ನಮ್ಮ ಕೈಗೆ ಸಿಗುವ ಒಂದು ಪಾರ್ಸೆಲ್ ಹಿಂದಿನ ಕಷ್ಟ; ವೈರಲ್ ಆಯ್ತು ಅಮೆಜಾನ್ ಡೆಲಿವರಿ ಡ್ರೈವರ್ Video
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ, ಇತ್ತೀಚೆಗೆ ಅಮೆಜಾನ್ (Amazon) ಡೆಲಿವರಿ ಡ್ರೈವರ್ ಓರ್ವಳು ಹಂಚಿಕೊಂಡಿರುವ ವಿಡಿಯೋವೊಂದು ನೆಟ್ಟಿಗರ ನಿದ್ದೆಗೆಡಿಸಿದ್ದು, ಗಿಗ್ ಆರ್ಥಿಕತೆಯಲ್ಲಿ ಕೆಲಸ ಮಾಡುವವರ ಪರಿಸ್ಥಿತಿ, ಕೆಲಸದ ಒತ್ತಡ ಹಾಗೂ ದೈಹಿಕ ಮತ್ತು ಮಾನಸಿಕ ಬಳಲಿಕೆಯ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ. @abbykaddaby ಎಂಬ ಟಿಕ್‌ಟಾಕ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ತಮ್ಮ ಒಂದು ದಿನದ ಸಾಮಾನ್ಯ ಕೆಲಸದ ಪಾಳಿ ಹೇಗಿರುತ್ತದೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಈ ವಿಡಿಯೋವನ್ನು ನೋಡಿದ ಪ್ರತಿಯೊಬ್ಬರೂ ಅಮೆಜಾನ್ ನೀಡುತ್ತಿರುವ ಈ ಮಟ್ಟದ ಟಾರ್ಗೆಟ್ ನೋಡಿ ದಂಗಾಗಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಈ ವೈರಲ್ ವಿಡಿಯೋದಲ್ಲಿ, ಡೆಲಿವರಿ ಡ್ರೈವರ್ ತನಗೆ ನೀಡಲಾದ ಒಂದು ದಿನದ ಕೆಲಸದ ಮಾಹಿತಿಯನ್ನು ತೋರಿಸುತ್ತಾಳೆ. ಅವಳು ಒಂದೇ ದಿನದಲ್ಲಿ ಬರೋಬ್ಬರಿ 300 ನಿಲ್ದಾಣಗಳಿಗೆ ಭೇಟಿ ನೀಡಬೇಕು, 421 ಡೆಲಿವರಿ ಲೊಕೇಶನ್‌ಗಳನ್ನು ತಲುಪಬೇಕು ಹಾಗೂ ಒಟ್ಟು 524 ಪ್ಯಾಕೇಜ್‌ಗಳನ್ನು ಗ್ರಾಹಕರಿಗೆ ವಿತರಿಸಬೇಕಾಗಿದೆ. ವಿಡಿಯೋದ ಮುಂದುವರಿದ ಭಾಗದಲ್ಲಿ ಆಕೆ ತನ್ನ ವಾಹನದ ಹಿಂಭಾಗವನ್ನು ತೋರಿಸುತ್ತಾಳೆ. ವಾಹನದ ಪ್ರತಿಯೊಂದು ಶೆಲ್ಫ್ ಕೂಡ ಪಾರ್ಸೆಲ್‌ಗಳಿಂದ ಭರ್ತಿಯಾಗಿದ್ದು, ಬಾಕ್ಸ್‌ಗಳನ್ನು ವಾಹನದ ಮೇಲ್ಛಾವಣಿಯವರೆಗೂ ಇಡಲಾಗಿದೆ. ಒಳಗಡೆ ಓಡಾಡಲು ಅಥವಾ ತಿರುಗಲು ಸ್ವಲ್ಪವೂ ಜಾಗವಿಲ್ಲದಷ್ಟು ವಾಹನವು ಸಂಪೂರ್ಣವಾಗಿ ಪ್ಯಾಕೇಜ್‌ಗಳಿಂದ ತುಂಬಿಹೋಗಿರುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು.

ಟಿಕ್‌ಟಾಕ್‌ನಲ್ಲಿ ಶುರುವಾದ ಈ ವಿಡಿಯೋ, ನಂತರ ಎಕ್ಸ್ ಸೇರಿದಂತೆ ಇತರ ಪ್ಲಾಟ್‌ಫಾರ್ಮ್‌ಗಳಲ್ಲೂ ಹರಿದಾಡಿದ್ದು, ವ್ಯಾಪಕ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದನ್ನು ಹಂಚಿಕೊಂಡ ಬಳಕೆದಾರರೊಬ್ಬರು, "ಇದು ಹಬ್ಬದ ಸೀಸನ್ ಅಲ್ಲದಿದ್ದರೂ, ಇದೊಂದು ಸಾಮಾನ್ಯ ರೂಟ್ ಎನ್ನುವುದು ಆತಂಕಕಾರಿ" ಎಂದು ಬರೆದುಕೊಂಡಿದ್ದಾರೆ.
ಆನ್‌ಲೈನ್‌ನಲ್ಲಿ ಪರ-ವಿರೋಧ ಚರ್ಚೆ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಡೆಲಿವರಿ ಕಂಪನಿಗಳ ಕಾರ್ಯಾಚರಣೆಯ ದಕ್ಷತೆ ಮತ್ತು ಉದ್ಯೋಗಿಗಳ ಮೇಲಿನ ಅತಿಯಾದ ಒತ್ತಡದ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. ಇದು ಸಾಮಾನ್ಯ ಕೆಲಸ ಎಂದು ಕೆಲವರು ವಾದಿಸಿದರೆ, ಇನ್ನು ಕೆಲವರು ಒಬ್ಬನೇ ವ್ಯಕ್ತಿ ಇಷ್ಟೊಂದು ಪ್ಯಾಕೇಜ್‌ಗಳನ್ನು ಒಂದೇ ದಿನದಲ್ಲಿ ವಿತರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
🚨 AMAZON DRIVER EXPOSES 300 STOPS IN ONE SHIFT — THEN SHOWS HER TRUCK AND PEOPLE CAN’T BELIEVE THIS IS WHAT’S EXPECTED
— HustleBitch (@HustleBitch_) April 16, 2026
An Amazon driver shows her route on her phone… then turns the camera to her truck and it’s overflowing.
• 300 stops
• 524 packages
• 421 locations
•… pic.twitter.com/TVTu8qduhQ
ಅನೇಕರು ಈ ವಿಡಿಯೋಗೆ ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಬಳಕೆದಾರನೊಬ್ಬ, "ಫೆಡೆಕ್ಸ್ (FedEx) ಮತ್ತು ಯುಪಿಎಸ್ (UPS) ಡ್ರೈವರ್‌ಗಳು ವರ್ಷಗಳಿಂದ ಇದಕ್ಕಿಂತ ದೊಡ್ಡ ವಾಹನಗಳಲ್ಲಿ ಇದಕ್ಕಿಂತ ಹೆಚ್ಚಿನ ಪ್ಯಾಕೇಜ್‌ಗಳನ್ನು ತಲುಪಿಸುತ್ತಿದ್ದಾರೆ. ಇದೇನೂ ಹೊಸತಲ್ಲ" ಎಂದು ಹೇಳಿದ್ದಾನೆ. ಮತ್ತೊಬ್ಬ ಬಳಕೆದಾರ ಪ್ರತಿಕ್ರಿಯಿಸಿ, "ನೀವು ನೋಡುವುದನ್ನು ನಂಬಬೇಡಿ. ಗಂಟೆಗೆ 21 ಸ್ಟಾಪ್‌ಗಳಂತೆ ಲೆಕ್ಕಾಚಾರ ಮಾಡಿ 9 ಗಂಟೆಗಳ ಪಾಳಿಗೆ ತಕ್ಕಂತೆ ರೂಟ್ ಪ್ಲಾನ್ ಮಾಡಲಾಗುತ್ತದೆ. ಅಮೆಜಾನ್ ಯಂತ್ರ ಕಲಿಕೆ (Machine learning) ಅಲ್ಗಾರಿದಮ್‌ಗಳನ್ನು ಬಳಸಿ ಡ್ರೈವರ್‌ಗಳಿಗೆ ಹೊರೆಯಾಗದಂತೆ ಕೆಲಸ ನೀಡುತ್ತದೆ" ಎಂದು ವಾದಿಸಿದ್ದಾರೆ.
ಇದಕ್ಕೆ ತದ್ವಿರುದ್ಧವಾಗಿ ಪ್ರತಿಕ್ರಿಯಿಸಿದ ಇನ್ನೊಬ್ಬ ಬಳಕೆದಾರ, "ಎಲ್ಲಾ ಡ್ರೈವರ್‌ಗಳು ಒಟ್ಟಾಗಿ ಈ ಕೆಲಸವನ್ನು ನಿಲ್ಲಿಸಿದರೆ, ಆಗ ನಿಮ್ಮ ವೇತನ ಹೆಚ್ಚಾಗುತ್ತದೆ. ಕಂಪನಿಗಳು ಮನುಷ್ಯರನ್ನು ಎಲ್ಲಿಯವರೆಗೆ ದುಡಿಸಿಕೊಳ್ಳಬಹುದು ಎಂಬುದನ್ನು ಪರೀಕ್ಷಿಸುತ್ತಿವೆ ಅಷ್ಟೇ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.














Click it and Unblock the Notifications