ChatGPT ಮೂಲಕ ಐಆರ್‌ಸಿಟಿಸಿಯಲ್ಲಿ ಟ್ರೈನ್ ಟಿಕೆಟ್ ಬುಕ್ ಮಾಡಿದ ಯುವಕನ ವಿಡಿಯೋ ವೈರಲ್: ಅಚ್ಚರಿ ಮೂಡಿಸಿದ AI
ಕೃತಕ ಬುದ್ಧಿಮತ್ತೆ ಅಥವಾ ಈ ಎಐ ತಂತ್ರಜ್ಞಾನ ಇಂದು ನಮ್ಮ ದೈನಂದಿನ ಕೆಲಸಗಳನ್ನ ಎಷ್ಟು ಸುಲಭಗೊಳಿಸುತ್ತಿದೆ ಎಂದರೆ, ಕೆಲವೊಮ್ಮೆ ಇದು ಅಚ್ಚರಿ ಹಾಗೂ ಆತಂಕ ಎರಡನ್ನೂ ಮೂಡಿಸುತ್ತದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಂಟ್ ಕ್ರಿಯೇಟರ್ ಒಬ್ಬರು ಹಂಚಿಕೊಂಡಿರುವ ವಿಡಿಯೋವೊಂದು ತೀವ್ರ ಚರ್ಚೆಗೆ ಕಾರಣವಾಗಿದೆ.
ಓಪನ್ ಎಐ ಸಂಸ್ಥೆ ಇತ್ತೀಚೆಗೆ ಅಭಿವೃದ್ಧಿಪಡಿಸಿರುವ 'ಚಾಟ್‌ಜಿಪಿಟಿ ಆಸ್ಟ್ರಾ' ಎಂಬ ಎಐ ಅಸಿಸ್ಟೆಂಟ್ ಅನ್ನು ಬಳಸಿ, ಭಾರತೀಯ ರೈಲ್ವೆಯ ಅಧಿಕೃತ ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್ ಆದ ಐಆರ್‌ಸಿಟಿಸಿಯಲ್ಲಿ (IRCTC) ರೈಲು ಟಿಕೆಟ್ ಅನ್ನಾ ಕಾಯ್ದಿರಿಸಿದ ಪ್ರಯೋಗ ವೈರಲ್ ಆಗಿದೆ.

ಕೇವಲ ಒಂದು ಸಣ್ಣ ಕಮಾಂಡ್ ನೀಡುವ ಮೂಲಕ ಇಡೀ ಬುಕಿಂಗ್ ಪ್ರಕ್ರಿಯೆಯನ್ನ ಎಐ ಹೇಗೆ ನಿಭಾಯಿಸಿತು ಎಂಬುದನ್ನ ಈ ವಿಡಿಯೋದಲ್ಲಿ ಎಳೆಎಳೆಯಾಗಿ ತೋರಿಸಲಾಗಿದೆ.
ಚಾಟ್‌ಜಿಪಿಟಿ ಆಸ್ಟ್ರಾ ಮೂಲಕ ರೈಲು ಟಿಕೆಟ್ ಬುಕಿಂಗ್
ತಮ್ಮ ಹಿಂದಿನ ರೀಲ್ಸ್ ಒಂದಕ್ಕೆ ಬಂದಿದ್ದ ಕಮೆಂಟ್‌ನಿಂದ ಪ್ರೇರಿತರಾಗಿ ಈ ಪ್ರಯೋಗವನ್ನ ಮಾಡಿದ್ದಾಗಿ ಯುವಕ ವಿವರಿಸಿದ್ದಾರೆ. "ಭಾರತ ಸರ್ಕಾರದ ಐಆರ್‌ಸಿಟಿಸಿ ಪೋರ್ಟಲ್‌ನಲ್ಲಿ ಚಾಟ್‌ಜಿಪಿಟಿ ಮೂಲಕ ರೈಲು ಟಿಕೆಟ್ ಬುಕ್ ಮಾಡಲು ಸಾಧ್ಯವೇ?" ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದರು.
ಆರಂಭದಲ್ಲಿ ಐಆರ್‌ಸಿಟಿಸಿ ಕಟ್ಟುನಿಟ್ಟಾದ ಭದ್ರತೆ ಹೊಂದಿರುವ ಸರ್ಕಾರಿ ವೆಬ್‌ಸೈಟ್ ಆಗಿದ್ದರಿಂದ ಇದು ಸಾಧ್ಯವಿಲ್ಲವೇನೋ ಎಂಬ ಅನುಮಾನ ಯುವಕನಿಗಿತ್ತು. ಆದರೆ, ಇದನ್ನು ಪರೀಕ್ಷಿಸಲು ನಿರ್ಧರಿಸಿದ ಆತ, ಚಾಟ್‌ಜಿಪಿಟಿ ಆಸ್ಟ್ರಾ ಓಪನ್ ಮಾಡಿ, "ನನಗೆ ಸೆಪ್ಟೆಂಬರ್ 20ರಂದು ರಾತ್ರಿ 9 ರಿಂದ 11 ಗಂಟೆಯ ನಡುವೆ ಮುಂಬೈನಿಂದ ರಾಜ್‌ಕೋಟ್‌ಗೆ ಇಬ್ಬರಿಗೆ ಎಸಿ ಕ್ಲಾಸ್‌ನಲ್ಲಿ ರೈಲು ಟಿಕೆಟ್ ಬುಕ್ ಮಾಡಬೇಕು. ಇದಕ್ಕಾಗಿ ಬ್ರೌಸರ್ ಬಳಸಿ" ಎಂದು ಸರಳವಾದ ಪ್ರಾಂಟ್ ನೀಡಿದ್ದಾನೆ.
ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಎಐ ಕಾರ್ಯನಿರ್ವಹಣೆ
ಈ ಸೂಚನೆ ಸಿಕ್ಕ ತಕ್ಷಣವೇ ಎಐ ತನ್ನ ಕೆಲಸವನ್ನ ಆರಂಭಿಸಿದೆ. ಅದು ತನ್ನಷ್ಟಕ್ಕೆ ತಾನೇ ಐಆರ್‌ಸಿಟಿಸಿ ವೆಬ್‌ಸೈಟ್‌ಗೆ ಭೇಟಿ ನೀಡಿ, ಹೊರಡುವ ಮತ್ತು ತಲುಪುವ ನಿಲ್ದಾಣಗಳನ್ನ ಆಯ್ಕೆ ಮಾಡಿದೆ. ಪ್ರಯಾಣದ ದಿನಾಂಕ ಹಾಗೂ ಸಮಯವನ್ನ ನಮೂದಿಸಿ, ಲಭ್ಯವಿರುವ ರೈಲುಗಳ ಪಟ್ಟಿಯನ್ನು ಹುಡುಕಿದೆ.
ಆದರೆ, ಆ ದಿನದ ಎಲ್ಲಾ ಟಿಕೆಟ್‌ಗಳು ವೇಟಿಂಗ್ ಲಿಸ್ಟ್‌ನಲ್ಲಿ ಇರುವುದನ್ನು ಎಐ ಪತ್ತೆಹಚ್ಚಿ, ಯುವಕನಿಗೆ ಈ ಮಾಹಿತಿಯನ್ನ ಸ್ಪಷ್ಟವಾಗಿ ನೀಡಿದೆ. "ಮುಂದೇನು ಮಾಡಬೇಕು?" ಎಂದು ಎಐ ಮರಳಿ ಕೇಳಿದಾಗ, "ಮರುದಿನದ ಟಿಕೆಟ್ ಹುಡುಕು" ಎಂದು ಯುವಕ ಸೂಚಿಸಿದ್ದಾನೆ. ಹೀಗೆ ಯುವಕ ನೀಡಿದ ಸೂಚನೆಗಳ ಆಧಾರದ ಮೇಲೆ, ಎಐ ತನ್ನೆಲ್ಲಾ ಪ್ರಕ್ರಿಯೆಗಳನ್ನ ತಾನೇ ಮುಗಿಸಿ, ಕೇವಲ ಹಣ ಪಾವತಿ ಮಾಡುವ ಹಂತಕ್ಕೆ ತಂದು ನಿಲ್ಲಿಸಿದೆ.
ನೆಟ್ಟಿಗರ ಪ್ರತಿಕ್ರಿಯೆ
ಈ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಎಐ ತಂತ್ರಜ್ಞಾನದ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಭವಿಷ್ಯದಲ್ಲಿ ನಮ್ಮ ದೈನಂದಿನ ಡಿಜಿಟಲ್ ಕೆಲಸಗಳನ್ನ ಎಐ ಸಂಪೂರ್ಣವಾಗಿ ಆವರಿಸಿಕೊಳ್ಳಲಿದೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ವಿಡಿಯೋಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, "ನೀವು ಇದನ್ನು ತತ್ಕಾಲ್ ಸಮಯದಲ್ಲಿ ಪ್ರಯೋಗಿಸಿ ನೋಡಿ. ಕೇವಲ ಒಂದೆರಡು ನಿಮಿಷಗಳಲ್ಲಿ ಟಿಕೆಟ್ ಖಾಲಿಯಾಗುವ ತತ್ಕಾಲ್ ವ್ಯವಸ್ಥೆಯಲ್ಲೂ ಎಐ ಯಶಸ್ವಿಯಾದರೆ, ಅದು ಖಂಡಿತವಾಗಿಯೂ ಭವಿಷ್ಯದಲ್ಲಿ ನಮ್ಮೆಲ್ಲರ ಕೆಲಸಗಳನ್ನ ಕಸಿದುಕೊಳ್ಳುತ್ತದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ," ಎಂದು ತಮಾಷೆಯಾಗಿ ಬರೆದಿದ್ದಾರೆ.
ಮತ್ತೊಬ್ಬರು, "ಇದೇ ಎಐ ಬಳಸಿ ನಿಮ್ಮ ರೆಸ್ಯೂಮ್ ಸಿದ್ಧಪಡಿಸಿ, ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಪರೀಕ್ಷೆ ಮಾಡಿ ನೋಡಿ," ಎಂದು ಸವಾಲು ಹಾಕಿದ್ದಾರೆ. ತಂತ್ರಜ್ಞಾನ ಎಷ್ಟೇ ವೇಗವಾಗಿ ಮುಂದುವರಿದರೂ, ಅದರ ಮಿತಿಗಳ ಬಗ್ಗೆಯೂ ಜನರಿಗೆ ಸ್ಪಷ್ಟ ಅರಿವಿದೆ ಎಂಬುದನ್ನ ಈ ಪ್ರತಿಕ್ರಿಯೆಗಳು ಎತ್ತಿ ತೋರಿಸುತ್ತವೆ. ಭವಿಷ್ಯದಲ್ಲಿ ಈ ಆಟೊಮೇಷನ್ ನಮ್ಮ ಬದುಕನ್ನ ಇನ್ನೆಷ್ಟು ಬದಲಾಯಿಸಲಿದೆ ಕಾದು ನೋಡಬೇಕಷ್ಟೇ.


Click it and Unblock the Notifications
