ಸೆಂಟ್ರಲ್ ಗವರ್ನಮೆಂಟ್ ಕೆಲಸಕ್ಕೆ ರಾಜೀನಾಮೆ! 'ತಪ್ಪು ಮಾಡಿದೆನಾ' ಎಂದ ಯುವತಿಯ ಪೋಸ್ಟ್ ವೈರಲ್
ಭಾರತದಲ್ಲಿ ಸರ್ಕಾರಿ ಕೆಲಸ ಎಂದರೆ ಅದೊಂದು ಪ್ರತಿಷ್ಠೆಯ ಮತ್ತು ಭದ್ರತೆಯ ಸಂಕೇತ. ಅದರಲ್ಲೂ ಕೇಂದ್ರ ಸರ್ಕಾರಿ ಉದ್ಯೋಗ ಸಿಕ್ಕರೆ ಲೈಫ್ ಸೆಟಲ್ ಎಂದೇ ಎಲ್ಲರೂ ನಂಬಿದ್ದಾರೆ. ಲಕ್ಷಾಂತರ ಯುವಕ-ಯುವತಿಯರು ಹಗಲಿರುಳು ಓದಿ, ಪರೀಕ್ಷೆ ಬರೆದು ಇಂತಹ ಕೆಲಸ ಗಿಟ್ಟಿಸಿಕೊಳ್ಳಲು ಕನಸು ಕಾಣುತ್ತಾರೆ. ಆದರೆ, ಇಷ್ಟೆಲ್ಲಾ ಕಷ್ಟಪಟ್ಟು ಪಡೆದ ಕೇಂದ್ರ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದರೆ ಹೇಗಿರುತ್ತದೆ?.
ಹೌದು ನೋಡಿ, ಹೀಗೊಂದು ದಿಟ್ಟ ನಿರ್ಧಾರ ಕೈಗೊಂಡಿರುವ ಯುವತಿಯೊಬ್ಬಳು ತನ್ನ ಮನದಾಳದಲ್ಲಿ ಸಧ್ಯ ನಡೆಯುತ್ತಿರುವ ಎಲ್ಲಾ ಗೊಂದಲಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಪ್ರಿಯಾ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಈ ಭಾವುಕ ಪೋಸ್ಟ್ ಇದೀಗ ವೈರಲ್ ಆಗಿದ್ದು, ವೃತ್ತಿಜೀವನದ ಬಗ್ಗೆ ಹೊಸ ಚರ್ಚೆ ಹುಟ್ಟುಹಾಕಿದೆ.

ಬಸ್ ಪ್ರಯಾಣದ ಉದಾಹರಣೆಯೊಂದಿಗೆ ಪ್ರಿಯಾ ಪೋಸ್ಟ್
ತನ್ನ ಪ್ರಸ್ತುತ ಪರಿಸ್ಥಿತಿಯನ್ನ ವಿವರಿಸಲು ಪ್ರಿಯಾ ಒಂದು ಸುಂದರವಾದ ಬಸ್ ಪ್ರಯಾಣದ ಉದಾಹರಣೆ ನೀಡಿದ್ದಾರೆ. "ನೀವು ಬಸ್ ಹತ್ತಿದ್ದೀರಿ, ಆದರೆ ಅರ್ಧ ದಾರಿಗೆ ಹೋದ ನಂತರ ಆ ಬಸ್ ಬೇರೆ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ನಿಮಗೆ ಅರಿವಾಗುತ್ತದೆ. ನೀವು ಆ ಬಸ್‌ನಿಂದ ಇಳಿಯಬೇಕು ಎಂದುಕೊಳ್ಳುತ್ತೀರಿ. ಆದರೆ, ನೀವು ಅದಾಗಲೇ ದುಡ್ಡು ಕೊಟ್ಟು ಟಿಕೆಟ್ ಪಡೆದುಕೊಂಡಿದ್ದೀರಿ. ಜೊತೆಗಿರುವ ಇತರ ಎಲ್ಲಾ ಪ್ರಯಾಣಿಕರು ಅದೇ ಬಸ್‌ನಲ್ಲಿ ಕುಳಿತಿದ್ದಾರೆ. ನೀವು ಬಸ್‌ನಿಂದ ಇಳಿದರೆ ಅದು ತಪ್ಪು ಎಂದು ಅವರು ಭಾವಿಸುತ್ತಾರೆ. ನಿಮಗೆ ಮುಂದೆ ಎಲ್ಲಿಗೆ ಹೋಗಬೇಕು ಎಂಬುದು ತಿಳಿದಿಲ್ಲ. ನನ್ನ ಈಗೀನ ಪರಿಸ್ಥಿತಿ ಕೂಡ ಸೇಮ್ ಇದೇ ರೀತಿಯಲ್ಲಿದೆ" ಎಂದು ಪ್ರಿಯಾ ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಸರ್ಕಾರಿ ಕೆಲಸಕ್ಕೆ ರಾಜೀನಾಮೆ
ಪ್ರಿಯಾ ಅವರಿಗೆ ತಮ್ಮ ಕೆಲಸ ಪ್ರತಿ ತಿಂಗಳು ಸರಿಯಾಗಿ ಸಂಬಳವನ್ನ ನೀಡುತ್ತಿತ್ತು. ಅವರ ಬದುಕು ಯಾವುದೇ ಆರ್ಥಿಕ ಅಡೆತಡೆಗಳಿಲ್ಲದೆ ಸುಗಮವಾಗಿ ಸಾಗುತ್ತಿತ್ತು. ಇತರರ ದೃಷ್ಟಿಯಲ್ಲಿ ಅವರೊಬ್ಬರು ಬಹಳ ಅದೃಷ್ಟವಂತೆ. ಆದರೆ, ಇದೇ ಕೆಲಸವನ್ನ ಮುಂದಿನ 5 ಅಥವಾ 10 ವರ್ಷಗಳ ಕಾಲ ಮಾಡುವುದನ್ನ ಪ್ರಿಯಾ ಅವರಿಂದ ಊಹಿಸಿಕೊಳ್ಳಲು ಕೂಡ ಸಾಧ್ಯವಾಗಲಿಲ್ಲ.
"ಈಗ, ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ನನ್ನ ಜೀವನದ ಅತಿ ದೊಡ್ಡ ತಪ್ಪು ಮಾಡಿದ್ದೇನೆಯೇ ಎಂಬ ಭೀತಿ ನನ್ನನ್ನ ಕಾಡುತ್ತಿದೆ. ನಾನು ಅಜಾಗರೂಕತೆಯಿಂದ ವರ್ತಿಸುತ್ತಿದ್ದೇನೆಯೇ ಎಂದು ಕೆಲವೊಮ್ಮೆ ಅನಿಸುತ್ತದೆ. ಮುಂದೆ ನನ್ನ ದಾರಿ ಏನು ಎಂಬುದು ನನಗೇ ತಿಳಿದಿಲ್ಲ" ಎಂದು ಅವರು ತಮ್ಮ ವೃತ್ತಿಜೀವನದ ಗೊಂದಲವನ್ನ ಬಿಚ್ಚಿಟ್ಟಿದ್ದಾರೆ.
I put in my papers to resign from a Central Government job.And I’m still not sure if I’ve made the biggest mistake of my life.What if the hardest decision of your life is leaving something everyone else thinks you’re lucky to have?Imagine getting on a bus and realising halfway through that it’s going in the wrong direction.You want to get off. But you’ve paid for the ticket. Everyone else is staying. They think you’re making a mistake. And you have no idea where to go instead.That’s exactly where I am right now.My job gave me a salary every month. Certainty. A predictable life.But I couldn’t imagine doing it for another 5 or 10 years.Now I’m terrified. I don’t know what comes next. Some days, I wonder if I’m being reckless.I haven’t even told my parents, who are in their late 60s. Not because I’ll depend on them financially, or because they depend on me. But because the thought of causing them worry and pain makes this decision even harder.Staying feels just as painful as leaving.How long do you keep going in the wrong direction just because you’re afraid of having nowhere else to go?
— Priya (@PriyaCeladine) October 17, 2026
ಪೋಷಕರಿಗೆ ತಿಳಿಸದ ವಿಚಾರ
ತಮ್ಮ ಈ ನಿರ್ಧಾರವನ್ನು ಪ್ರಿಯಾ ಇನ್ನೂ ತಮ್ಮ ಪೋಷಕರಿಗೆ ತಿಳಿಸಿಲ್ಲ. ಅವರ ಪೋಷಕರಿಗೆ ಈಗ 60ರ ಆಸುಪಾಸಿನ ವಯಸ್ಸು. "ನಾನು ಆರ್ಥಿಕವಾಗಿ ನನ್ನ ಪೋಷಕರ ಮೇಲೆ ಅವಲಂಬಿತಳಾಗುತ್ತೇನೆ ಅಥವಾ ಅವರು ನನ್ನ ಮೇಲೆ ಅವಲಂಬಿತರಾಗಿದ್ದಾರೆ ಎಂಬ ಕಾರಣಕ್ಕೆ ನಾನು ಈ ವಿಚಾರವನ್ನ ಬಚ್ಚಿಟ್ಟಿಲ್ಲ. ಬದಲಾಗಿ, ನನ್ನ ಈ ನಿರ್ಧಾರ ಅವರಿಗೆ ನೋವು ಮತ್ತು ಆತಂಕವನ್ನ ಉಂಟುಮಾಡಬಹುದು ಎಂಬ ಭಯವೇ ನಾನು ಸುಮ್ಮನಿರುವಂತೆ ಮಾಡಿದೆ. ಈ ಭದ್ರತೆಯ ಕೆಲಸದಲ್ಲಿ ಮುಂದುವರಿಯುವುದು ಎಷ್ಟು ನೋವಿನ ಸಂಗತಿಯೋ, ಅದನ್ನು ಬಿಟ್ಟು ಹೊರಬಂದಿರುವುದು ಕೂಡ ಅಷ್ಟೇ ನೋವು ತರುತ್ತಿದೆ" ಎಂದು ಅವರು ವಿವರಿಸಿದ್ದಾರೆ.
ಕೊನೆಯಲ್ಲಿ ಅವರು ಕೇಳಿರುವ, "ನಿಮಗೆ ಬೇರೆ ದಾರಿಯಿಲ್ಲ ಎಂಬ ಭಯದಿಂದಾಗಿ, ತಪ್ಪು ದಿಕ್ಕಿನಲ್ಲಿ ನೀವು ಇನ್ನೆಷ್ಟು ಕಾಲ ಪ್ರಯಾಣಿಸುತ್ತೀರಿ?" ಎಂಬ ಪ್ರಶ್ನೆ, ವೃತ್ತಿಜೀವನದಲ್ಲಿ ಅತೃಪ್ತಿ ಅನುಭವಿಸುತ್ತಿರುವ ಸಾವಿರಾರು ಯುವಜನರ ಮನಸ್ಸನ್ನ ತಟ್ಟಿದೆ.
ಪ್ರಿಯಾ ಅವರ ಈ ಪೋಸ್ಟ್‌ಗೆ ಹಲವರು ಬೆಂಬಲ ಸೂಚಿಸಿದ್ದು, ಮಾನಸಿಕ ನೆಮ್ಮದಿಗಿಂತ ಮಿಗಿಲಾದುದು ಯಾವುದೂ ಇಲ್ಲ ಎಂದು ಕಮೆಂಟ್ ಮಾಡಿದ್ದಾರೆ.


Click it and Unblock the Notifications
