ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿದರೆ ಅರೆಸ್ಟ್ : ಬೆಂಗಳೂರು ಪೊಲೀಸ್ ಕಮೀಷನರ್ ಎಚ್ಚರಿಕೆ
ಬೆಂಗಳೂರು, ಜ. 07: ರಾಜಧಾನಿಯಲ್ಲಿ ವೀಕೆಂಡ್ ಕರ್ಫ್ಯೂ ಉಲ್ಲಂಘನೆ ಮಾಡಿ ಅನಾವಶ್ಯಕ ಓಡಾಡಿದವರನ್ನು ಬಂಧಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ. ವೀಕೆಂಟ್ ಕರ್ಫ್ಯೂ ನಿಯಮ ಕಟ್ಟುನಿಟ್ಟು ಜಾರಿಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣೇಶ್ವರ ರಾವ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.
ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ ಪಂತ್ ಸ್ಪಷ್ಟನೆ ಸುದ್ದಿಗಾರರಿಗೆ ಕೆಲವು ಸ್ಪಷ್ಟನೆ ನೀಡಿದ್ದಾರೆ. ಕೊರೊನಾ ತಡೆಯುವ ನಿಟ್ಟಿನಲ್ಲಿ ಸರ್ಕಾರ ಕಟ್ಟು ನಿಟ್ಟಾಗಿ ಜಾರಿ ಮಾಡಲು ಸೂಚಿಸಿದ್ದಾರೆ. ಅದರಂತೆ ಶುಕ್ರವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆ ವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಆದೇಶದಲ್ಲಿ ತಿಳಿಸಿರುವಂತೆ ತುರ್ತು ಸೇವೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಅದಕ್ಕೆ ಪೂರಕ ದಾಖಲೆಗಳನ್ನು ನಾಗರಿಕರು ಪೊಲೀಸರಿಗೆ ತೋರಿಸಬೇಕು. ಯಾವುದೇ ರೀತಿಯ ಪಾಸ್‌ಗಳನ್ನು ಪೊಲೀಸ್ ಇಲಾಖೆ ವತಿಯಿಂದ ನೀಡುತ್ತಿಲ್ಲ. ಹೊರ ಬರುವ ಉದ್ದೇಶಕ್ಕೆ ಸಂಬಂಧಿಸಿದ ದಾಖಲೆಗಳು ಕೈಯಲ್ಲಿರಬೇಕು. ಹೊರತು ಪಡಿಸಿ ಅನಾವಶ್ಯಕ ಹೊರಗೆ ಬಂದ್ರೆ, ಎನ್ಡಿಎಂಎ ಕೇಸ್ ಅಡಿ ಕೇಸು ದಾಖಲಿಸಿ ಬಂಧಿಸುತ್ತೇವೆ ಎಂದು ತಿಳಿಸಿದ್ದಾರೆ.

ಪೊಲೀಸರಿಗೆ ಕರೋನಾ:
ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ನಾವು ಇದಕ್ಕೆ ಸಿದ್ಧವಿದ್ದೇವೆ. ಕೊರೊನಾ ಬಂತು ಎಂಬ ಕಾರಣಕ್ಕೆ ಇಲಾಖೆ ಬಿಟ್ಟು ಹೋಗಲು ಸಾಧ್ಯವಿಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಏನೆಲ್ಲಾ ಕ್ರಮ ವಹಿಸಬೇಕೋ ಅದನ್ನು ವಹಿಸುತ್ತೇವೆ. ಕೋವಿಡ್ ನಿರ್ವಹಣೆ ಸಂಬಂಧ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣೇಶ್ವರ ರಾವ್ ಮೇಲುಸ್ತುವಾರಿ ನಡೆಸಲಿದ್ದಾರೆ ಎಂದು ಕಮಲಪಂತ್ ತಿಳಿಸಿದ್ದಾರೆ.
ಅಕ್ರಮ ಶಸ್ತ್ರಾಸ್ತ್ರ ಹೊಂದಿದವರ ಬಂಧನ:
2021 ರ ಲಾಕ್ ಡೌನ್ ಮತ್ತು ಕರ್ಫ್ಯೂ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಜನರ ಸಹಕಾರದಿಂದ ಸಮಸ್ಯೆಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಲಾಗಿದೆ. ಯಾವುದೇ ಘಟನೆ ಕೈ ಮೀರಲಿಲ್ಲ. ದಿವಗಂತ ನಟ ಪುನೀತ್ ರಾಜ್ ಕುಮಾರ್ ನಿಧನದ ವೇಳೆಯೂ ಯಾವುದೇ ಅಹಿತಕರ ಘಟನೆ ನಡೆಯದೇ ಶಾಂತಿ ರೀತಿಯತ್ತು. ಲಕ್ಷಾಂತರ ಮಂದಿ ಬಂದರೂ ಪೊಲೀಸ್ ಇಲಾಖೆ ಸೂಕ್ತವಾಗಿ ನಿರ್ವಹಣೆ ಮಾಡಿದೆ.

ಇನ್ನು ನಗರದಲ್ಲಿ ಅಕ್ರಮವಾಗಿ ಮಾರಕಾಸ್ತ್ರಗಳನ್ನು ಹೊಂದಿರುವ ಪ್ರಕರಣಗಳು ಹೆಚ್ಚುತ್ತಿವೆ. ಮಚ್ಚು ಲಾಂಗು ಇಟ್ಟುಕೊಂಡಿರುವರ ವಿರುದ್ಧ ಸಹ ಕೇಸು ದಾಖಲಿಸಲಾಗುತ್ತಿದೆ. ನಗರದಲ್ಲಿ ಈವರೆಗೆ 218 ಕೇಸು ದಾಖಲಾಗಿದೆ. ಇದರಿಂದ ರೌಡಿಗಳನ್ನು ನಿಯಂತ್ರಿಸಲಾಗುತ್ತಿದೆ. ಮೂರು ವರ್ಷದ ಹಿಂದೆ ಡಿಸಿಪಿಗಳಿಗೆ ಸರ್ಕಾರ ನೀಡಿದ ಮಾಜಿಸ್ಟ್ರಿಯಲ್ ಪವರ್ ಬಳಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸಲಾಗುತ್ತಿದೆ. ಈವರೆಗೂ 43 ರೌಡಿಗಳನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿದೆ ಎಂದು ಕಮಲಪಂತ್ ತಿಳಿಸಿದ್ದಾರೆ.












Click it and Unblock the Notifications