ಸಿಎಂ ಸಿದ್ದರಾಮಯ್ಯ ದೇವಾಲಯ ಭೇಟಿಗೆ ವಿಪಕ್ಷ ನಾಯಕ ಹೇಳಿದ್ದೇನು?
ಬೆಂಗಳೂರು, ಜನವರಿ 23: ತೋರಿಕೆಗೊ, ಜನಮೆಚ್ಚುಗೆಗೊ ಅಥವಾ ಸಮಾಜದ ಅಂಜಿಕೆಗೋ, ಒಟ್ಟಿನಲ್ಲಿ ನಿನ್ನೆ ತಾವೂ ಒಂದು ದೇವಸ್ಥಾನಕ್ಕೆ ಹೋಗಿದ್ದೀರಿ. ಇದು ಸಂತೋಷದ ವಿಷಯ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ ಅಂತೂ ಇಂತೂ ತಮ್ಮ ಬಾಯಲ್ಲೂ ರಾಮ ನಾಮ ಹೊರಡುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಅವರು ವ್ಯಂಗ್ಯವಾಡಿದರು.
ಅಯೋಧ್ಯೆ ಶ್ರೀರಾಮೋತ್ಸವ ದಿನದಂದು (ಜ.22) ಸಿದ್ದರಾಮಯ್ಯ ಅವರು ಬಿದರಹಳ್ಳಿ ಹೋಬಳಿಯ, ಹಿರಂಡಹಳ್ಳಿ ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಿಸಿರುವ ಸಕುಟುಂಬ ಸಮೇತನಾಗಿರುವ ರಾಮ ಸೀತ ಲಕ್ಷ್ಮಣ ದೇವಾಲಯ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮ ಉದ್ಘಾಟಿಸಿದ್ದರು. ಜೈ ಶ್ರೀರಾಮ್ ನಿಮಗೆ ಒಳಿತು ಮಾಡಲಿ ಎಂದು ಹೇಲಿದ್ದರು. ಈ ಕುರಿತು ಮಂಗಳವಾರ ಟ್ವೀಟ್ ಮಾಡಿ ಆರ್. ಅಶೋಕ್ ಕಾಲೆಳೆದಿದ್ದಾರೆ.

ಇದರಲ್ಲೂ ಒಡೆದು ಆಳುವ ನೀತಿ ಬೇಡ
ಸಿದ್ದರಾಮಯ್ಯನವರೇ ನಿಮ್ಮ ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿಯನ್ನು ರಾಮನ ವಿಷಯದಲ್ಲೂ ವಿಸ್ತರಿಸುವ ಪಾಪದ ಕಟ್ಟಿಕೊಳ್ಳಬೇಡಿ. ನೀವು ಮಹಾತ್ಮ ಗಾಂಧಿಯವರು ಹೇಳಿದ ರಾಮನ ಭಕ್ತರು ಅಂತ ಹೇಳಿದ್ದೀರಿ. ಮಹಾತ್ಮ ಗಾಂಧಿಯವರು ಗೋಹತ್ಯೆ ನಿಷೇಧದ ಅತ್ಯಂತ ದೊಡ್ಡ ಪ್ರತಿಪಾದಕರಾಗಿದ್ದರು.
ನೀವು ಗೋಹತ್ಯೆಯ ಪರ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷವನ್ನ ವಿಸರ್ಜನೆ ಮಾಡಿ ಅಂತ ಗಾಂಧೀಜಿ ಹೇಳಿದ್ದರು. ಆದರೆ ತಾವುಗಳು ಕಾಂಗ್ರೆಸ್ ಪಕ್ಷವನ್ನು ಒಂದು ಕುಟುಂಬದ ಜಹಗೀರು ಮಾಡಿಕೊಟ್ಟುಬಿಟ್ಟಿದ್ದೀರಿ. ಇದೇನಾ ತಮ್ಮ ಗಾಂಧೀವಾದ? ಎಂದು ಅವರು ಪ್ರಶ್ನಿಸಿದರು.
ಭರವಸೆ ನೀಡಿ ಮಾತು ತಪ್ಪಿದ್ದು ನೀವು
ಶ್ರೀರಾಮ ಸತ್ಯವಂತ. ಕೊಟ್ಟ ಮಾತಿಗೆ ಎಂದೂ ತಪ್ಪದ ವ್ಯಕ್ತಿತ್ವ ಅವರದ್ದು. ಆದರೆ ತಾವು ಮಾಡಿದ್ದೇನು? ಮಾಡುತ್ತಿರುವುದೇನು?. ತಮ್ಮ ಮೊದಲ ಅವಧಿಯಲ್ಲಿ ಜನತೆಗೆ ಕೊಟ್ಟಿದ್ದ ಭರವಸೆಗಳಲ್ಲಿ ಅರ್ಧ ಭಾಗವೂ ಈಡೇರಿಸಲಿಲ್ಲ. ಅದರ ಮೇಲೆ ನುಡಿದಂತೆ ನಡೆದ ಸರ್ಕಾರ ಎಂಬ ಮತ್ತೊಂದು ಸುಳ್ಳು. ಈಗ ಎರಡನೇ ಅವಧಿಯಲ್ಲಿ ತಾವು ಮಾಡುತ್ತಿರುವುದೇನು? ಎಲ್ಲರಿಗೂ 200 ಯೂನಿಟ್ ಕರೆಂಟ್ ಉಚಿತ ಅಂತ ಸುಳ್ಳು ಭರವಸೆ ನೀಡಿ ಕಡೆಗೆ ಸರಾಸರಿ ಎಂದು ವರಸೆ ಬದಲಿಸಿದ್ದೀರಿ ಎಂದು ಅವರು ದೂರಿದರು.

10 ಕೆಜಿ ಅಕ್ಕಿ ನೀಡುತ್ತೇನೆ ಎಂದು ಹೇಳಿ ಈಗ ಮಾತು ತಪ್ಪಿದ್ದೀರಿ. ರಾಜ್ಯದ ಎಲ್ಲಾ ನಿರುದ್ಯೋಗಿ ಪದವೀಧರರು, ಡಿಪ್ಲೋಮಾ ಪದವೀಧರರಿಗೆ ಯುವನಿಧಿ ಗ್ಯಾರೆಂಟಿ ಅಂತ ಸುಳ್ಳು ಹೇಳಿ ಈಗ ಕಂಡೀಷನ್ ಮೇಲೆ ಕಂಡೀಷನ್ ಹಾಕಿ ಕಡೆಗೆ 3,000 ಯುವಕರು ಮಾತ್ರ ಅರ್ಹರು ಎಂದು ಯುವಕರಿಗೆ ಟೋಪಿ ಹಾಕಿದ್ದೀರಿ.
ನೀವು ಹೈಕಮಾಂಡ್ ಭಕ್ತರು
ನೀವು (ಸಿದ್ದರಾಮಯ್ಯ) ಶ್ರೀರಾಮನ ಭಕ್ತರೂ ಅಲ್ಲ, ಗಾಂಧೀಜಿ ಅವರ ಅನುಯಾಯಿಗಳೂ ಅಲ್ಲ. ತಾವೇನಿದ್ದೇರೂ ಅಧಿಕಾರದ ಅನುಯಾಯಿಗಳು, ಅಧಿಕಾರ ಕೊಡುವ ಹೈಕಮಾಂಡ್ ಭಕ್ತರು ಎಂದು ಅವರು ಟೀಕಿಸಿದರು.
ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿ, ರಾಮ ಮಂದಿರದ ಆಹ್ವಾನ ತಿರಸ್ಕರಿಸಿದ ತಮ್ಮ ಪಕ್ಷಕ್ಕೆ ಶ್ರೀರಾಮನ ಬಗ್ಗೆ, ಕೊಟ್ಟ ಮಾತಿನಂತೆ ರಾಮನ ಮಂದಿರ ನಿರ್ಮಿಸಿದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ನಿಮಗೆ ಉಳಿದಿಲ್ಲ.
ಕನ್ನಡಿಗರ ರಾಮಭಕ್ತಿ, ಹಿಂದೂಗಳ ಒಗ್ಗಟ್ಟು ನೋಡಿ ತಮಗೆ ನಡುಕ ಉಂಟಾಗಿದೆ ಎಂದು ಗೊತ್ತು. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲದಿದ್ದರೆ ಪಾಪ ತಮ್ಮ ಕುರ್ಚಿಗೇ ಕಂಟಕ. ಸಿದ್ದರಾಮಯ್ಯನವರೇ ತಮ್ಮ ಪರಿಸ್ಥಿತಿಯ ಬಗ್ಗೆ ನನಗೆ ಕನಿಕರವಿದೆ. ಇನ್ನಾದರೂ ರಾಮನಿಗೆ ಶರಣಾಗಿ ಎಂದು ಅವರು ಹೇಳಿದರು.












Click it and Unblock the Notifications