"ಅಂಗಡಿ ಯಾಕೋ ತೆಗೆದೆ" ಎಂದು ಯುವಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ದೇವನಹಳ್ಳಿ ಇನ್ಸ್‌ಪೆಕ್ಟರ್, ವಿಡಿಯೋ ವೈರಲ್
ಬೆಂಗಳೂರು: ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬದಿಯಿರುವ 'ಹೈವೇ ನೆಸ್ಟ್' ಚಹಾ ಅಂಗಡಿಯ ಯುವಕನ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ತಂಡ ನಡೆಸಿದ ಅಮಾನವೀಯ ಹಲ್ಲೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಾನೂನು ಪರಿಪಾಲನೆ ಮಾಡಬೇಕಾದ ರಕ್ಷಕರೇ ಭಕ್ಷಕರಂತೆ ವರ್ತಿಸಿರುವುದು ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಪ್ರತಿದಿನದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಯುವಕ ಮುಂಜಾನೆ 4 ಗಂಟೆಗೆ ಚಹಾ ಅಂಗಡಿಯನ್ನು ತೆರೆದು ಸಿದ್ಧತೆ ಮಾಡಿಕೊಳ್ಳುತ್ತಿದ್ದನು. ಈ ವೇಳೆ ಸ್ಥಳಕ್ಕೆ ಬಂದ ದೇವನಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ರಾಕೇಶ್ ಹಾಗೂ ಅವರ ತಂಡ, ಇಷ್ಟು ಬೇಗ ಅಂಗಡಿ ಏಕೆ ತೆರೆದಿದ್ದೀಯ ಎಂದು ಪ್ರಶ್ನಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಆ ಯುವಕನನ್ನು ಅಂಗಡಿಯಿಂದ ಹೊರಗೆಳೆದು ತಂದು ಲಾಠಿಯಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಂಗಲಾಚಿದರೂ ಕರಗದ ಮನಸ್ಸು
ಪೊಲೀಸರು ಹಲ್ಲೆ ನಡೆಸುತ್ತಿದ್ದಾಗ ಆ ಯುವಕ, "ನನ್ನ ಹೊಡೆಯಬೇಡಿ ಸರ್, ಇನ್ನು ಮುಂದೆ ಅಂಗಡಿ ತೆರೆಯುವುದಿಲ್ಲ" ಎಂದು ಪದೇ ಪದೇ ಬೇಡಿಕೊಂಡಿದ್ದಾನೆ. ಆದರೂ ಇನ್ಸ್‌ಪೆಕ್ಟರ್ ರಾಕೇಶ್ ಅವರು ಕಿಂಚಿತ್ತೂ ದಯೆ ತೋರದೆ ಆತನ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ಅಲ್ಲಿದ್ದ ಗ್ರಾಹಕರು ಈ ದೃಶ್ಯವನ್ನು ಕಂಡು ಬೆಚ್ಚಿಬಿದ್ದಿದ್ದು, ಪೊಲೀಸರ ಈ ವರ್ತನೆಯನ್ನು ಅಮಾನವೀಯ ಎಂದು ಕರೆದಿದ್ದಾರೆ. ಪೊಲೀಸರ ರಾಕ್ಷಸ ವರ್ತನೆ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹೆದ್ದಾರಿಯಲ್ಲಿ ಸಂಚರಿಸುವ ಚಾಲಕರು ಮತ್ತು ಪ್ರಯಾಣಿಕರಿಗೆ ಮುಂಜಾನೆ ಚಹಾ ಸಿಗುವುದು ಒಂದು ದೊಡ್ಡ ಆಸರೆಯಾಗಿರುತ್ತದೆ. ಅಂತಹ ಕೆಲಸ ಮಾಡುತ್ತಿದ್ದ ಬಡ ಯುವಕನ ಮೇಲೆ ಇಷ್ಟು ಕ್ರೂರವಾಗಿ ಹಲ್ಲೆ ಮಾಡುವ ಅವಶ್ಯಕತೆ ಏನಿತ್ತು? ನಿಯಮ ಮೀರಿದ್ದರೆ ಕಾನೂನು ಕ್ರಮ ಕೈಗೊಳ್ಳಬಹುದಿತ್ತಲ್ಲವೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಈ ಸಂಪೂರ್ಣ ಘಟನೆಯು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಮಾಜದ ರಕ್ಷಣೆ ಮಾಡಬೇಕಾದ ಪೊಲೀಸರೇ ಈ ರೀತಿ ವರ್ತಿಸಿರುವುದು ಕಂಡುಬಂದಿದೆ. ವಿಡಿಯೋದಲ್ಲಿ ಇನ್ಸ್‌ಪೆಕ್ಟರ್ ದರ್ಪ ಎದ್ದು ಕಾಣುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದೆ. ಈ ಘಟನೆಯಿಂದಾಗಿ ಪೊಲೀಸ್ ಇಲಾಖೆಯ ಮೇಲೆ ಜನರಿಗಿದ್ದ ವಿಶ್ವಾಸಕ್ಕೆ ಧಕ್ಕೆ ಉಂಟಾಗಿದೆ. ಅಧಿಕಾರದ ಮದದಲ್ಲಿ ಸಾಮಾನ್ಯ ಜನರ ಮೇಲೆ ದೌರ್ಜನ್ಯ ಎಸಗುವ ಇಂತಹ ಅಧಿಕಾರಿಗಳ ವಿರುದ್ಧ ಹಿರಿಯ ಪೊಲೀಸ್ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಸದ್ಯಕ್ಕೆ ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲವಾದರೂ, ಜನರ ಆಕ್ರೋಶ ಮಾತ್ರ ತಣಿಯುತ್ತಿಲ್ಲ. ಈ ವಿಡಿಯೋವನ್ನು ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಗ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.












Click it and Unblock the Notifications