ರಸ್ತೆ ಖಾಲಿಯಿದ್ರೂ ಫುಟ್‌ಪಾತ್ ಮೇಲೆಯೇ ಸ್ಕೂಟರ್ ರೈಡಿಂಗ್: ಬೆಂಗಳೂರಿನಲ್ಲಿ ಸವಾರನ ಹುಚ್ಚಾಟದ ವಿಡಿಯೋ ವೈರಲ್
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಎನ್ನುವುದು ಪ್ರತಿಯೊಬ್ಬರ ದೈನಂದಿನ ಸಮಸ್ಯೆ. ಟ್ರಾಫಿಕ್‌ನಿಂದ ಪಾರಾಗಲು ವಾಹನ ಸವಾರರು ಫುಟ್‌ಪಾತ್ ಮೇಲೆ ವಾಹನ ಓಡಿಸುವುದು ಹೊಸದೇನಲ್ಲ. ಆದರೆ, ರಸ್ತೆ ಸಂಪೂರ್ಣವಾಗಿ ಖಾಲಿ ಇದ್ದರೂ ವ್ಯಕ್ತಿಯೊಬ್ಬರು ಫುಟ್‌ಪಾತ್ ಮೇಲೆ ವೇಗವಾಗಿ ಸ್ಕೂಟರ್ ಚಲಾಯಿಸಿಕೊಂಡು ಹೋಗಿರುವ ಘಟನೆ ಇದೀಗ ತೀವ್ರ ಚರ್ಚೆಗೆ ಕಾರಣವಾಗ.
ಬೆಂಗಳೂರಿನಲ್ಲಿ ಫುಟ್‌ಪಾತ್ ರೈಡಿಂಗ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಖಾಲಿ ರಸ್ತೆ ಬಿಟ್ಟು ಫುಟ್‌ಪಾತ್ ಏರಿದ ಸವಾರ
ಸನಾತನ ಕರ್ನಾಟಕ ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ, ವಾಹನ ಸವಾರನೊಬ್ಬ ರಸ್ತೆಯ ಬದಿಯಲ್ಲಿರುವ ಫುಟ್‌ಪಾತ್ ಮೇಲೆ ಅತ್ಯಂತ ವೇಗವಾಗಿ ಸ್ಕೂಟರ್ ಓಡಿಸಿಕೊಂಡು ಹೋಗುತ್ತಿರುವುದನ್ನ ಕಾಣಬಹುದು.
ಅಚ್ಚರಿಯ ಸಂಗತಿಯೆಂದರೆ, ಆತನ ಪಕ್ಕದಲ್ಲಿದ್ದ ಮುಖ್ಯ ರಸ್ತೆ ಬಹುತೇಕ ಖಾಲಿಯಾಗಿತ್ತು. ಯಾವುದೇ ವಾಹನ ದಟ್ಟಣೆ ಇಲ್ಲದಿದ್ದರೂ, ಆತ ರಸ್ತೆಯ ಮೇಲೆ ಹೋಗುವ ಬದಲು ಪಾದಚಾರಿಗಳ ಮಾರ್ಗವನ್ನ ಆಯ್ದುಕೊಂಡಿದ್ದಾನೆ. ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮತ್ತೊಬ್ಬರು ಈ ದೃಶ್ಯವನ್ನ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ವಿಡಿಯೋ ರೆಕಾರ್ಡ್ ಮಾಡುತ್ತಿರುವುದನ್ನ ಗಮನಿಸಿದರೂ ಆತ ಸ್ವಲ್ಪವೂ ವಿಚಲಿತನಾಗದೆ, ತನ್ನ ಪಾಡಿಗೆ ತಾನು ಫುಟ್‌ಪಾತ್ ಮೇಲೆಯೇ ಪ್ರಯಾಣ ಮುಂದುವರಿಸಿದ್ದಾನೆ.
ಬಸ್ ನಿಲ್ದಾಣ ಮತ್ತು ಗಿಡಗಳ ನಡುವೆ ಸ್ಕೂಟರ್ ಚಾಲನೆ
ಫುಟ್‌ಪಾತ್ ಮೇಲೆ ಪಾದಚಾರಿಗಳು ಓಡಾಡಲು ಮಾಡಲಾದ ವ್ಯವಸ್ಥೆಯನ್ನ ಈತ ದುರ್ಬಳಕೆ ಮಾಡಿಕೊಂಡಿದ್ದಾನೆ. ದಾರಿಯುದ್ದಕ್ಕೂ ಇರುವ ಗಿಡಗಳು, ಮರಗಳು ಹಾಗೂ ಇತರ ಅಡೆತಡೆಗಳನ್ನ ದಾಟಿಕೊಂಡು ಆತ ವೇಗವಾಗಿ ಸಾಗಿದ್ದಾನೆ.
ಅಷ್ಟೇ ಅಲ್ಲದೆ, ಮಾರ್ಗಮಧ್ಯೆ ಸಿಗುವ ಬಸ್ ನಿಲ್ದಾಣದ ಮೂಲಕವೂ ಆತ ತನ್ನ ಸ್ಕೂಟರ್ ಓಡಿಸಿಕೊಂಡು ಹೋಗಿದ್ದಾನೆ. ಇಷ್ಟೆಲ್ಲಾ ಸರ್ಕಸ್ ಮಾಡುವ ಬದಲು ಪಕ್ಕದಲ್ಲೇ ಇದ್ದ ಖಾಲಿ ರಸ್ತೆಗೆ ಸ್ಕೂಟರ್ ಇಳಿಸಿದ್ದರೆ ಆತನಿಗೆ ಯಾವುದೇ ಅಡ್ಡಿ ಇರುತ್ತಿರಲಿಲ್ಲ. ಆದರೆ, ಆತನ ಈ ಹುಚ್ಚಾಟದ ವರ್ತನೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಪಾದಚಾರಿಗಳ ಸುರಕ್ಷತೆ ಮತ್ತು ಟ್ರಾಫಿಕ್ ರೂಲ್ಸ್ ಉಲ್ಲಂಘನೆ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಬೆಂಗಳೂರು ಟ್ರಾಫಿಕ್ ಪೊಲೀಸರನ್ನ ಟ್ಯಾಗ್ ಮಾಡಿರುವ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ರಸ್ತೆ ಸಂಪೂರ್ಣವಾಗಿ ಖಾಲಿ ಇದ್ದಾಗಲೂ ಫುಟ್‌ಪಾತ್ ಮೇಲೆ ವಾಹನ ಓಡಿಸುವ ಅಗತ್ಯವೇನಿದೆ? ಇದರಿಂದ ಪಾದಚಾರಿಗಳ ಜೀವಕ್ಕೆ ಅಪಾಯವಿಲ್ಲವೇ?" ಎಂದು ಅನೇಕರು ಪ್ರಶ್ನಿಸಿದ್ದಾರೆ.
Why the obsession with riding on the footpath even when the road is empty? Reckless riding on footpaths is dangerous and puts pedestrians at risk. This is about civic sense, responsibility and public safety.📍 NGEF SignalKA03KY1913 Kindly take necessary action. @blrcitytraffic
— ಸನಾತನ (सनातन) (@sanatan_kannada) October 5, 2026
ನಾಗರಿಕ ಪ್ರಜ್ಞೆ ಇಲ್ಲದ ಇಂತಹ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಫುಟ್‌ಪಾತ್‌ಗಳು ಇರುವುದು ಪಾದಚಾರಿಗಳು ಮತ್ತು ಶಾಲಾ ಮಕ್ಕಳು ಸುರಕ್ಷಿತವಾಗಿ ನಡೆದುಕೊಂಡು ಹೋಗಲು. ಆದರೆ ಹೀಗೆ ಬೇಕಾಬಿಟ್ಟಿಯಾಗಿ ವಾಹನ ಓಡಿಸುವುದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
ಡೆಲಿವರಿ ಬಾಯ್ಸ್ ಮತ್ತು ಸಾರ್ವಜನಿಕರ ಆಕ್ರೋಶ
ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದ್ದು, ಕೆಲವರು ಇದು ಕೇವಲ ಒಬ್ಬ ವ್ಯಕ್ತಿಯ ಸಮಸ್ಯೆಯಲ್ಲ, ಬದಲಿಗೆ ಇಡೀ ವ್ಯವಸ್ಥೆಯ ಸಮಸ್ಯೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಕೆಲ ಡೆಲಿವರಿ ಏಜೆಂಟ್‌ಗಳು ಸಮಯ ಉಳಿಸುವ ಭರದಲ್ಲಿ ಫುಟ್‌ಪಾತ್ ಮೇಲೆ ಹಾಗೂ ಒನ್-ವೇ ಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ ಎಂದು ಆರೋಪಿಸಿದ್ದಾರೆ.
ಇಂತಹ ವರ್ತನೆಗಳನ್ನು ಆರಂಭದಲ್ಲೇ ತಡೆಗಟ್ಟದಿದ್ದರೆ, ಮುಂದೆ ಇದು ಎಲ್ಲರಿಗೂ ಅಭ್ಯಾಸವಾಗಿ ಬದಲಾಗಿಬಿಡುತ್ತದೆ ಎಂದು ಎಚ್ಚರಿಸಿದ್ದಾರೆ. ಪೊಲೀಸರು ಕಟ್ಟುನಿಟ್ಟಿನ ದಂಡ ವಿಧಿಸುವ ಮೂಲಕ ಇಂತಹ ಹುಚ್ಚಾಟಗಳಿಗೆ ಬ್ರೇಕ್ ಹಾಕಬೇಕು ಎಂಬ ಕೂಗು ಕೇಳಿಬಂದಿದೆ.


Click it and Unblock the Notifications
