Whitefield- KR Puram Metro: ವೈಟ್‌ಫೀಲ್ಡ್‌ನಲ್ಲಿ ಗಗನಕ್ಕೇರಲಿದೆ ಆಸ್ತಿ ಮೌಲ್ಯ- ಅಂಕಿಅಂಶ, ಮಾಹಿತಿ, ವರದಿ
ಬೆಂಗಳೂರು, ಮಾರ್ಚ್ 27: ವೈಟ್‌ಫೀಲ್ಡ್ ( Whitefield ) ಮತ್ತು ಕೃಷ್ಣರಾಜಪುರ ( KR Puram ) ನಡುವಿನ ಬಹು ನಿರೀಕ್ಷಿತ 13.71 ಕಿಮೀ ಮೆಟ್ರೋ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ( Narendra Modi ) ಶನಿವಾರ ಉದ್ಘಾಟಿಸಿದರು. BMRCL ಅಧಿಕಾರಿಗಳ ಪ್ರಕಾರ, 12 ಎತ್ತರದ ನಿಲ್ದಾಣಗಳನ್ನು ಒಳಗೊಂಡಿರುವ 13.71 ಕಿಮೀ ಮೆಟ್ರೋ ಮಾರ್ಗದಲ್ಲಿ ಐದು ರೈಲುಗಳನ್ನು ಸೇವೆಗೆ ನಿಯೋಜಿಸಲಾಗಿದೆ.
ಈ ವಿಸ್ತರಣೆಯು ಲಕ್ಷಗಟ್ಟಲೆ ಪ್ರಯಾಣಿಕರನ್ನು ಐಟಿ ಪಾರ್ಕ್‌ಗಳು, ಫಾರ್ಚೂನ್ ಕಂಪನಿಗಳು, ಆಸ್ಪತ್ರೆಗಳು ಮತ್ತು ಶಾಪಿಂಗ್ ಮಾಲ್‌ಗಳು ಸೇರಿದಂತೆ ಇತರ ಪ್ರಮುಖ ಪ್ರದೇಶಗಳಿಗೆ ಸಂಪರ್ಕಿಸುತ್ತದೆ.

ಕೃಷ್ಣರಾಜಪುರದಿಂದ ವೈಟ್‌ಫೀಲ್ಡ್ ಮಾರ್ಗವನ್ನು ಸಂಪರ್ಕಿಸುವ ಐಟಿ ಸ್ಟ್ರೆಚ್ ಟ್ರಾಫಿಕ್‌ಗೆ ಕುಖ್ಯಾತವಾಗಿದೆ. ರಸ್ತೆಯ ಮೂಲಕ ಈ ಮಾರ್ಗವನ್ನು ಕ್ರಮಿಸಲು ಸಾಮಾನ್ಯವಾಗಿ ಸುಮಾರು ಒಂದು ಗಂಟೆ ತೆಗೆದುಕೊಳ್ಳುತ್ತದೆ. ಹೊಸದಾಗಿ ಪ್ರಾರಂಭಿಸಲಾದ ಮೆಟ್ರೋ ಮಾರ್ಗದಲ್ಲಿ ಪ್ರಯಾಣದ ಸಮಯವು 22ರಿಂದ 24 ನಿಮಿಷಗಳ ನಡುವೆ ಇರಲಿದೆ. ರೈಲು ಕಾರ್ಯಾಚರಣೆಗಳು ಭಾನುವಾರದಿಂದ ಪ್ರಾರಂಭವಾಗಿದೆ.
ಕೃಷ್ಣರಾಜಪುರ, ಸಿಂಗಯ್ಯನಪಾಳ್ಯ, ಗರುಡಾಚಾರ್ಯಪಾಳ್ಯ, ಹೂಡಿ, ಸೀತಾರಾಮ ಪಾಳ್ಯ, ಕುಂದನಹಳ್ಳಿ, ನಲ್ಲೂರು ಹಳ್ಳಿ, ಶ್ರೀ ಸತ್ಯಸಾಯಿ ಆಸ್ಪತ್ರೆ, ಪಟ್ಟಂದೂರು ಅಗ್ರಹಾರ, ಕಾಡುಗೋಡಿ ಟ್ರೀ ಪಾರ್ಕ್, ಹೋಪ್ ಫಾರ್ಮ್ ಚನ್ನಸಂದ್ರ ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ಈ 12 ನಿಲ್ದಾಣಗಳಾಗಿವೆ. ಈ ಮಾರ್ಗದಲ್ಲಿ ರೈಲುಗಳು 12 ನಿಮಿಷಗಳ ಆವರ್ತನದಲ್ಲಿ ಚಲಿಸುವ ನಿರೀಕ್ಷೆಯಿದೆ.
ಈ ಮೆಟ್ರೋ ಮಾರ್ಗವು ನಗರದ ಹೃದಯ ಭಾಗಕ್ಕೆ ಸಂಪರ್ಕ ಕಲ್ಪಿಸಲಿದೆ. ಈ ಹಿನ್ನೆಲೆಯಲ್ಲಿ ವೈಟ್‌ಫೀಲ್ಡ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ದುಬಾರಿಯಾಗುವ ಸಾಧ್ಯತೆಯಿದೆ ಎಂದು ಉದ್ಯಮ ತಜ್ಞರು ಹೇಳಿದ್ದಾರೆ. ಮೆಟ್ರೋ ರೈಲು ಸಂಚಾರ ಆರಂಭವಾದ ಮೊದಲ ಮೂರು ತಿಂಗಳಲ್ಲಿ ಬೆಲೆಗಳು ಶೇಕಡಾ 10 ರಷ್ಟು ಹೆಚ್ಚಾಗಬಹುದು.

ಈ ವಿಚಾರವಾಗಿ 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್'ಗೆ ಮಾತನಾಡಿರುವ ಕ್ರೆಡೈ ಬೆಂಗಳೂರು ಅಧ್ಯಕ್ಷ ಸುರೇಶ್ ಹರಿ, 'ಮೆಟ್ರೋ ಮಾರ್ಗವು ಬರುವುದರಿಂದ ಅಗಾಧ ಪರಿಣಾಮ ಬೀರಲಿದೆ. ವೈಟ್‌ಫೀಲ್ಡ್ ಕಾಡುಗೋಡಿ- ಕೆಆರ್ ಪುರ ಲೈನ್ ಆರಂಭವಾದ ಮೊದಲ ಮೂರು ತಿಂಗಳಲ್ಲಿ ರಿಯಲ್ ಎಸ್ಟೇಟ್ ಬೆಲೆಯಲ್ಲಿ ಕನಿಷ್ಠ ಶೇ.10 ರಷ್ಟು ಜಿಗಿತವನ್ನು ಕಾಣಬಹುದಾಗಿದೆ' ಎಂದು ಅವರು ಹೇಳಿದ್ದಾರೆ.
'ಇದರಿಂದಾಗಿ ರಿಯಲ್ ಎಸ್ಟೇಟ್ ಬೆಲೆಗಳಲ್ಲಿ ಒಂದು ನಿರ್ದಿಷ್ಟ ಏರಿಕೆ ಇರುತ್ತದೆ' ಎಂದು ಅವರು ತಿಳಿಸಿದ್ದಾರೆ.
ಅಸೆಟ್ಜ್ ಪ್ರಾಪರ್ಟಿ ಗ್ರೂಪ್‌ನ ಸಿಎಫ್‌ಒ ಸಚಿನ್ ವೋರಾ ಮೆಟ್ರೋ ಲೈನ್ ಅನ್ನು 'ಗೇಮ್ ಚೇಂಜರ್' ಎಂದು ಕರೆದಿದ್ದಾರೆ. 'ರಿಂಗ್ ರೋಡ್ ಅಥವಾ ಮೆಟ್ರೋ ಮಾರ್ಗದಂತಹ ಯಾವುದೇ ಮೂಲಸೌಕರ್ಯ ಯೋಜನೆಯು ಪ್ರದೇಶವನ್ನು ಸಂಪೂರ್ಣವಾಗಿ ಪರಿವರ್ತಿಸುತ್ತದೆ. ಸಮಯವನ್ನು ನಿಖರವಾಗಿ ನಿರ್ವಹಿಸುವುದರಿಂದ ಪ್ರಯಾಣಿಕರು ಯಾವುದೇ ರಸ್ತೆ ಯೋಜನೆಗಿಂತ ಮೆಟ್ರೋವನ್ನು ಬಯಸುತ್ತಾರೆ' ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

'ವಿಮಾನ ನಿಲ್ದಾಣಕ್ಕೆ ಮೆಟ್ರೋ ಮಾರ್ಗದ ಸಾಧ್ಯತೆಯು ಬೆಂಗಳೂರನ್ನು ದೊಡ್ಡ ರಿಯಲ್ ಎಸ್ಟೇಟ್ ಮಾರುಕಟ್ಟೆಯಾಗಿ ಪರಿವರ್ತಿಸಲಿದೆ' ಎಂದು ಅವರು ಹೇಳಿದ್ದಾರೆ.
ಮೆಟ್ರೊ ಮಾರ್ಗ ಕಾರ್ಯಾರಂಭಗೊಂಡ ನಂತರ ವೈಟ್‌ಫಿಲ್ಡ್ ಪ್ರದೇಶದಲ್ಲಿ ಆಸ್ತಿ ಮೌಲ್ಯ ಗಗನಕ್ಕೇರುತ್ತದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೈಟ್‌ಪಿಲ್ಡ್ - ಕೆಆರ್ ಪುರಂ ಮೆಟ್ರೋ ಮಾರ್ಗದ ವಿಚಾರವಾಗಿ ಅಭಿಪ್ರಾಯ ಹಂಚಿಕೊಂಡಿರುವ ವೋರಾ ಗ್ರೂಪ್ ಆಫ್ ಕಂಪನಿಸ್, 'ಈ ಮಾರ್ಗದಲ್ಲಿ ಮೆಟ್ರೋ ರೈಲು ಯೋಜನೆ ಕಾಮಗಾರಿ ಆರಂಭವಾದಾಗಲೇ ನಾವು ಎರಡು ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳನ್ನು ಹಮ್ಮಿಕೊಂಡೆವು. ಒಂದರಲ್ಲಿ ಈಗಾಗಲೇ ಶೇ 90ರಷ್ಟು ಪ್ರಾಪರ್ಟಿಗಳನ್ನು ಮಾರಾಟ ಮಾಡಲಾಗಿದೆ. ಈಗ ಪಾಪರ್ಟಿಗಳ ಮೌಲ್ಯವನ್ನು ಶೇ 10ರಷ್ಟು ಹೆಚ್ಚಿಸಲಾಗಿದೆ' ಎಂದು ತಿಳಿಸಿದೆ.












Click it and Unblock the Notifications