Namma Metro: ಮೆಟ್ರೋ ಪ್ರಯಾಣ ದರ ಹೆಚ್ಚಳ: ಬೆಂಗಳೂರಿಗರು ಏನಂದ್ರು ?
Namma Metro: ಬೆಂಗಳೂರಿನಲ್ಲಿ ನಮ್ಮ ಮೆಟ್ರೋದ ಪ್ರಯಾಣದ ದರ ಹೆಚ್ಚಳ ಮಾಡಿರುವುದಕ್ಕೆ ಬೆಂಗಳೂರಿಗರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಸಾರಿಗೆ ಜೀವನಾಡಿಯಾಗಿ ನಮ್ಮ ಮೆಟ್ರೋ ಬೆಳೆದಿದೆ. ಆದರೆ, ಇದೀಗ ಪ್ರಯಾಣದ ದರವನ್ನು ಶೇ 47ರಷ್ಟು ಹೆಚ್ಚಳ ಮಾಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಒಂದಿಲ್ಲೊಂದು ಸೇವೆಗಳ ಬೆಲೆ ಏರಿಕೆಯಾಗುತ್ತಿದೆ. ಜನರಿಂದ ವಿರೋಧ ವ್ಯಕ್ತವಾಗುತ್ತಲ್ಲೇ ಇದೆ. ಇದೀಗ ಬಿಎಂಆರ್‌ಸಿಎಲ್ ಮೆಟ್ರೋ ಪ್ರಯಾಣ ದರವನ್ನು ಹೆಚ್ಚಳ ಮಾಡಿದೆ. ಅದೂ ಸಹ ಬರೋಬ್ಬರಿ ಶೇ 47ರಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿಯೇ ಬೆಲೆ ಏರಿಕೆಯ ಶಾಕ್ ಕೊಡಲಾಗಿದೆ. ಬೆಂಗಳೂರು ಮೆಟ್ರೋ ದರ ಕಿ.ಮೀಗೆ ಎಷ್ಟಾಗಿದೆ, ಈ ಬಗ್ಗೆ ಜನ ಏನಂತಿದ್ದಾರೆ ಎನ್ನುವ ವಿವರ ಇಲ್ಲಿದೆ.
ಕಳೆದ ಎರಡು ತಿಂಗಳಿನಿಂದಲೂ ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ದರ ಹೆಚ್ಚಳ ಮಾಡಬೇಕು ಎನ್ನುವ ಬಗ್ಗೆ ಚರ್ಚೆ ನಡೆದಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೇಂದ್ರ ಸರ್ಕಾರದ ಮಧ್ಯಪ್ರವೇಶ ಹಾಗೂ ಬಿಜೆಪಿ - ಜೆಡಿಎಸ್ ಮೈತ್ರಿ ಪಕ್ಷಗಳ ವಾಕ್ಸಮರದ ನಡುವೆಯೂ ಇದೀಗ ಕೊನೆಗೂ ಮೆಟ್ರೋ ಪ್ರಯಾಣ ದರ ಹೆಚ್ಚಳವಾಗಿದೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಜನ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಹಾರಾಜ್ ಪಾಟೀಲ್ ಎನ್ನುವವರು ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿದ್ದು, ಎಲ್ಲಾ ಸಾರಿಗೆಯ ಬೆಲೆ ಏರಿಕೆಯಾಗುತ್ತಿದೆ. ಕರ್ನಾಟಕ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಸಹ ಅನುಮೋದನೆ ಮಾಡಿರುವುದು ಶೋಚನೀಯ ಸಂಗತಿ. ಇನ್ಮುಂದೆ ಮೆಟ್ರೋ ಪ್ರಯಾಣ ಮಾಡುವ 3-4 ಜನರು ಕ್ಯಾಬ್‌ಗಳನ್ನು ಬುಕ್ ಮಾಡಿಕೊಳ್ಳಬಹುದು. ಇದೇ ಕಡಿಮೆ ಬೆಲೆ ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಕೆಲವರು ನಾವು ಮೆಟ್ರೋದಲ್ಲಿ 20ರಿಂದ 35 ಕಿ.ಮೀ ದಿನ ಸಂಚರಿಸುತ್ತೇವೆ. ಈಗ ಪ್ರಯಾಣ ದರವನ್ನು ನೋಡಿದರೆ ಬೈಕ್ ಅಥವಾ ಸ್ವಂತ ವಾಹನವನ್ನು ಬಳಸುವುದೇ ಉತ್ತಮ ಅನಿಸುತ್ತಿದೆ ಎಂದು ಹಲವರು ಹೇಳಿದ್ದಾರೆ.
ದೆಹಲಿ ಮೆಟ್ರೋಗಿಂತ ಹೆಚ್ಚು: ಇನ್ನು ಹಲವರು ಬೆಂಗಳೂರು ಮೆಟ್ರೋ ಪ್ರಯಾಣ ದರವು ದೆಹಲಿ ಮೆಟ್ರೋಗಿಂತ ಹೆಚ್ಚಾದಂತಾಗಿದೆ. ಬೆಂಗಳೂರಿಗೆ ಹೋಲಿಕೆ ಮಾಡಿದರೆ ದೆಹಲಿ ಮೆಟ್ರೋ ವಿಸ್ತರಣೆ ಸಾಕಷ್ಟು ದೊಡ್ಡದು. ದೆಹಲಿ ಮೆಟ್ರೋ ಸೇವೆಯಲ್ಲಿ ಎಂಡ್ ಟು ಎಂಡ್ ಕನೆಕ್ಟಿವಿಟಿ ಇದೆ (ಒಂದು ಜಾಗದಿಂದ ಇನ್ನುಂದು ಜಾಗಕ್ಕೆ ನೇರ ಮೆಟ್ರೋ ಸಂಪರ್ಕ). ಆದರೆ ಬೆಂಗಳೂರಿನಲ್ಲಿ ಆ ರೀತಿ ಇಲ್ಲ ಆದರೂ ಪ್ರಯಾಣ ದರ ಅಲ್ಲಿಗಿಂತ ಇಲ್ಲಿ ಜಾಸ್ತಿ ಆಗಿರುವುದು ಸರಿ ಅಲ್ಲ ಎಂದು ಕೆಲವರು ಹೇಳಿದ್ದಾರೆ.
ದರ ಏರಿಕೆಯ ಬಗ್ಗೆ ಬಿಜೆಪಿ ಟ್ವೀಟ್: ಇನ್ನು ಬೆಂಗಳೂರು ಮೆಟ್ರೋ ಪ್ರಯಾಣ ದರ ಹೆಚ್ಚಳ ಮಾಡಿರುವುದಕ್ಕೆ ಬಿಜೆಪಿ ಸಹ ಆಕ್ರೋಶ ವ್ಯಕ್ತಪಡಿಸಿದ್ದು ಟ್ವೀಟ್ ಮಾಡಿದೆ. ದರ ಏರಿಕೆಯ ಬರೆಯಿಂದ ತತ್ತರಿಸುವ ಬೆಂಗಳೂರಿನ ಜನತೆಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ಬಸ್ ಟಿಕೆಟ್ ದರ ಹೆಚ್ಚಳದ ಬೆನ್ನಲ್ಲೇ ಬೆಂಗಳೂರಿನ ಜೀವನಾಡಿಯಾದ ಮೆಟ್ರೋ ಟಿಕೆಟ್ ದರ ಬರೊಬ್ಬರಿ ಶೇ. 46% ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಸುಳ್ಳು ಭರವಸೆ ಮೂಲಕ ಅಧಿಕಾರಕ್ಕೆ ಬಂದು ಜನಸಾಮಾನ್ಯರ ಲೂಟಿ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ದೆಹಲಿಯ ಜನತೆ ಕೊಟ್ಟ ಉತ್ತರವನ್ನು ಕರುನಾಡಿನ ಜನತೆ ಮುಂಬರುವ ದಿನಗಳಲ್ಲಿ ನೀಡಲಿದ್ದಾರೆ ಎಂದು ಹೇಳಿದೆ.












Click it and Unblock the Notifications