ಅಮ್ಮನಿಗಾಗಿ ಐಟಿ ಕೆಲಸ ಬಿಟ್ಟು ಆಟೋ ಡ್ರೈವರ್ ಆದ ಮಹಿಳೆ; ಈ ನಿರ್ಧಾರದಿಂದಲೇ ಎಲ್ಲರ ಫೇವರಿಟ್
ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ, ಕೈ ತುಂಬಾ ಸಂಬಳ ಇಷ್ಟಿದ್ದರೆ ಸಾಕು ಬದುಕು ಬಹಳ ಆರಾಮ ಅನ್ನುವವರೇ ಹೆಚ್ಚು. ದೂರದ ಬೆಟ್ಟ ನುಣ್ಣಗೆ ಅಂತಾರಲ್ಲ, ಹಾಗೆ ಕಾರ್ಪೋರೇಟ್ ಲೈಫ್ ಕೂಡಾ ಅಂದುಕೊಂಡಷ್ಟು ಸಲೀಸು ಅಲ್ಲ. ಯಾಕಂದ್ರೆ ಹಣವೇ ಎಲ್ಲಾ ಅಲ್ಲ, ದುಡ್ಡನ್ನು ಮೀರಿದ ಒಂದು ಪ್ರಪಂಚ ಇದೆ. ಹಾಗಾಗಿಯೇ ಈ ಮಹಿಳೆ ಕೈ ತುಂಬಾ ಸಂಬಳ ಕೊಡ್ತಾ ಇದ್ದ ಕೆಲಸ ಬಿಟ್ಟು ರಿಕ್ಷಾ ಬಿಡಲು ಶುರು ಮಾಡಿದ್ದು.
ಐಟಿ ಕೆಲಸ ಬಿಟ್ಟು ಆಟೋ ಏರಿದ ಮಹಿಳೆ
ಬೆಂಗಳೂರಿನಲ್ಲಿ ಆಟೋ ಡ್ರೈವರ್ ಆಗಿ ದುಡಿತಾ ಇರೋ ತನ್ವಿ ಈಗ ಎಲ್ಲರ ಫೇವರಿಟ್. ಇವರಿಗೆ ಐಟಿ ಕಂಪನಿಐಲ್ಲಿ ಕೆಲಸ ಇತ್ತು. ಅಲ್ಲಿ ಶಿಫ್ಟ್‌ನಲ್ಲಿ ಕೆಲಸ ಮಾಡಬೇಕಿತ್ತು. ಮೊದಲು ಇವರಿಗೆ ಶಿಫ್ಟ್ ಮಾಡೋದು ಸಮಸ್ಯೆ ಆಗಿರಲಿಲ್ಲ. ಆದ್ರೆ ತಂದೆ ತೀರಿಕೊಂಡ ನಂತರ ನೈಟ್ ಮಾಡುವುದು ಕಷ್ಟ ಅನ್ನಿಸುತ್ತದೆ. ಮನೆಯಲ್ಲಿ ಅಮ್ಮ ಒಬ್ಬರೇ ಆಗ್ತಾರೆ. ಅಮ್ಮನ ಜೊತೆ ಯಾರಾದರೂ ಇರಬೇಕು. ಗಂಡನನ್ನು ಕಳೆದುಕೊಂಡ ನೋವಿನಲ್ಲಿರುವ ಅಮ್ಮನನ್ನು ಒಬ್ಬಳನ್ನೇ ಬಿಟ್ಟು ನೈಟ್ ಶಿಫ್ಟ್ ಮಾಡೋದಕ್ಕೆ ಇವರಿಗೆ ಮನಸ್ಸಾಗುವುದಿಲ್ಲ. ಹಾಗಾಗಿ ಇವರ ಮುಂದೆ ಇದ್ದದ್ದು ಒಂದೇ ದಾರಿ ಕೆಲಸ ಬಿಡುವುದು. ಅಮ್ಮಾನಾ, ಕೆಲಸವಾ ಅಂತ ಬಂದಾಗ ಇವರ ಆಯ್ಕೆ ಅಮ್ಮನೇ ಆಗಿತ್ತು. ಹಾಗಾಗಿ ಒಂದು ಕ್ಷಣವೂ ಯೋಚಿಸದೆ ಕೆಲಸಕ್ಕೆ ರಾಜೀನಾಮೆ ಕೊಡ್ತಾರೆ.

ಬದುಕಿನ ದಾರಿಗೊಂದು ಗಟ್ಟಿ ನಿರ್ಧಾರ
ಕೆಲಸ ಬಿಟ್ಟಾಯ್ತು, ಮುಂದೆ ಬದುಕಿಗೊಂದು ದಾರಿ ಬೇಕಲ್ಲ, ಕೆಲಸ ಬಿಟ್ಟ ತಕ್ಷಣ ಬೇರೆ ಕಡೆ ಕೆಲಸ ಸಿಗೋದಿಲ್ಲ. ಹಾಗಂತ ಸುಮ್ಮನೆ ಕೂರುವುದಕ್ಕೆ ಆಗಲ್ಲ. ಆಗ ಅವರಿಗೆ ಹೊಳೆದ್ದದ್ದೇ ಆಟೋ ಡ್ರೈವರ್ ಕೆಲಸ ಮಾಡಿದರೆ ಹೇಗೆ ಅನ್ನೋದು. ಐಟಿ ಕೆಲಸ ಬಿಟ್ಟು ಆಟೋ ಓಡಿಸೋದಾ? ನೋಡಿದವರು ಏನಾದರೂ ಹೇಳಿದರೆ? ಅನ್ನೋ ಯೋಚನೆ ಅವರ ಮನಸ್ಸಿಗೂ ಬಂದಿತ್ತು.ಆದರೆ ನನ್ನ ಜೀವನ ನನ್ನ ಆಯ್ಕೆ ಅಂತ ಗಟ್ಟಿ ನಿರ್ಧಾರ ಮಾಡ್ತಾರೆ. ಜೀವನದ ಜವಾಬ್ದಾರಿ ಹೊತ್ತುಕೊಂಡು ಆಟೋ ಏರ್ತಾರೆ. ನಾನು ಜೀವನದಲ್ಲಿ ಏನು ಮಾಡಬೇಕು ಎನ್ನುವ ನಿರ್ಧಾರ ನನ್ನದಾಗಿರಬೇಕೇ ಹೊರತು ಸಮಾಜದ್ದಲ್ಲ ಎನ್ನುವುದು ಅವರ ವಾದ.
ಮಹಿಳೆಯರು ಮುಂದೆ ಬರಬೇಕು, ಧೈರ್ಯ ಮಾಡಬೇಕು ಅಂತ ಎಲ್ಲರೂ ಹೇಳತಾರೆ. ಧೈರ್ಯ ಅಂದರೆ ಯಾವುದೋ ಅಸಾಧಾರಣ ಕೆಲಸಕ್ಕೆ ಕೈ ಹಾಕೋದಲ್ಲ, ಬದಲಾಗಿ ನನಗೆ ಏನು ಬೇಕೋ ಅದನ್ನು ಆರಿಸಿಕೊಂಡು ಹಾಗೆಯೇ ನನ್ನಿಷ್ಟ ರೀತಿಯಲ್ಲಿ ಬದುಕುವುದು ಎನ್ನುತ್ತಾರೆ.
ಐಟಿ ಕೆಲಸಕ್ಕಿಂತ ಹೆಚ್ಚು ಆದಾಯ
ಇನ್ನು ಆಟೋ ಓಡಿಸೋದು ಅಂದ ತಕ್ಷಣ ಮುಖ ಸಪ್ಪೆ ಮಾಡುವ ಅಗತ್ಯವಿಲ್ಲ. ಈ ಕೆಲಸ ಕೆಟ್ಟದ್ದಲ್ಲ. ಐಟಿ ಕೆಲಸಕ್ಕಿಂತ ಹೆಚ್ಚಿನ ಸಂಬಳ ಇಲ್ಲಿ ಸಿಗುತ್ತದೆ ಅಂತ ತನ್ನ ಹೊಸ ಕೆಲಸದ ಅನುಭವವನ್ನು ಕೂಡಾ ಅವರು ಶೇರ್ ಮಾಡುತ್ತಾರೆ. ಇವರ ನಿರ್ಧಾರ ಆರಂಭದಲ್ಲಿ ಮನೆಯವರಿಗೆ ಇಷ್ಟವಾಗೋದಿಲ್ಲ. ಮೊದಲಿಗೆ ಎಲ್ಲರೂ ಇದನ್ನ ವಿರೋಧ ಮಾಡ್ತಾರೆ. ಆದರೆ ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದಾದ ಮೇಲೆ ಎಲ್ಲಾ ಸುಮ್ಮನಾಗುತ್ತಾರೆಯಂತೆ. ಇನ್ನು ಅವರ ಪ್ಯಾಸೆಂಜರ್ ಕೂಡಾ ಇವರನ್ನು ನೋಡಿ ಆಶ್ಚರ್ಯ ಪಡುತ್ತಾರಂತೆ. ನೀವು ಇಷ್ಟು ಚಂದ ಇಂಗ್ಲೀಷ್ ಮಾತಾಡ್ತೀರಾ? ಮತ್ಯಾಕೆ ಆಟೋ ಅನ್ನೋ ಪ್ರಶ್ನೆ ಇವರಿಗೆ ದಿನಕ್ಕೆ ಒಮ್ಮೆ ಆದರೂ ಎದುರಾಗ್ತದೆಯಂತೆ.
ಹಾಗಾದ್ರೆ ಇವರಿನ್ನು ಜೀವನ ಪೂರ್ತಿ ಆಟೋ ಡ್ರೈವರ್ ಆಗಿಯೇ ಇರ್ತಾರಾ? ಇಲ್ಲ ಒಂದು ವೇಳೆ ಮಾರ್ನಿಂಗ್ ಶಿಫ್ಟ್ ಮಾತ್ರ ಇರೋ ಕೆಲಸ ಸಿಕ್ಕಿದ್ರೆ ಖಂಡಿತಾ ಹೋಗ್ತಾರಂತೆ.
ಸೋಶಿಯಲ್ ಮಿಡಿಯಾದಲ್ಲಿ ಜನ ಹೇಳಿದ್ದೇನು?
ಇವರ ಈ ನಿರ್ಧಾರಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಜನ ಬೆಂಬಲ ಕೊಟ್ಟಿದ್ದಾರೆ. ಇದು ತುಂಬಾ ಸ್ಪೂರ್ತಿದಾಯಕ ಕತೆ. ಅವರಂತೆ ಸಾಧಾರಣವಾಗಿರುವುದು ನನಗೂ ಇಷ್ಟ ಎಂದು ಹೇಳಿದ್ದಾರೆ.
ಈ ಪೋಸ್ಟ್‌ಗೆ ರಿಯಾಕ್ಟ್ ಮಾಡಿರುವ ಇನ್ನೊಬ್ಬರು ಅವರ ಬಗ್ಗೆ ಹೆಮ್ಮೆಯಿದೆ, ಅವಳ ಸ್ಪೂರ್ತಿದಾಯಕ ಪ್ರಯಾಣವನ್ನು ಶೇರ್ ಮಾಡಿದ್ದಕ್ಕಾಗಿ ಧನ್ಯವಾದ ಎಂದು ಕಾಮೆಂಟ್ ಮಾಡಿದ್ದಾರೆ. ತನ್ನ ತಾಯಿಯನ್ನು ಒಂಟಿಯಾಗಿ ಬಿಡಲು ಬಯಸುವುದಿಲ್ಲ ಎಂದು ಹೇಳಿದ ರೀತಿ ಇಷ್ಟವಾಯಿತು. ಎಂದು ಮತ್ತೊಬ್ಬರು ಹೇಳಿದ್ಧಾರೆ.


Click it and Unblock the Notifications
