ಕೊಳೆತ ಆಹಾರ, ನೈರ್ಮಲ್ಯವಿಲ್ಲದ ಹೊಟೇಲ್ ಗಲಾಟೆ ನಡುವೆ ತಮ್ಮ ಹೊಟೇಲ್ ಸ್ವಚ್ಛತೆ ಬಗ್ಗೆ ವೀಡಿಯೋ ಪೋಸ್ಟ್ ಮಾಡಿದ ವಿದ್ಯಾರ್ಥಿ ಭವನ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇತ್ತೀಚೆಗೆ ಹೋಟೆಲ್‌ಗಳ ನೈರ್ಮಲ್ಯದ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಆಹಾರ ಸುರಕ್ಷತಾ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದಾಗ ಪ್ರತಿಷ್ಠಿತ ಹೋಟೆಲ್‌ಗಳ ಅಡುಗೆಮನೆಗಳಲ್ಲಿ ಕೊಳೆತ ಆಹಾರ, ಅವಧಿ ಮುಗಿದ ಮಾಂಸ ಹಾಗೂ ನೈರ್ಮಲ್ಯದ ಕೊರತೆ ಕಂಡುಬಂದಿದ್ದು ಗ್ರಾಹಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ನಾವು ಹಣ ಕೊಟ್ಟು ತಿನ್ನುವ ಆಹಾರ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಪ್ರತಿಯೊಬ್ಬರಲ್ಲೂ ಮೂಡಿದೆ. ಈ ಎಲ್ಲಾ ಗಲಾಟೆ ಹಾಗೂ ನೆಗಿಟಿವ್‌ ಸುದ್ದಿಗಳ ನಡುವೆ, ಬೆಂಗಳೂರಿನ ಬಸವನಗುಡಿಯಲ್ಲಿರುವ ಐತಿಹಾಸಿಕ ಹಾಗೂ ಪ್ರತಿಷ್ಠಿತ ವಿದ್ಯಾರ್ಥಿ ಭವನ ಹೋಟೆಲ್ ತನ್ನ ಸ್ವಚ್ಛತೆಯ ವಿಡಿಯೋವೊಂದನ್ನ ಹಂಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದ್ದು, ಇತರ ಹೋಟೆಲ್‌ಗಳಿಗೆ ಮಾದರಿಯಾಗಿ ನಿಂತಿದೆ.

Vidyarthi Bhavan Bengaluru Shares Deep Cleaning Video Amid Bad Hotel Food Hygiene Controversies

ಗ್ರಾಹಕರಿಗೆ ಭರವಸೆ ಮೂಡಿಸಿದ ವೀಡಿಯೋ

ಹೋಟೆಲ್‌ಗಳು ಕ್ಲೀನ್‌ ಇಲ್ಲ ಎನ್ನುವ ಆರೋಪಗಳು ಹೆಚ್ಚಾಗಿ ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ, ವಿದ್ಯಾರ್ಥಿ ಭವನ ತನ್ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಅಡುಗೆಮನೆಯನ್ನ ಹೇಗೆ ನೀಟ್‌ ಆಗಿ ಸ್ವಚ್ಛಗೊಳಿಸಲಾಗುತ್ತದೆ ಎನ್ನುವ ವೀಡಿಯೋವನ್ನ ಪೋಸ್ಟ್ ಮಾಡಿದೆ.

"ಪ್ರತಿ ಪ್ಲೇಟ್‌ನ ಹಿಂದಿರುವ ಕಾಳಜಿ ಇದು" ಎಂಬ ಕ್ಯಾಪ್ಷನ್‌ನೊಂದಿಗೆ ಹಂಚಿಕೊಳ್ಳಲಾಗಿರುವ ಈ ವೀಡಿಯೋ, ಗ್ರಾಹಕರಲ್ಲಿ ವಿದ್ಯಾರ್ಥಿ ಭವನದ ಮೇಲಿನ ನಂಬಿಕೆಯನ್ನ ಮತ್ತಷ್ಟು ಹೆಚ್ಚಿಸಿದೆ. ಕೇವಲ ರುಚಿಯಾದ ದೋಸೆ ನೀಡುವುದಷ್ಟೇ ಅಲ್ಲ, ಆ ದೋಸೆ ತಯಾರಾಗುವ ಜಾಗ ಎಷ್ಟು ಶುಚಿಯಾಗಿರುತ್ತದೆ ಎನ್ನುವುದನ್ನ ಈ ವೀಡಿಯೋ ಮೂಲಕ ತಿಳಿಸಲಾಗಿದೆ.

1943ರಿಂದಲೂ ನಡೆದುಕೊಂಡು ಬಂದ ವಿದ್ಯಾರ್ಥಿ ಭವನ

ವಿದ್ಯಾರ್ಥಿ ಭವನಕ್ಕೆ ಪ್ರತಿ ಶುಕ್ರವಾರ ರಜೆ ಇರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ರಜೆಯ ಹಿಂದೆ ದೊಡ್ಡ ಇತಿಹಾಸವೇ ಇದೆ. ಆದರೆ, ಈ ರಜೆಗೂ ಮುನ್ನ ಬರುವ ಗುರುವಾರದ ರಾತ್ರಿ ಹೋಟೆಲ್‌ನಲ್ಲಿ ಬಿಡುವಿಲ್ಲದ ಚಟುವಟಿಕೆಗಳು ನಡೆಯುತ್ತವೆ. ಹೋಟೆಲ್‌ನ ಇಡೀ ಸಿಬ್ಬಂದಿ ವರ್ಗ ಒಟ್ಟಾಗಿ ಸೇರಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಗುರುವಾರ ರಾತ್ರಿ ಅಡುಗೆಮನೆ, ಅಲ್ಲಿ ಬಳಸುವ ಪ್ರತಿಯೊಂದು ಉಪಕರಣಗಳನ್ನ ಅತ್ಯಂತ ಕ್ಲೀನ್‌ ಮತ್ತು ನೀಟ್‌ ಆಗಿ ತೊಳೆಯಲಾಗುತ್ತದೆ. ನೆಲ ಮತ್ತು ಗೋಡೆಗಳನ್ನ ಸಹ ತೊಳೆದು ಶುಚಿಗೊಳಿಸಲಾಗುತ್ತದೆ.

ಅಷ್ಟೇ ಅಲ್ಲ, ತಲೆಮಾರುಗಳ ನೆನಪುಗಳ ಸಾಕ್ಷಿಯಾಗಿ ಹೋಟೆಲ್‌ನ ಗೋಡೆಗಳ ಮೇಲೆ ರಾರಾಜಿಸುತ್ತಿರುವ ಹಳೆಯ ಛಾಯಾಚಿತ್ರಗಳನ್ನೂ ಸಹ ಸಿಬ್ಬಂದಿಗಳು ಅತ್ಯಂತ ಜೋಪಾನವಾಗಿ ಒರೆಸಿ, ಶುಚಿಗೊಳಿಸುತ್ತಾರೆ. ಪ್ರತಿಯೊಂದು ಮೂಲೆಯನ್ನೂ ಅಷ್ಟೇ ಕಾಳಜಿಯಿಂದ ಸ್ವಚ್ಛಗೊಳಿಸುವ ಮೂಲಕ ಮುಂದಿನ ವಾರ ಗ್ರಾಹಕರನ್ನ ಸ್ವಾಗತಿಸಲು ಸಜ್ಜಾಗುತ್ತಾರೆ.

ಇತರರಿಗೆ ಮಾದರಿಯಾಯ್ತು ವಿದ್ಯಾರ್ಥಿ ಭವನ

ಇಂದು ಲಾಭದ ದೃಷ್ಟಿಯಿಂದ ಹೋಟೆಲ್ ನಡೆಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಫ್ರಿಡ್ಜ್‌ಗಳಲ್ಲಿ ವಾರಗಟ್ಟಲೆ ಹಳಸಿದ ಆಹಾರ ಇಟ್ಟು, ಅದನ್ನೇ ಬಿಸಿ ಮಾಡಿ ಗ್ರಾಹಕರಿಗೆ ಬಡಿಸುವ ಹೋಟೆಲ್‌ಗಳ ನಡುವೆ ವಿದ್ಯಾರ್ಥಿ ಭವನ ತನ್ನ ಮೌಲ್ಯವನ್ನ ಇಲ್ಲಿಯವರೆಗೆ ಬಿಟ್ಟುಕೊಟ್ಟಿಲ್ಲ.

ವೀಡಿಯೋದಲ್ಲಿ ಹೇಳಿರುವಂತೆ, "ವಿದ್ಯಾರ್ಥಿ ಭವನದಲ್ಲಿ ಪರಂಪರೆಯನ್ನ ಉಳಿಸುವುದೆಂದರೆ ಕೇವಲ ಸಂಪ್ರದಾಯಗಳನ್ನ ಮುಂದುವರಿಸಿಕೊಂಡು ಹೋಗುವುದಲ್ಲ. ಬದಲಾಗಿ, ಈ ತಾಣವನ್ನ, ಇಲ್ಲಿ ಹಗಲಿರುಳು ದುಡಿಯುವ ಜನರನ್ನ ಮತ್ತು 1943ರಿಂದಲೂ ನಮ್ಮ ಪರಂಪರೆಯನ್ನ ಜೀವಂತವಾಗಿರಿಸಿರುವ ಮೌಲ್ಯಗಳನ್ನ ಕಾಳಜಿಯಿಂದ ಕಾಪಾಡುವುದು" ಎಂಬ ಮಾತು ಪ್ರತಿಯೊಬ್ಬರಿಗೂ ಇಷ್ಟವಾಗಿದೆ.

ಒಟ್ಟಾರೆಯಾಗಿ, ಗ್ರಾಹಕರ ಆರೋಗ್ಯದ ಜೊತೆ ಚೆಲ್ಲಾಟವಾಡುವ ಹೋಟೆಲ್ ಮಾಲೀಕರು, ವಿದ್ಯಾರ್ಥಿ ಭವನದ ಈ ಕಾರ್ಯವೈಖರಿಯನ್ನ ನೋಡಿ ಕಲಿಯಬೇಕಾದದ್ದು ಬಹಳಷ್ಟಿದೆ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದರೆ, ಗ್ರಾಹಕರ ಪ್ರೀತಿ ಹಾಗೂ ವಿಶ್ವಾಸ ತಾನಾಗಿಯೇ ಒಲಿಯುತ್ತದೆ ಎನ್ನುವುದಕ್ಕೆ ವಿದ್ಯಾರ್ಥಿ ಭವನವೇ ಒಳ್ಳೇಯ ಉದಾಹರಣೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+