ನಿಮ್ಮದು ಹೈವೋಲ್ಟೇಜ್ ಅಲ್ವಾ? ಯುವಕರಿಗೆ ಉದ್ಯೋಗ ಕೊಡಿ: ಮೋದಿಗೆ ಡಿಕೆಶಿ ತಿರುಗೇಟು
ಬೆಂಗಳೂರು, ಫೆಬ್ರವರಿ 8: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಟ್ಯೂಬ್‌ಲೈಟ್ ಎಂದು ಅಣಕಿಸಿದ್ದ ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ತೀಕ್ಷ್ಣ ಎದಿರೇಟು ನೀಡಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, 'ನಾವೇನೋ ಟ್ಯೂಬ್‌ಲೈಟ್‌ಗಳು. ಆದರೆ ನಿಮ್ಮದು ಹೈವೋಲ್ಟೇಜ್ ಅಲ್ಲವಾ?ಹಾಗಿದ್ದರೆ ಮೊದಲು ಯುವಕರಿಗೆ ಬಲ್ಬ್ ಕೊಡಿ. ಎಲ್ಲರಿಗೂ ಉದ್ಯೋಗ ನೀಡಿ' ಎಂದು ಹೇಳಿದರು.
'ನಮ್ಮ ಆರ್ಥಿಕತೆಯನ್ನು ನೋಡಿ ಬೇರೆ ದೇಶದವರು ಹೊಗಳಬೇಕು. ಅದರಂತೆ ಮೊದಲು ಕೆಲಸ ಮಾಡ್ರಪ್ಪ' ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ಐಎಎಸ್ ಅಧಿಕಾರಿಗಳು ಸಹ ಕೇಂದ್ರ ಸರ್ಕಾರದ ದಬ್ಬಾಳಿಕೆಗೆ ಹೆದರುತ್ತಿದ್ದಾರೆ. ಬಜೆಟ್‌ನಲ್ಲಿ ಕೇಂದ್ರ ಏನು ಕೊಟ್ಟಿದೆ? ಇಂದು ನಮಗೆ ಹೊರದೇಶಗಳ ಬೆಂಬಲ ಸಿಗುತ್ತಿಲ್ಲ. ಹೊಸ ಪೀಳಿಗೆಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಯಡಿಯೂರಪ್ಪ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡುತ್ತೇವೆ ಎಂದಿದ್ದರು. ಈಗ ಅವರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೂ ಏಕೆ ಸಾಲಮನ್ನಾ ಮಾಡುತ್ತಿಲ್ಲ? ಎಂದು ಪ್ರಶ್ನಿಸಿದರು.
ಮಹದಾಯಿ ನೋಟಿಫಿಕೇಷನ್ ಮಾಡಲು ಇನ್ನೇನು ಬೇಕು? ಮಾತುಕೊಟ್ಟು ನೋಟಿಫಿಕೇಷನ್ ಮಾಡಲು ಏಕೆ ಆಗುತ್ತಿಲ್ಲ? ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಏನಾಗಿದೆ? ಬಿಜೆಪಿ ಸಂಸದರಿಗೆ ಏನಾಗಿದೆ? ಅಲ್ಲಿ ಯಾಕೆ ಯಾರೂ ಇದರ ಬಗ್ಗೆ ಮಾತನಾಡುತ್ತಿಲ್ಲ? ಬಿಜೆಪಿಯವರಿಗೆ ಅಧಿಕಾರ ಬೇಕಿದೆ ಅಷ್ಟೇ, ಜನರ ಸಮಸ್ಯೆಗಳಿಗೆ ಪರಿಹಾರವಲ್ಲ ಎಂದು ಕಿಡಿಕಾರಿದರು.












Click it and Unblock the Notifications