ದೇಶದ ಮೊದಲ ವಿಶ್ವ ದರ್ಜೆಯ ರೈಲು ನಿಲ್ದಾಣ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ
ಭೋಪಾಲ್, ನವೆಂಬರ್ 16: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಹಬೀಬ್‌ಗಂಜ್‌ನಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ವಿಶ್ವ ದರ್ಜೆಯ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಾರ್ಪಣೆ ಮಾಡಿದ್ದಾರೆ.
ರಾಣಿ ಕಮಲಾಪತಿ ರೈಲು ನಿಲ್ದಾಣ ಎಂದು ಮರುನಾಮಕರಣಗೊಂಡ ಹಬೀಬ್‌ಗಂಜ್ ರೈಲು ನಿಲ್ದಾಣವನ್ನು ಆಧುನಿಕ ವಿಶ್ವ ದರ್ಜೆಯ ವೈಶಿಷ್ಟ್ಯಗಳೊಂದಿಗೆ ಮತ್ತು ಆಧುನಿಕ ಸೌಕರ್ಯಗಳೊಂದಿಗೆ ನಿರ್ಮಿಸಿರುವುದು ವಿಶೇಷವಾಗಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಹಬೀಬ್‌ಗಂಜ್ ರೈಲು ನಿಲ್ದಾಣ ಹೊಂದಿದೆ. ರೈಲ್ವೇ ನಿಲ್ದಾಣವನ್ನು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಬನ್ಸಾಲ್ ಗ್ರೂಪ್ ಎಂಬ ಖಾಸಗಿ ಕಂಪನಿ ನಿರ್ಮಿಸಿದೆ.

ಹಬೀಬ್‌ಗಂಜ್ ರೈಲು ನಿಲ್ದಾಣದ ಯೋಜನೆಯ ಒಟ್ಟು ವೆಚ್ಚ ಸುಮಾರು 450 ಕೋಟಿ ರೂಪಾಯಿಯಾಗಿದ್ದು, ಜನಸಂದಣಿಯನ್ನು ನಿಯಂತ್ರಿಸಲು ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳಿವೆ.
ಪ್ಲಾಟ್‌ಫಾರ್ಮ್‌ಗೆ ತಲುಪಲು ನಿಲ್ದಾಣದಲ್ಲಿ ಎಸ್ಕಲೇಟರ್‌ಗಳು ಮತ್ತು ಲಿಫ್ಟ್‌ಗಳನ್ನು ಅಳವಡಿಸಲಾಗಿದೆ. ತೆರೆದ ಸಭಾಂಗಣದಲ್ಲಿ 700 ರಿಂದ 1,100 ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ರೈಲುಗಳ ಸಂಚಾರದ ಮಾಹಿತಿಗಾಗಿ ನಿಲ್ದಾಣದಾದ್ಯಂತ ವಿವಿಧ ಭಾಷೆಯ ಡಿಸ್ಪ್ಲೇ ಬೋರ್ಡ್‌ಗಳನ್ನು ಅಳವಡಿಸಲಾಗಿದೆ.
ಈ ನಿಲ್ದಾಣವು ಫುಡ್ ಕೋರ್ಟ್‌ಗಳು, ರೆಸ್ಟೋರೆಂಟ್‌ಗಳು, ಹವಾನಿಯಂತ್ರಿತ ಕಾಯುವ ಕೊಠಡಿಗಳು, ಡಾರ್ಮಿಟರಿ, ವಿಐಪಿ ಲಾಂಜ್‌ಗಳನ್ನು ಸಹ ಹೊಂದಿದೆ. ನಿಲ್ದಾಣದಲ್ಲಿ 160 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಪ್ರವಾಸೋದ್ಯಮ ಮತ್ತು ರಾಜ್ಯದ ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡಲು ಪ್ರವಾಸಿ ಮಾಹಿತಿ ಕೋಣೆಯನ್ನು ಸ್ಥಾಪಿಸಲಾಗುತ್ತದೆ. ಮೊದಲ ಮಹಡಿಯ ನಿರೀಕ್ಷಣಾ ಹಾಲ್‌ನಲ್ಲಿ ದೊಡ್ಡ ಎಲ್‌ಇಡಿ ಪರದೆಯನ್ನು ಹಾಕಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.
ಪ್ರವಾಸೋದ್ಯಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಾಹಿತ್ಯ, ಕಾಫಿ-ಟೇಬಲ್ ಪುಸ್ತಕಗಳು ಮತ್ತು ಕರಪತ್ರಗಳು ಹಬೀಬ್‌ಗಂಜ್ ನಿಲ್ದಾಣದಲ್ಲಿ ಇಳಿಯುವ ಪ್ರಯಾಣಿಕರಿಗೆ ಸುಲಭವಾಗಿ ಸಿಗಲಿದೆ.
ಭೋಪಾಲ್‌ನ ಪುನರಾಭಿವೃದ್ಧಿಗೊಂಡಿರುವ ರಾಣಿ ಕಮಲಾಪತಿ ರೈಲು ನಿಲ್ದಾಣದಲ್ಲಿ ನಮ್ಮ ನಾಗರಿಕರಿಗೆ ಸರಿಯಾದ ಸೌಲಭ್ಯಗಳನ್ನು ಖಾತ್ರಿಪಡಿಸುವುದು ಮತ್ತು ಪ್ರಮುಖ ರೈಲ್ವೆ ವಲಯವನ್ನು ಪರಿವರ್ತಿಸುವುದು ನಮ್ಮ ಪ್ರಯತ್ನವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ, ರೈಲು ನಿಲ್ದಾಣ ಉದ್ಘಾಟನೆ ವೇಳೆ ಮಧ್ಯಪ್ರದೇಶ ಸಿಎಂ ಶಿವರಾಜ್‌ಸಿಂಗ್ ಚೌವ್ಹಾಣ್ ಇದ್ದರು.

ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದ ಹಬೀಬ್‌ಗಂಜ್ ರಿಡೆವಲಪ್‌ಮೆಂಟ್‌ನ ಯೋಜನಾ ನಿರ್ದೇಶಕ ಅಬು ಆಸಿಫ್, "ಇದನ್ನು ಮಾದರಿ ನಿಲ್ದಾಣವಾಗಿ ಮರು ಅಭಿವೃದ್ಧಿಗೊಳಿಸಲಾಗಿದೆ. ಇದು ಭಾರತೀಯ ರೈಲ್ವೆಯ ಪ್ರಾಯೋಗಿಕ ಯೋಜನೆಯಾಗಿದೆ. ಯೋಜನೆಯು ಎರಡು ಭಾಗಗಳನ್ನು ಹೊಂದಿದೆ. ಒಂದು ರೈಲು ನಿಲ್ದಾಣದ ಭಾಗ ಮತ್ತು ಇನ್ನೊಂದು ವಾಣಿಜ್ಯವಾಗಿದೆ. ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನಿಂದ ನಿಲ್ದಾಣದ ಇಪ್ಪತ್ನಾಲ್ಕು ಗಂಟೆಗಳ ಮೇಲ್ವಿಚಾರಣೆಯನ್ನು ಮಾಡಲಾಗುವುದು,'' ಎಂದು ಹೇಳಿದ್ದಾರೆ.
"ಪ್ರಯಾಣಿಕರ ಮೂಲಭೂತ ಸೌಕರ್ಯಗಳನ್ನು ಸುಧಾರಿಸಲು ಮತ್ತು ವರ್ಧಿತ ಅನುಭವವನ್ನು ನೀಡಲು ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ವಿವಿಧ ಪ್ಲಾಟ್‌ಫಾರ್ಮ್‌ಗಳಿಗೆ ಹೋಗಲು ಮುಕ್ತ ಸಂಗಮವಿದೆ. ನಿಲ್ದಾಣದಲ್ಲಿ ಆಹಾರ ವಲಯ, ಮಕ್ಕಳ ವಲಯ, ಮನರಂಜನಾ ವಲಯ ಮತ್ತು ವ್ಯಾಪಾರ ವಲಯಗಳಿವೆ,'' ಎಂದು ಅಬು ಆಸಿಫ್ ಹೇಳಿದರು.












Click it and Unblock the Notifications