ಬಣ ರಾಜಕೀಯ, ಗುಂಪುಗಾರಿಕೆ, ಸೊರಗಿದ ನಾಯಕತ್ವಕ್ಕೆ ಕಾಂಗ್ರೆಸ್ ತತ್ತರ
ಬಣ ರಾಜಕೀಯ, ಸೊರಗಿದ ನಾಯಕತ್ವದಿಂದಾಗಿ ಮಧ್ಯಪ್ರದೇಶದ ಕಮಲ್ ನಾಥ್ ಸರಕಾರ ಬಹುತೇಕ ಪತನದ ಹಂತಕ್ಕೆ ಬಂದು ನಿಂತಿದೆ. ರಾಜ್ಯದ ಪ್ರಭಾವೀ ಮುಖಂಡ, ಜ್ಯೋತಿರಾದಿತ್ಯ ಸಿಂಧಿಯಾ, ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಸಿಂಧಿಯಾ ಬೆನ್ನಿಗೆ ಹತ್ತೊಂಬತ್ತು (ಇದುವರೆಗೆ) ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುವ ಮೂಲಕ, ಮತ್ತೆ ಮಧ್ಯಪ್ರದೇಶದಲ್ಲಿ ಮಾಮಾಜೀ (ಶಿವರಾಜ್ ಸಿಂಗ್ ಚೌಹಾಣ್) ಸರಕಾರ ಅಧಿಕಾರಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ.
ದೇಶದ ಹಿಂದಿ ಬೆಲ್ಟಿನ ಪ್ರಮುಖ ರಾಜ್ಯವಾಗಿರುವ ಮಧ್ಯಪ್ರದೇಶದಲ್ಲಿ ಮೂರು ಬಣಗಳು ಇರುವುದು ಗೌಪ್ಯವಾಗಿಯೇನೂ ಉಳಿದಿರಲಿಲ್ಲ. ಸಿಎಂ ಕಮಲ್ ನಾಥ್, ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ.. ಹೀಗೆ ಮೂರು ಬಣಗಳಿವೆ.
ಮಧ್ಯಪ್ರದೇಶದ ರಾಜಕೀಯವನ್ನು ಅರ್ಥ ಮಾಡಿಕೊಂಡವರಿಗೆ, ಕಮಲ್ ನಾಥ್ ಐದು ವರ್ಷ ಅಧಿಕಾರದಲ್ಲಿ ಇರುವುದು ಕಷ್ಟ ಎನ್ನುವುದು ಗೊತ್ತಿದ್ದ ವಿಚಾರ. ಅದರಂತೆಯೇ, ಭೋಪಾಲ್ ನಲ್ಲಿ ಬೆಳವಣಿಗೆಗಳು ನಡೆಯುತ್ತಿದೆ. ಟ್ರೈನ್ ಹೋದ ಮೇಲೆ ಟಿಕೆಟ್ ತೆಗೆದುಕೊಂಡ ಕಾಂಗ್ರೆಸ್..

ಸಿಂಧಿಯಾ ರಾಜೀನಾಮೆ, ಕಾಂಗ್ರೆಸ್ಸಿನಿಂದ ಉಚ್ಚಾಟನೆ
ಹಾಸ್ಯಾಸ್ಪದ ಎನ್ನುವಂತೆ, ಜ್ಯೋತಿರಾದಿತ್ಯ ಸಿಂಧಿಯಾ ರಾಜೀನಾಮೆ ನೀಡಿದ ನಂತರ, ಕಾಂಗ್ರೆಸ್, ಅವರನ್ನು ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿದೆ. ಸೋಮವಾರ (ಮಾ 9) ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ, ಸಿಂಧಿಯಾ ಬರೆದಿದ್ದ ರಾಜೀನಾಮೆ ಪತ್ರ ಎಲ್ಲಡೆ ವೈರಲ್ ಆಗಿದೆ. ಮಂಗಳವಾರ, ಕಾಂಗ್ರೆಸ್ ಅವರನ್ನು ಉಚ್ಚಾಟಿಸಿದ ಮಾಹಿತಿ ಹೊರಬಿದ್ದಿದೆ.

ಪ್ರಿಯಾಂಕ ಗಾಂಧಿ, ಸಿಂಧಿಯಾ ಬಳಿ ಮಾತುಕತೆ ನಡೆಸಿದ ನಂತರ ತಣ್ಣಗಾಗಿದ್ದರು.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರಳ ಬಹುಮತ ಪಡೆದು ಸರಕಾರ ರಚನೆಗೆ ರಾಜ್ಯಪಾಲರಿಂದ ಆಹ್ವಾನ ಬರುವ ಮುನ್ನವೇ, ಮುಖ್ಯಮಂತ್ರಿ ಯಾರಾಗ ಬೇಕು ಎನ್ನುವ ವಿಚಾರದಲ್ಲಿ ಸಿಂಧಿಯಾ ಮತ್ತು ಕಮಲ್ ನಾಥ್ ನಡುವಿನ ಭಿನ್ನಮತ ಬಟಾಬಯಲಾಗಿತ್ತು. ರಾಹುಲ್, ಸೋನಿಯಾ ಮತ್ತು ಪ್ರಿಯಾಂಕ ಗಾಂಧಿ, ಸಿಂಧಿಯಾ ಬಳಿ ಸಾಲುಸಾಲು ಮಾತುಕತೆ ನಡೆಸಿದ ನಂತರ, ಸಿಂಧಿಯಾ ತಣ್ಣಗಾಗಿದ್ದರು.

ಸಿಂಧಿಯಾ, ಬಹಿರಂಗವಾಗಿಯೇ ಕಮಲ್ ನಾಥ್ ವಿರುದ್ದ ಆಕ್ರೋಶ ಹೊರಹಾಕಿದ್ದರು
ಕೆಲವು ದಿನಗಳ ಹಿಂದೆ ಸಿಂಧಿಯಾ, ಬಹಿರಂಗವಾಗಿಯೇ ಕಮಲ್ ನಾಥ್ ಸರಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದರು. ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಈಡೇರಿಸಬೇಕೆಂದು ಸಿಎಂ ಕಮಲ್ ನಾಥ್ ಗೆ ಒತ್ತಡ ಹಾಕಿದ್ದರು. ಆದರೆ, ಇದನ್ನು ಸೀರಿಯಸ್ ಆಗಿ ತೆಗೆದುಕೊಳ್ಳದ ಸಿಎಂ, ತಮ್ಮದೇ ದಾಟಿಯಲ್ಲಿ ಸಿಂಧಿಯಾಗೆ ತಿರುಗೇಟು ನೀಡಿದ್ದರು. ಇದು ಇವರಿಬ್ಬರ ನಡುವಿನ ಅಂತರ ಕಂದಕವಾಗಲು ಕಾರಣವಾಗಿತ್ತು.

ಸಿಂಧಿಯಾ ಮೂಲಕ ಅಮಿತ್ ಶಾ ಹೂಡಿದ ದಾಳಕ್ಕೆ ಕಮಲ್ ನಾಥ್ ಕಥೆ ಬಹುತೇಕ ಕೌಂಟ್ ಡೌನ್
ಟ್ರೈನ್ ಹೋದ ಮೇಲೆ ಟಿಕೆಟ್ ತೆಗೆದುಕೊಂಡರು ಎನ್ನುವ ಮಾತಿನಂತೆ, ಸಿಂಧಿಯಾ ಬಣದ ಶಾಸಕರು, ಹೋಲ್ ಸೇಲ್ ಆಗಿ ರಾಜೀನಾಮೆ ನೀಡುತ್ತಾರೆ ಎನ್ನುವ ವಿಚಾರ ಅಧಿಕೃತವಾದಾಗ, ಕಮಲ್ ನಾಥ್, ಹಾಲೀ ಸಂಪುಟದಲ್ಲಿನ ಸಚಿವರುಗಳ ರಾಜೀನಾಮೆಯನ್ನು ಪಡೆದರು. ಆ ಮೂಲಕ, ಸಿಂಧಿಯಾ ಬಣದ ಶಾಸಕರಿಗೆ ಅವಕಾಶ ನೀಡಿ, ಸರಕಾರ ಉಳಿಸಿಕೊಳ್ಳುವುದು ಕಮಲ್ ನಾಥ್ ಉದ್ದೇಶವಾಗಿತ್ತು. ಆದರೆ, ದೆಹಲಿಯಲ್ಲಿ ಕೂತು, ಸಿಂಧಿಯಾ ಮೂಲಕ ಅಮಿತ್ ಶಾ ಹೂಡಿದ ದಾಳಕ್ಕೆ ಕಮಲ್ ನಾಥ್ ಸರಕಾರ ಉರುಳಲು ಬಹುತೇಕ ಈಗ ಕೌಂಟ್ ಡೌನ್ ಆರಂಭವಾಗಿದೆ.












Click it and Unblock the Notifications