ನಂಬರ್ ಕ್ರೇಜ್, ಮೂರುದಿನ ಶುಭ ಕಾರ್ಯಗಳ ಸುಗ್ಗಿ!
ಬೆಂಗಳೂರು, ಡಿ. 10 : ಮುಂದಿನ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಛತ್ರ ಖಾಲಿ ಇಲ್ಲ, ಪುರೋಹಿತರು ಫ್ರೀ ಇಲ್ಲ ಕಾರಣ ಜನರ ನಂಬರ್ ಕ್ರೇಜ್ . ಬುಧವಾರದಿಂದ ಆರಂಭವಾಗುವ ಸೀಕ್ವೆನ್ಸ್ ಡೇನಲ್ಲಿ ಶುಭ ಕಾರ್ಯಗಳನ್ನು ಮಾಡಲು ಜನರು ತುದಿಗಾಲಲ್ಲಿ ನಿಂತಿದ್ದಾರೆ. 11, 12, 13. (11ನೇ ತಾರೀಖು, 12ನೇ ತಿಂಗಳು, 2013ನೇ ವರ್ಷ) ಮೂರು ದಿನ ಮದುವೆ, ಗೃಹಪ್ರವೇಶ, ನಾಮಕರಣ ಕಾರ್ಯಗಳು ರಂಗೇರಲಿವೆ.
ಬೆಂಗಳೂರಿನ ಜನರಲ್ಲಿ ಈ ನಂಬರ್ ಕ್ರೇಜ್ ಸ್ವಲ್ಪ ಹೆಚ್ಚಾಗೇ ಇದೆ. ಬುಧವಾರ 11/12/2013, ಗುರುವಾರ 12/12/2013, ಶುಕ್ರವಾರ 13/12/2013 ಇದೇ ದಿನ ವಿವಾಹವಾಗಲು ಯುವ ಜೋಡಿಗಳು ದಿನಾಂಕವನ್ನು ಗೊತ್ತು ಪಡಿಸಿದ್ದಾರೆ. ಗೃಹ ಪ್ರವೇಶ, ನಾಮಕರಣ ಕೊನೆಗೆ ಹೆರಿಗೆ ಮಾಡಿಸಿಕೊಳ್ಳಲು ತಾಯಂದಿರು ಸಿದ್ಧವಾಗಿದ್ದಾರೆ.

ಬೆಂಗಳೂರು ನಗರದೊಳಗೆ ಮತ್ತು ಹೊರಭಾಗದಲ್ಲಿ ಮೂರು ದಿನಗಳ ಕಾಲ ಕಲ್ಯಾಣ ಮಂಟಪಗಳು ಖಾಲಿ ಇಲ್ಲ. ಪುರೋಹಿತರು ನಾಮಕರಣ, ಗೃಹ ಪ್ರವೇಶ ಎಂದು ಫುಲ್ ಬ್ಯುಸಿಯಾಗಿದ್ದಾರೆ. ಮೂರು ದಿನಗಳ ಕಾಲ ಛತ್ರ ಬುಕ್ ಆಗಿದೆ. ಆದರೆ, ಈಗಲೂ ದಿನಕ್ಕೆ ಸುಮಾರು 10 ಮಂದಿ ಛತ್ರಖಾಲಿ ಇದೆಯೇ? ಎಂದು ವಿಚಾರಿಸಲು ಬರುತ್ತಿದ್ದಾರೆ ಎನ್ನುತ್ತಾರೆ ಬನಶಂಕರಿ ಎರಡನೇ ಹಂತದಲ್ಲಿರುವ ಶ್ರೀಹರಿ ಕಲ್ಯಾಣ ಮಂಟಪದ ವ್ಯವಸ್ಥಾಪಕರು.
ಸಂಖ್ಯಾಶಾಸ್ತ್ರಜ್ಞರು ಕೂಡ ಈ ದಿನವನ್ನು ಅತ್ಯಂತ ವಿಶಿಷ್ಟ ಮತ್ತು ಅದೃಷ್ಟದ ಸಂಕೇತ ಎನ್ನುತ್ತಿದ್ದಾರೆ. ಹೀಗಾಗಿ ಜನರೂ ಕೂಡ ಇದಕ್ಕೆ ಇನ್ನಿಲ್ಲದಂತೆ ಒತ್ತು ನೀಡುತ್ತಿದ್ದಾರೆ. ಇದರಲ್ಲಿ ಪಾಸಿಟಿವ್ ಎನರ್ಜಿಯಿದೆ ಎಂಬ ನಂಬಿಕೆ ಜನರದ್ದು, ಇಂತಹ ಸರಣಿ ಸಂಖ್ಯೆ ಪಡೆಯಲು ಇನ್ನು 90 ವರ್ಷ ಕಾಯಬೇಕು ಎಂಬ ಅಭಿಪ್ರಾಯವೂ ಇದೆ.
ಗರ್ಭಿಣಿಯರು ಸಹ ಸೀಕ್ವೆನ್ಸ್ ಡೇ ಮೋಡಿಗೆ ಒಳಗಾಗಿದ್ದಾರೆ 11/12/2013ರಂದು ಮಗುವಿಗೆ ಜನ್ಮ ನೀಡಲು ನಿರ್ಧರಿಸಿದ್ದಾರೆ. ಸಹಜ ಹೆರಿಗೆ ಸಾಧ್ಯವಿಲ್ಲದ ಮತ್ತು 37 ವಾರ ಪೂರ್ಣಗೊಳಿಸಿದವರು ಶಸ್ತ್ರಚಿಕಿತ್ಸೆ ಮಾಡುವಂತೆ ಕೋರಿಕೆ ಆಸ್ಪತ್ರೆಗಳಿಗೆ ಮನವಿ ಮಾಡಿದ್ದಾರೆ. ಗರ್ಭಿಣಿಯರ ಆರೋಗ್ಯ ಸ್ಥಿತಿ, ಮಗುವಿನ ಬೆಳವಣಿಗೆ ಆಧರಿಸಿ 37 ವಾರ ಪೂರ್ತಿಯಾಗಿದ್ದರೆ, ಕುಟುಂಬದವರ ಒಪ್ಪಿಗೆ ಪಡೆದು ಶಸ್ತ್ರಚಿಕಿತ್ಸೆ ಮಾಡುಲು ಆಸ್ಪತ್ರೆಗಳು ನಿರ್ಧರಿಸಿವೆ.
1/1/2011 ಮತ್ತು 12/12/2012ರಲ್ಲಿ ಇಂತಹ ಫ್ಯಾನ್ಸಿ ಡೇಗಗಳು ಬಂದಿದ್ದವು, ಆಗ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರು ಮಗುವಿಗೆ ಜನ್ಮ ನೀಡಿದ್ದರು, ಅನೇಕ ಮಂಗಳ ಕಾರ್ಯಗಳು ನಡೆದಿದ್ದವು, ಸದ್ಯ ಮತ್ತೊಮ್ಮೆ ಸೀಕ್ವೆನ್ಸ್ ಡೇ ಬಂದಿದ್ದು, ಜನರು ಮಂಗಳ ಕಾರ್ಯಗಳನ್ನು ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.











Click it and Unblock the Notifications