Privatization: ಸರ್ಕಾರಿ ಒಡೆತನಕ್ಕೆ ಮರಳುವುದೇ 'ಮೈಸೂರು ಲ್ಯಾಂಪ್ಸ್ ಕಂಪನಿ'?: ಅಪ್ಡೇಟ್
ಬೆಂಗಳೂರು, ಫೆಬ್ರವರಿ 13: ಸರ್ಕಾರಿ ಸ್ವಾಮ್ಯದ ಮೈಸೂರು ಲ್ಯಾಂಪ್ಸ್ ಕಂಪನಿಯಲ್ಲಿ ಶೇಕಡಾ 5.6ರಷ್ಟು ಷೇರುಗಳು ಖಾಸಗಿಯವರ ಒಡೆತನದಲ್ಲಿವೆ. ಖಾಸಗಿಯವರ ಒಡೆತನದಲ್ಲಿರುವ ಈ ಕಂಪನಿಯನ್ನು ಮರಳಿ ಸರ್ಕಾರಿ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರ ಮಹತ್ವ ನಿರ್ಧಾರ ಕೈಗೊಂಡಿದೆ.
ಮೈಸೂರು ಲ್ಯಾಂಪ್ಸ್ ಕಂಪನಿಯಲ್ಲಿ ಶೇಕಡಾ 5.6ರಷ್ಟು ಷೇರುಗಳು ಖಾಸಗಿಯವರ ಒಡೆತನದಲ್ಲಿವೆ. ಈ ಎಲ್ಲ ಖಾಸಗಿ ಷೇರುಗಳನ್ನು ಸರ್ಕಾರವೇ ಖರೀದಿ ಮಾಡಿ ಸಂಸ್ಥೆಯನ್ನು ಶೇಕಡಾ 100ರಷ್ಟು ಸರ್ಕಾರಿ ಸಂಸ್ಥೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಮಹತ್ವದ ನಿರ್ಧಾರ ತಿಳಿಸಿದ್ದಾರೆ.

ಸರ್ಕಾರಿ ಆಸ್ತಿ ಖಾಸಗಿ ಪಾಲಾಗಲು ಬಿಡಲ್ಲ
ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ಎಸ್.ಎಲ್.ಬೋಜೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಮೈಸೂರು ಲ್ಯಾಂಪ್ಸ್ ಕಂಪನಿಗೆ ಸಂಬಂಧಿಸಿದಂತೆ ಸರ್ಕಾರ ಹೆಚ್ಚು ಜಾಗರೂಕತೆಯ ಹೆಜ್ಜೆಗಳನ್ನು ಇಡುತ್ತಿದೆ. ಅದರ ಆಸ್ತಿ ಯಾವುದೇ ಖಾಸಗಿ ವ್ಯಕ್ತಿ/ಸಂಸ್ಥೆಗಳ ಪಾಲಾಗಲು ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಈ ಕಂಪನಿಯಲ್ಲಿ ಸರ್ಕಾರದ ಷೇರು ಪ್ರಮಾಣ ಶೇಕಡಾ 91.07ರಷ್ಟು ಇದೆ. ಸರ್ಕಾರಿ ಸ್ವಾಮ್ಯದ ಎನ್‌ಜಿಇಎಫ್ ಸಂಸ್ಥೆ ಶೇಕಡಾ 3.33ರಷ್ಟು ಷೇರು ಬಂಡವಾಳ ಹೊಂದಿದೆ. ಉಳಿದ ಶೇಕಡಾ 5.6ರಷ್ಟು ಷೇರು ಬಂಡವಾಳ ಸಾರ್ವಜನಿಕರದ್ದಾಗಿದೆ ಎಂದು ಅವರು ವಿವರಿಸಿದರು.

ಕಂಪನಿ ಬಗ್ಗೆ ವಿವರಿಸಿದ ಸಚಿವರು
ಮೈಸೂರು ಲ್ಯಾಂಪ್ಸ್ ಮತ್ತು ಎನ್‌ಜಿಇಎಫ್ ಸಂಸ್ಥೆಗೆ ಸೇರಿದ ಜಾಗಗಳಲ್ಲಿ ಸಾರ್ವಜನಿಕ ಉದ್ದೇಶದ ವಿನೂತನ ಯೋಜನೆಗಳನ್ನು ಅನುಷ್ಠಾನಗೊಳಿಸಲು 2021ರಲ್ಲಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಲಾಗಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಇದರ ಅಧ್ಯಕ್ಷರಾಗಿದ್ದಾರೆ. ಇವರಲ್ಲದೆ, ಸರ್ಕಾರದ ಕಡೆಯಿಂದ ಏಳು ಮತ್ತು ನಾಗರಿಕರ ವಲಯದಿಂದ ಐದು ಟ್ರಸ್ಟಿಗಳನ್ನು ನೇಮಿಸಲು ಅವಕಾಶ ಇದೆ.
ಇದುವರೆಗೂ ಈ ಟ್ರಸ್ಟ್ ಗೆ ಯಾವುದೇ ಚಟುವಟಿಕೆಗಳನ್ನು ಸರ್ಕಾರದ ಕಡೆಯಿಂದ ವಹಿಸಿರುವುದಿಲ್ಲ ಎಂದು ಅವರು ವಿವರಿಸಿದರು. ಮೊದಲ ಆದ್ಯತೆ ಕಂಪನಿಯನ್ನು ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಸಂಸ್ಥೆಯನ್ನಾಗಿ ಮಾಡುವುದು. ಅದರ ನಂತರವೇ ಅದರ ಅಸ್ತಿಗಳನ್ನು ಸಾರ್ವಜನಿಕ ಉದ್ದೇಶಗಳಿಗೆ ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ತೀರ್ಮಾನ ಮಾಡಲಾಗುವುದು. ಒಟ್ಟಿನಲ್ಲಿ ಖಾಸಗಿಯವರಿಗಂತೂ ಕೊಡುವುದಿಲ್ಲ ಎಂದು ಸಚಿವರು ಹೇಳಿದರು.












Click it and Unblock the Notifications