%), ಏರ್ ಲೈನ್ ಲೋಡ್ ಫ್ಯಾಕ್ಟರ್ 80.9% ನಷ್ಟು ಹಿಂದೆ ಉಳಿದಿದೆ.












Click it and Unblock the Notifications