WFH ತೆಗೆದುಹಾಕಿದ ಐಟಿ ಕಂಪನಿ ವಿರುದ್ಧ ಟೆಕ್ಕಿಯ ಪೋಸ್ಟ್ ವೈರಲ್: ಬೆಂಗಳೂರು ಟ್ರಾಫಿಕ್, ದುಬಾರಿ ಬಾಡಿಗೆ ಎಂದ ಐಟಿ ಉದ್ಯೋಗಿ
ಬೆಂಗಳೂರಿನಲ್ಲಿ ಮಿತಿ ಮೀರಿದ ಸಮಸ್ಯೆಗಳ ಬಗ್ಗೆ ಟೆಕ್ಕಿಯೊಬ್ಬರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ತಮ್ಮ ಕಂಪನಿಯು ಕಡ್ಡಾಯ 5 ದಿನಗಳ ಕಚೇರಿ ಕೆಲಸವನ್ನು ಮತ್ತೆ ಜಾರಿ ಮಾಡಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆನ್‌ಲೈನ್‌ನಲ್ಲಿ ಮಾಡಿರುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಕಡ್ಡಾಯ 5 ದಿನಗಳ ಕಚೇರಿಗೆ ಬರುವ ನಿರ್ಧಾರದ ಬಗ್ಗೆ ಟೆಕ್ಕಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾ ರೆಡ್ಡಿಟ್ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ.
ಐಟಿ ಕ್ಷೇತ್ರದಲ್ಲಿ 10 ವರ್ಷಗಳಿಗೂ ಹೆಚ್ಚು ಅನುಭವವನ್ನು ಹೊಂದಿರುವ ಟೆಕ್ಕಿ, ಕೋವಿಡ್ -19 ಸಮಯದಲ್ಲಿ ಅವರ ಕಂಪನಿಯು ರಿಮೋಟ್ ಕೆಲಸಕ್ಕೆ ಅವಕಾಶ ನೀಡಿತ್ತು. ಕಂಪನಿಯು ಈ ಅವಕಾಶ ನೀಡಿದ್ದರಿಂದಾಗಿ ಟೆಕ್ಕಿಯು ತಮ್ಮ ಊರಿನಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆದಾಗ್ಯೂ, ಡಿಸೆಂಬರ್ ವೇಳೆಗೆ ಎಲ್ಲ ಉದ್ಯೋಗಿಗಳು ವಾರದಲ್ಲಿ 5 ದಿನಗಳು ಕಚೇರಿಗೆ ಮರಳಬೇಕು ಎಂದು ಕಂಪನಿಯು ಘೋಷಿಸಿದೆ ಎಂದು ಟೆಕ್ಕಿ ಹೇಳಿಕೊಂಡಿದ್ದಾರೆ. ಈ ವಿಷಯವು ಇದೀಗ ಚರ್ಚೆಗೆ ಕಾರಣವಾಗಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಕ್‌ಫ್ರಮ್ ಹೋಮ್ ಆಯ್ಕೆಗಳನ್ನು ಮರಳಿ ತರಬೇಕು, ಇಂಧನ ಉಳಿಸಬೇಕು ಎನ್ನುವ ಸಲಹೆಗಳನ್ನು ನೀಡುತ್ತಿರುವಾಗಲೇ ಐಟಿ ಕಂಪನಿಯಲ್ಲಿ ಈ ರೀತಿಯ ನಿರ್ಧಾರವಾಗಿರುವುದು ಆಕ್ಷೇಪಕ್ಕೂ ಕಾರಣವಾಗಿದೆ.

ನನ್ನ ಕಂಪನಿಯು WFH ಗೆ ಅವಕಾಶ ನೀಡಿದ್ದರಿಂದ ನಾನು ನನ್ನ ಊರಿನಲ್ಲಿ ವಾಸಿಸುತ್ತಿದ್ದೇನೆ, ಆದರೆ ನನ್ನ ಕಚೇರಿ ಬೆಂಗಳೂರಿನಲ್ಲಿದೆ. ಇತ್ತೀಚೆಗೆ, ಆಡಳಿತ ಮಂಡಳಿಯು ಡಿಸೆಂಬರ್ ವೇಳೆಗೆ ಎಲ್ಲರಿಗೂ ಕಡ್ಡಾಯ 5 ದಿನಗಳ WFO ಅನ್ನು ಘೋಷಿಸಿತ್ತು ಎಂದು ರೆಡ್ಡಿಟರ್ ಬರೆದುಕೊಂಡಿದ್ದಾರೆ. ನೌಕರರು ರಿಮೋಟ್ (ಮನೆ ಮತ್ತು ಕಚೇರಿಯಲ್ಲಿ ಕೆಲಸ ಮಾಡುವ ಅವಕಾಶ) ಕೊಡುವುದು ಅವಶ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಕಾರಣವೇನೆಂದರೆ ಈ ಮಾದರಿಯಿಂದ ಕೆಲಸದ ವಿಚಾರದಲ್ಲಿ ಯಾವುದೇ ಬದಲಾವಣೆ ಆಗಲ್ಲ. ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಕೋವಿಡ್ ಸಮಯಕ್ಕೂ ಮೊದಲು ಬೆಂಗಳೂರಿನಲ್ಲಿ ವಾಸಿಸುತ್ತಿದ್ದೆ. ಬೆಂಗಳೂರು ನಗರದ ವಿಪರೀತ ಟ್ರಾಫಿಕ್, ಬಾಡಿಗೆ ಮತ್ತು ಪ್ರಯಾಣದ ತೊಂದರೆಗಳು ವಿಪರೀತವಾಗಿತ್ತು. ನನಗೆ ಬೆಂಗಳೂರು ನಗರದ ವಾಸ್ತವ ಈಗಾಗಲೇ ತಿಳಿದಿದೆ. ಭಯಾನಕ ಟ್ರಾಫಿಕ್, ದುಬಾರಿ ಬಾಡಿಗೆ, ತಾಸುಗಟ್ಟಲೆ ಆಫೀಸ್ ಪ್ರಯಾಣ, ಹೆಚ್ಚಿನ ಜೀವನ ವೆಚ್ಚಗಳು ಮತ್ತು ಕೆಲಸದ ನಂತರ ಬಹುತೇಕ ವೈಯಕ್ತಿಕ ಸಮಯ ಉಳಿಯಲ್ಲ. ಕುಟುಂಬದೊಂದಿಗೆ ಸಮಯ ಕಳೆಯುವುದಕ್ಕೆ ಆಗಲ್ಲ. ಸಂಬಳದ ಹೊರತಾಗಿಯೂ ನನ್ನ ಹೆಚ್ಚಿನ ಉಳಿತಾಯ ಅನವಶ್ಯಕವಾಗಿ ಖರ್ಚಾಗುತ್ತದೆ ಎಂದು ಅವರು ಹೇಳಿದ್ದಾರೆ.
ಹಲವು ವರ್ಷಗಳಿಂದ ವರ್ಕ್‌ಫ್ರಮ್ ಹೋಮ್ ಆಯ್ಕೆಯು ಅತ್ಯುತ್ತಮವಾಗಿತ್ತು. ಈ ಜೀವನಶೈಲಿಯನ್ನು ಹಲವರು ಬಯಸುತ್ತಾರೆ ಎಂದು ಟೆಕ್ಕಿ ಹೇಳಿಕೊಂಡಿದ್ದಾರೆ. WFH ಆಯ್ಕೆಯಲ್ಲಿ ಟ್ರಾಫಿಕ್‌ನಲ್ಲಿ ಗಂಟೆಗಳ ಕಾಲ ಕಳೆಯುವ ಸಮಸ್ಯೆ ಇಲ್ಲ. ಬಲವಂತವಾಗಿ ಕಚೇರಿಗೆ ಬರಬೇಕು ಎಂದು ಒತ್ತಾಯ ಹೇರುವುದರಲ್ಲಿ ಅರ್ಥವಿಲ್ಲ.
ರಿಮೋಟ್ ಮಾದರಿಯ ಕೆಲಸವು ಅವರ ಜೀವನಶೈಲಿ ಸುಧಾರಿಸಿದೆ ಎಂದು ಅವರು ಹೇಳಿದ್ದಾರೆ. ಸಂಪೂರ್ಣವಾಗಿ ಡಿಜಿಟಲ್ ವ್ಯವಸ್ಥೆ ಇರುವಾಗ, ಈಗಾಗಲೇ ರಿಮೋಟ್ ಆಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವಾಗ ಕಡ್ಡಾಯ ಕಚೇರಿಗೆ ಬರುವ ಆಯ್ಕೆ ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.














Click it and Unblock the Notifications